ನವದೆಹಲಿ: 77ನೇ ಸ್ವಾತಂತ್ರ್ಯ ದಿನಾಚರಣೆಗೆ ಆಗಸ್ಟ್ 15ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ವೇದಿಕೆ ಸಜ್ಜಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯೋತ್ಸವ (Independence Day 2023) ನೇತೃತ್ವ ವಹಿಸಲಿದ್ದು, ರಾಷ್ಟ್ರಧ್ವಜಾರೋಹಣ ಮಾಡಿದ ಬಳಿಕ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
2021ರ ಮಾರ್ಚ್ 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸಬರಮತಿ ಆಶ್ರಮದಿಂದ ಪ್ರಧಾನಿಗಳು ಪ್ರಾರಂಭಿಸಿದ ‘ಆಜಾದಿ ಕಾ ಅಮೃತ ಮಹೋತ್ಸವ’ ಆಚರಣೆಯು ಈ ವರ್ಷದ ಸ್ವಾತಂತ್ರ್ಯ ದಿನದಂದು ಮುಕ್ತಾಯಗೊಳ್ಳುತ್ತದೆ. 77ನೇ ಸ್ವಾತಂತ್ರ್ಯ ದಿನಾಚರಣೆಗಾಗಿ ಹಲವಾರು ಹೊಸ ಉಪಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಅತಿಥಿಗಳನ್ನು ಆಹ್ವಾನಿಸಲಾಗಿದೆ.
1800 ವಿಶೇಷ ಅತಿಥಿಗಳಿಗೆ ಆಹ್ವಾನ
ಕೆಂಪು ಕೋಟೆಯಲ್ಲಿನ ಆಚರಣೆಯ ಭಾಗವಾಗಲು ದೇಶದಾದ್ಯಂತ ವಿವಿಧ ವೃತ್ತಿಗಳ ಸುಮಾರು 1,800 ಜನರನ್ನು ಅವರ ಕುಟುಂಬದೊಂದಿಗೆ ವಿಶೇಷ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ಸರ್ಕಾರದ ʼಜನ ಭಾಗೀದಾರಿʼದೃಷ್ಟಿಕೋನಕ್ಕೆ ಅನುಗುಣವಾಗಿ ಈ ಉಪಕ್ರಮವನ್ನು ತೆಗೆದುಕೊಳ್ಳಲಾಗಿದೆ.
ಈ ವಿಶೇಷ ಅತಿಥಿಗಳಲ್ಲಿ 660ಕ್ಕೂ ಹೆಚ್ಚು ವಿವಿಧ ಗ್ರಾಮಗಳ 400ಕ್ಕೂ ಹೆಚ್ಚು ಗ್ರಾಪಂ ಅಧ್ಯಕ್ಷರು ಇದ್ದು, ರೈತ ಉತ್ಪಾದಕ ಸಂಸ್ಥೆಗಳ ಯೋಜನೆಯ 250, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮತ್ತು ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯ ತಲಾ 50, ಹೊಸ ಸಂಸತ್ತಿನ ಕಟ್ಟಡ ಸೇರಿ ಸೆಂಟ್ರಲ್ ವಿಸ್ಟಾ ಯೋಜನೆಯ 50 ಶ್ರಮ ಯೋಗಿಗಳು (ನಿರ್ಮಾಣ ಕೆಲಸಗಾರರು), ಖಾದಿ ಕಾರ್ಮಿಕರು, ಗಡಿ ರಸ್ತೆಗಳ ನಿರ್ಮಾಣ, ಅಮೃತ್ ಸರೋವರ ಮತ್ತು ಹರ್ ಘರ್ ಜಲ ಯೋಜನೆಯ ತಲಾ 50 ಮತ್ತು ತಲಾ 50 ಪ್ರಾಥಮಿಕ ಶಾಲಾ ಶಿಕ್ಷಕರು, ದಾದಿಯರು ಮತ್ತು ಮೀನುಗಾರರು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ | Independence Day 2023 : 77ರ ಸ್ವಾತಂತ್ರ್ಯದಿನಕ್ಕೆ ಮಾಣಿಕ್ ಷಾ ಮೈದಾನ ಸಿದ್ಧ; ಇರಲಿದೆ ಸಾಹಸ ಪ್ರದರ್ಶನ
ಈ ವಿಶೇಷ ಅತಿಥಿಗಳಲ್ಲಿ ಕೆಲವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲು ಮತ್ತು ದೆಹಲಿಯಲ್ಲಿ ತಮ್ಮ ವಾಸ್ತವ್ಯದ ಭಾಗವಾಗಿ ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ. ಪ್ರತಿ ರಾಜ್ಯ, ಕೇಂದ್ರಾಡಳಿತ ಪ್ರದೇಶದಿಂದ 75 ದಂಪತಿಯನ್ನು ಅವರ ಸಾಂಪ್ರದಾಯಿಕ ಉಡುಗೆಯಲ್ಲಿ, ಕೆಂಪು ಕೋಟೆಯಲ್ಲಿ ಸಮಾರಂಭವನ್ನು ವೀಕ್ಷಿಸಲು ಆಹ್ವಾನಿಸಲಾಗಿದೆ.
