ಬಳ್ಳಾರಿ: ವಿದ್ಯಾರ್ಥಿ ಜೀವನದಲ್ಲಿ ಎಸ್ಎಸ್ಎಲ್‌ಸಿ ಎಂಬುದು ಅತ್ಯಂತ ಪ್ರಮುಖ ಘಟ್ಟ. ಇಲ್ಲಿ ಗಳಿಸಿದ ಅಂಕಗಳೇ ಉದ್ಯೋಗ ಮತ್ತು ಭವಿಷ್ಯದ ಶಿಕ್ಷಣದ ಅಳತೆಗೋಲು. ಇಂತಹ ಪರೀಕ್ಷೆಯನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಮಾರ್ಗದರ್ಶನ ಮಾಡುವ ಮಹತ್ವದ ಕಾರ್ಯಾಗಾರವೊಂದು (SSLC Workshop) ಬೇಳ್ಳಗುರ್ಕಿಯಲ್ಲಿ ನಡೆಯಿತು. ಶಿಕ್ಷಣ ಇಲಾಖೆ, ಪಿಡಿ ಹಳ್ಳಿ ಠಾಣೆ, ಸನ್ಮಾರ್ಗ ಗೆಳೆಯರ ಬಳಗವು ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಈ ಪೂರ್ವ ಸಿದ್ಧತಾ ಕಾರ್ಯಾಗಾರವನ್ನು ಆಯೋಜಿಸಿತ್ತು.
ಕಾರ್ಯಾಗಾರದಲ್ಲಿ ವಿಷಯ ತಜ್ಞರು ಪ್ರಥಮ ಬಾರಿಗೆ ಪಬ್ಲಿಕ್ ಪರೀಕ್ಷೆ ಎದುರಿಸುವ ವಿಧಾನ, ಗಣಿತ, ಇಂಗ್ಲಿಷ್, ವಿಜ್ಞಾನ ಮತ್ತು ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಗಳ ಬಗ್ಗೆ ಮಾಹಿತಿ ನೀಡಿದರು. ವಿಷಯವಾರು ಜಟಿಲವಾದ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಹೇಗೆ ಬರೆಯಬೇಕು ಎಂಬಿತ್ಯಾದಿ ವಿಷಯವನ್ನು ನಾಲ್ಕು ಗಂಟೆಗಳ ನಡೆದ ಕಾರ್ಯಾಗಾರದಲ್ಲಿ ತಿಳಿಸಿ ಕೊಡಲಾಯಿತು.
500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ
ಕಾರ್ಯಾಗಾರದಲ್ಲಿ ಚೇಳ್ಳಗುರ್ಕಿ, ಶಿಡಿಗಿನಮೊಳ, ರೂಪನಗುಡಿ, ಹಗರಿ ಫಾರ್ಮ್, ಕೆ.ವೀರಾಪುರ ಗ್ರಾಮದಿಂದ ಸರಕಾರಿ ಶಾಲೆಯ 500ಕ್ಕೂ ಹೆಚ್ಚು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕರಾದ ಎರ‍್ರಿ ಸ್ವಾಮಿ, ಪುರುಷೋತ್ತಮ, ಸಿದ್ಧಲಿಂಗೇಶ್ವರ ಗದಿನ್, ಹರಿಪ್ರಸಾದ ಅವರು ವಿದ್ಯಾರ್ಥಿಗಳಿಗೆ ಪರೀಕ್ಷೆ ವಿಧಾನ ಮತ್ತು ವಿಷಯವಾರು ಮಾಹಿತಿಯನ್ನು ತಿಳಿಸಿಕೊಟ್ಟರು.
ಹೆಚ್ಚು ಅಂಕ ಗಳಿಸಲು ಕಾರ್ಯಾಗಾರ ಸಹಕಾರಿ
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಿವೈಎಸ್ಪಿ ಸತ್ಯನಾರಾಯಣ ಅವರು, ಇಂತಹ ಕಾರ್ಯಾಗಾರವು ಎಸ್ಎಸ್ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಗಳಿಸಲು ಸಹಕಾರಿಯಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಡಿಡಿಪಿಐ ಅಂದಾನಪ್ಪ, ಬಿಇಓ ಕೆಂಪಯ್ಯ, ಪಿಎಸ್ ಐ ಶಶಿಧರ್ ತಿಮ್ಮಪ್ಪ, ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ್ ಆಚಾರಿ, ಹನುಮಂತ ರೆಡ್ಡಿ, ಎರ‍್ರಿ ಸ್ವಾಮಿ ಟ್ರಸ್ಟ್ ಕಮಿಟಿಯ ಅಧ್ಯಕ್ಷ ಬಾಳನಗೌಡ, ಎರ‍್ರಿ ಸ್ವಾಮಿ ದಾಸೋಹ ಸೇವಾ ಸಂಘದ ಅಧ್ಯಕ್ಷ ಕೆ. ಪಂಪನಗೌಡ ಉಪಸ್ಥಿತರಿದ್ದರು. ದೇವಸ್ಥಾನದ ದಾಸೋಹ ಸೇವಾ ಸಂಘ ಊಟದ ವ್ಯವಸ್ಥೆ ಮಾಡಿತ್ತು. ವಿದ್ಯಾರ್ಥಿಗಳ ಏಳಿಗೆಗೆ ಪೂರಕವಾಗಿ ಏರ್ಪಡಿಸಿದ್ದ ಕಾರ್ಯಾಗಾರ ಮತ್ತು ಆಯೋಜಕರ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು.
ʻʻಕಾರ್ಯಾಗಾರದಿಂದ ನಮಗೆ ತುಂಬಾ ಅನುಕೂಲವಾಗಿದೆ. ಪರೀಕ್ಷೆ ಎದುರಿಸುವುದು ಹೇಗೆ, ಗಣಿತ, ಇಂಗ್ಲೀಷ್, ವಿಜ್ಞಾನ ವಿಷಯದ ಕಷ್ಟಕರವಾದ ಮಾಹಿತಿಯನ್ನು ಹೇಗೆ ತಿಳಿದುಕೊಳ್ಳಬೇಕೆಂದು ತಿಳಿಸಿಕೊಟ್ಟರು. ಇದು ನಮ್ಮ ಪರೀಕ್ಷೆಗೆ ತುಂಬಾ ಸಹಕಾರಿಯಾಗಿದೆʼʼ ಎಂದು ಹೇಳಿದರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಸೃಜನಾ ಮತ್ತು ಮುಕ್ತಾ.
ಇದನ್ನೂ ಓದಿ | Exam Warriors Book: ಮೋದಿ ಬರೆದ ಎಕ್ಸಾಂ ವಾರಿಯರ್ಸ್ ಪರಿಷ್ಕೃತ ಪುಸ್ತಕ ಕನ್ನಡ ಸೇರಿ 13 ಭಾಷೆಯಲ್ಲಿ ಲಭ್ಯ