ಬೆಂಗಳೂರು: ನಗರದ ಕೋರಮಂಗಲದಲ್ಲಿರುವ ಪ್ರತಿಷ್ಠಿತ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ (St Johns Hospital) ಆವರಣದಲ್ಲಿ ವನ್ಯಜೀವಿಗಳು ಪತ್ತೆ ಆಗಿವೆ. ಸುಮಾರು 50ಕ್ಕೂ ಹೆಚ್ಚು ಜಿಂಕೆಗಳನ್ನು ಅಕ್ರಮವಾಗಿ ಸೆರೆ ಹಿಡಿದಿಟ್ಟುಕೊಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.
ಈ ಹಿನ್ನೆಲೆಯಲ್ಲಿ ಶನಿವಾರ ಆಸ್ಪತ್ರೆಗೆ ವಲಯ ಅರಣ್ಯಾಧಿಕಾರಿ ಶಿವರಾತ್ರೀಶ್ವರ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅನುಮತಿ ನೀಡಿದ್ದಕ್ಕಿಂತ ಹೆಚ್ಚಾಗಿ ವನ್ಯಜೀವಿಗಳು ಇರುವುದು ಪತ್ತೆ ಆಗಿತ್ತು. ಈ ಸಂಬಂಧ ಪ್ರತಿಕ್ರಿಯಿಸಿದ ಶಿವರಾತ್ರೀಶ್ವರ, ಪ್ರಾಥಮಿಕ ಹಂತದಲ್ಲಿ ನೋಡುವುದಾದರೆ ಜಿಂಕೆಗಳು ಸ್ವಲ್ಪ ಕೃಶವಾಗಿವೆ. ಆಸ್ಪತ್ರೆಯಲ್ಲಿ ಒಟ್ಟು 55 ಜಿಂಕೆಗಳು ಇದ್ದು, ವಾಸ ಮಾಡಲು ಬೇಕಾದ ಜಾಗ ಸಹ ಇಲ್ಲ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯವರಿಗೆ ಮೊದಲು 6 ಜಿಂಕೆಗಷ್ಟೇ ಅನುಮತಿ ನೀಡಲಾಗಿತ್ತು. ಆದರೆ ಈಗ ಜಿಂಕೆಗಳ ಸಂಖ್ಯೆ ಹೆಚ್ಚಾಗಿದ್ದು, ಇವುಗಳನ್ನು ಕೂಡಲೆ ಇಲ್ಲಿಂದ ಸ್ಥಳಾಂತರ ಮಾಡುತ್ತೇವೆ. ಈ ಸಂಬಂಧ ಮೇಲಧಿಕಾರಿಗಳಿಗೆ ವರದಿ ಸಲ್ಲಿಸುತ್ತೇವೆ, ಇಲ್ಲಿರುವ ಜಿಂಕೆಗಳನ್ನು ಸೂಕ್ತವಾಗಿ ನಿರ್ವಹಣೆ ಮಾಡಿಲ್ಲ ಎಂಬುದು ಕಂಡು ಬರುತ್ತಿದೆ. ಜಿಂಕೆಗಳ ಸೆರೆ ವಾಸಕ್ಕೆ ಶೀಘ್ರದಲ್ಲೇ ಅಂತ್ಯ ಹಾಡುತ್ತೇವೆ ಎಂದಿದ್ದಾರೆ.
ಈ ವಿವಾದದ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಸ್ಪಷ್ಟೀಕರಣ ನೀಡಿದ್ದಾರೆ. ರೋಗಿಗಳು ಬೇಗ ಗುಣಮುಖರಾಗಲು ಈ ರೀತಿ ಜಿಂಕೆಗಳನ್ನು ಸಾಕಲಾಗುತ್ತದೆ. ಇದಕ್ಕಾಗಿ 1998ರಲ್ಲಿ ಜಿಂಕೆಗಳನ್ನು ಸಾಕಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ. 4 ಗಂಡು, 2 ಹೆಣ್ಣು ಜಿಂಕೆಗಳನ್ನು ಸಾಕಲು ಶುರುವಿನಲ್ಲಿ ನಾವು ಅನುಮತಿ ಪಡೆದಿದ್ದವು. ಆನಂತರ ಅವು ಸಂತಾನೋತ್ಪತ್ತಿ ಆಗಿ 55 ಜಿಂಕೆಗಳಾಗಿವೆ. ಸದ್ಯ ಅವೆಲ್ಲವೂ ಇಲ್ಲಿಯೇ ವಾಸ ಮಾಡುತ್ತಿವೆ.
ಇದನ್ನೂ ಓದಿ: Theft Case: ಮದುವೆ ಆಮಂತ್ರಣ ಪತ್ರಿಕೆ ಕೊಡೋ ನೆಪದಲ್ಲಿ ಮನೆಗೆ ಬಂದ ದುಷ್ಕರ್ಮಿಗಳು; ಚಾಕುವಿನಿಂದ ಹಲ್ಲೆ, ದರೋಡೆಗೆ ಯತ್ನ
ಜಿಂಕೆಗಳ ಬಗ್ಗೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮೊದಲು 6 ಜಿಂಕೆಗಳಿಗೆ ಬೇಕಾದ ಜಾಗ ಮತ್ತು ಸ್ಥಳಾವಕಾಶ ಇತ್ತು. ಆದರೆ 55 ಜಿಂಕೆಗಳಿಗೆ ಇರಬೇಕಾದ ವಿಶಾಲವಾದ ಜಾಗ ಇಲ್ಲ, ಅದನ್ನು ನಾವು ಒಪ್ಪಿಕೊಳ್ಳುತ್ತೇವೆ. ಹೀಗಾಗಿ ಇವುಗಳನ್ನು ಸ್ಥಳಾಂತರ ಮಾಡಲು ಅರಣ್ಯ ಇಲಾಖೆಗೆ ನಾವು ಕೋರಿದ್ದೇವೆ. ಆದರೆ ಕೊರೊನಾದಿಂದಾಗಿ ಸಾಧ್ಯವಾಗಿರಲಿಲ್ಲ ಎಂದು ಆಸ್ಪತ್ರೆಯ ಭದ್ರತಾ ಅಧಿಕಾರಿ ರಾಜು ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