ಆ.15ರಿಂದ-20ರವರೆಗೆ ಆನ್‌ಲೈನ್ ಸೆಲ್ಫಿ ಸ್ಪರ್ಧೆ
ಆಚರಣೆಯ ಭಾಗವಾಗಿ ರಕ್ಷಣಾ ಸಚಿವಾಲಯವು ಆಗಸ್ಟ್ 15-20 ರಿಂದ MyGov ಪೋರ್ಟಲ್ ನಲ್ಲಿ ಆನ್‌ಲೈನ್ ಸೆಲ್ಫಿ ಸ್ಪರ್ಧೆಯನ್ನು ನಡೆಸುತ್ತಿದೆ. ಸ್ಪರ್ಧೆಯಲ್ಲಿ ಭಾಗವಹಿಸಲು 12 ಸ್ಥಾಪನೆ (Installation) ಗಳಲ್ಲಿ ಒಂದು ಅಥವಾ ಹೆಚ್ಚಿನ ಸೆಲ್ಫಿಗಳನ್ನು ತೆಗೆದುಕೊಳ್ಳಲು ಮತ್ತು ಅವುಗಳನ್ನು MyGov ಪ್ಲಾಟ್ ಫಾರ್ಮ್‌ನಲ್ಲಿ ಅಪ್‌ಲೋಡ್ ಮಾಡಲು ಜನರನ್ನು ಪ್ರೋತ್ಸಾಹಿಸಲಾಗುತ್ತದೆ. ಆನ್‌ಲೈನ್ ಸೆಲ್ಫಿ ಸ್ಪರ್ಧೆಯ ಆಧಾರದ ಮೇಲೆ ಪ್ರತಿ ಸ್ಥಾಪನೆಯಿಂದ ಒಬ್ಬರಂತೆ ಹನ್ನೆರಡು ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ವಿಜೇತರಿಗೆ ತಲಾ 10,000 ರೂಪಾಯಿ ಬಹುಮಾನ ನೀಡಲಾಗುವುದು.
ಇ-ಆಮಂತ್ರಣಗಳು
ಎಲ್ಲಾ ಅಧಿಕೃತ ಆಹ್ವಾನಗಳನ್ನು ಆಮಂತ್ರಣ್ ಪೋರ್ಟಲ್ (http://www.aamantran.mod.gov.in) ಮೂಲಕ ಆನ್‌ಲೈನ್‌ನಲ್ಲಿ ಕಳುಹಿಸಲಾಗಿದೆ. ಪೋರ್ಟಲ್ ಮೂಲಕ 17,000 ಇ-ಆಮಂತ್ರಣ ಕಾರ್ಡ್‌ಗಳನ್ನು ನೀಡಲಾಗಿದೆ.
ಸಮಾರಂಭ ಹೇಗೆ ನಡೆಯಲಿದೆ?
ಕೆಂಪುಕೋಟೆಗೆ ಆಗಮಿಸುವ ಪ್ರಧಾನಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಮತ್ತು ರಕ್ಷಣಾ ಕಾರ್ಯದರ್ಶಿ ಗಿರಿಧರ್ ಅರಮನೆ ಅವರು ಬರಮಾಡಿಕೊಳ್ಳಲಿದ್ದಾರೆ. ರಕ್ಷಣಾ ಕಾರ್ಯದರ್ಶಿಯು ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ (GoC), ಲೆಫ್ಟಿನೆಂಟ್ ಜನರಲ್ ಧೀರಜ್ ಸೇಠ್ ಅವರನ್ನು ಪ್ರಧಾನಿಯವರಿಗೆ ಪರಿಚಯಿಸುತ್ತಾರೆ. ನಂತರ ದೆಹಲಿ ಪ್ರದೇಶದ ಜಿಒಸಿ ಅವರು ನರೇಂದ್ರ ಮೋದಿಯವರನ್ನು ಸೆಲ್ಯೂಟಿಂಗ್ ಬೇಸ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ಸಂಯೋಜಿತ ಇಂಟರ್-ಸರ್ವೀಸ್ ಮತ್ತು ದೆಹಲಿ ಪೊಲೀಸ್ ಗಾರ್ಡ್ ಪ್ರಧಾನಿಗೆ ಸಾಮಾನ್ಯ ಸೆಲ್ಯೂಟ್ ಸಲ್ಲಿಸುತ್ತಾರೆ. ಬಳಿಕ ಪ್ರಧಾನಿ ಗೌರವ ವಂದನೆ ಸ್ವೀಕರಿಸುತ್ತಾರೆ.
ಪ್ರಧಾನಿಗಳಿಗೆ ಗೌರವ ವಂದನೆ ಸಲ್ಲಿಸುವ ತಂಡವು ಸೇನೆ, ವಾಯುಪಡೆ ಮತ್ತು ದೆಹಲಿ ಪೊಲೀಸರ ತಲಾ 25 ಸಿಬ್ಬಂದಿ ಮತ್ತು ನೌಕಾಪಡೆಯ ಒಬ್ಬ ಅಧಿಕಾರಿ ಮತ್ತು 24 ಸಿಬ್ಬಂದಿಯನ್ನು ಒಳಗೊಂಡಿರುತ್ತದೆ. ಭಾರತೀಯ ಸೇನೆಯು ಈ ವರ್ಷ ಸಮನ್ವಯ ಸೇವೆಯಾಗಿದೆ. ಗಾರ್ಡ್ ಆಫ್ ಹಾನರ್‌ಗೆ ಮೇಜರ್ ವಿಕಾಸ್ ಸಾಂಗ್ವಾನ್ ಅವರು ಕಮಾಂಡರ್ ಆಗಿರುತ್ತಾರೆ. ಪ್ರಧಾನ ಮಂತ್ರಿಗಳ ಗಾರ್ಡ್‌ನಲ್ಲಿರುವ ಸೇನಾ ತುಕಡಿಗೆ ಮೇಜರ್ ಇಂದ್ರಜೀತ್ ಸಚಿನ್, ನೌಕಾದಳಕ್ಕೆ ಲೆಫ್ಟಿನೆಂಟ್ ಕಮಾಂಡರ್ ಎಂವಿ ರಾಹುಲ್ ರಾಮನ್ ಮತ್ತು ವಾಯುಪಡೆಯ ತುಕಡಿಗೆ ಸ್ಕ್ವಾಡ್ರನ್ ಲೀಡರ್ ಆಕಾಶ್ ಗಂಘಾಸ್ ಅವರು ಕಮಾಂಡರ್ ಆಗಿರುತ್ತಾರೆ. ದೆಹಲಿ ಪೊಲೀಸ್ ತುಕಡಿಗೆ ಹೆಚ್ಚುವರಿ ಡಿಸಿಪಿ ಸಂಧ್ಯಾ ಸ್ವಾಮಿ ಅವರು ಕಮಾಂಡರ್ ಆಗಿರುತ್ತಾರೆ.
ಇದನ್ನೂ ಓದಿ | Independence Day 2023 : ಆಗಸ್ಟ್ 15ಕ್ಕೆ ಬೆಂಗಳೂರಿನ ಈ ಮಾರ್ಗದಲ್ಲಿ ವಾಹನ ಸಂಚಾರ ನಿರ್ಬಂಧ
ಗೌರವ ವಂದನೆ ಸ್ವೀಕರಿಸಿದ ನಂತರ, ಪ್ರಧಾನಿ ಅವರು ಕೆಂಪು ಕೋಟೆಯ ಆವರಣಕ್ಕೆ ತೆರಳುತ್ತಾರೆ. ಅಲ್ಲಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ರಾಜ್ಯ ಮಂತ್ರಿ ಅಜಯ್ ಭಟ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಅನಿಲ್ ಚೌವ್ಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿಕುಮಾರ್ ಮತ್ತು ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್ ಚೌಧರಿ ಸ್ವಾಗತಿಸುತ್ತಾರೆ. ದೆಹಲಿ ಪ್ರದೇಶದ ಜಿಒಸಿಯವರು ಪ್ರಧಾನ ಮಂತ್ರಿಯವರನ್ನು ರಾಷ್ಟ್ರಧ್ವಜಾರೋಹಣ ಮಾಡುವ ವೇದಿಕೆಗೆ ಕರೆದೊಯ್ಯುತ್ತಾರೆ.
ಧ್ಜಜಾರೋಹಣದ ನಂತರ, ತ್ರಿವರ್ಣ ಧ್ವಜವು ‘ರಾಷ್ಟ್ರೀಯ ಸೆಲ್ಯೂಟ್’ ಅನ್ನು ಸ್ವೀಕರಿಸುತ್ತದೆ. ಒಬ್ಬರು ಜೆಸಿಒ ಮತ್ತು 20 ಇತರ ಶ್ರೇಣಿಗಳನ್ನು ಒಳಗೊಂಡಿರುವ ಆರ್ಮಿ ಬ್ಯಾಂಡ್, ರಾಷ್ಟ್ರ ಧ್ವಜಾರೋಹಣ ಮತ್ತು ‘ರಾಷ್ಟ್ರೀಯ ಸೆಲ್ಯೂಟ್’ ಸಮಯದಲ್ಲಿ ರಾಷ್ಟ್ರಗೀತೆಯನ್ನು ನುಡಿಸುತ್ತದೆ. ನಾಯಕ್ ಸುಬೇದಾರ್ ಜತೀಂದರ್ ಸಿಂಗ್ ಅವರ ನೇತೃತ್ವದಲ್ಲಿ ಬ್ಯಾಂಡ್ ನಡೆಯಲಿದೆ.
ಮೇಜರ್ ನಿಕಿತಾ ನಾಯರ್ ಮತ್ತು ಮೇಜರ್ ಜಾಸ್ಮಿನ್ ಕೌರ್ ಅವರು ರಾಷ್ಟ್ರ ಧ್ವಜಾರೋಹಣದಲ್ಲಿ ಪ್ರಧಾನ ಮಂತ್ರಿಯವರಿಗೆ ಸಹಾಯ ಮಾಡುತ್ತಾರೆ. ಇದನ್ನು ಗಣ್ಯ 8711 ಫೀಲ್ಡ್ ಬ್ಯಾಟರಿ (ಸೆರೆಮೋನಿಯಲ್)ಯ ಧೀರ ಗನ್ನರ್‌ಗಳ 21 ಗನ್ ಸೆಲ್ಯೂಟ್‌ನೊಂದಿಗೆ ಮೇಳೈಸಲಾಗುತ್ತದೆ. ಸೆರೆಮೋನಿಯಲ್ ಬ್ಯಾಟರಿಯ ನೇತೃತ್ವವನ್ನು ಲೆಫ್ಟಿನೆಂಟ್ ಕರ್ನಲ್ ವಿಕಾಸ್ ಕುಮಾರ್ ವಹಿಸಲಿದ್ದಾರೆ ಮತ್ತು ಗನ್ ಪೊಸಿಷನ್ ಆಫೀಸರ್ ನಾಯಕ್ ಸುಬೇದಾರ್ (ಎಐಜಿ) ಅನೂಪ್ ಸಿಂಗ್ ಆಗಿರುತ್ತಾರೆ.
ಐವರು ಅಧಿಕಾರಿಗಳು ಮತ್ತು ಸೇನೆ, ನೌಕಾಪಡೆ, ವಾಯುಪಡೆ ಮತ್ತು ದೆಹಲಿ ಪೊಲೀಸರ 128 ಇತರ ಶ್ರೇಣಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ಧ್ವಜ ರಕ್ಷಕ ತಂಡವು ಪ್ರಧಾನಮಂತ್ರಿ ಅವರು ರಾಷ್ಟ್ರಧ್ವಜಾರೋಹಣ ಮಾಡುವ ಸಮಯದಲ್ಲಿ ರಾಷ್ಟ್ರೀಯ ಗೌರವವನ್ನು ಸಲ್ಲಿಸುತ್ತಾರೆ. ಸೇನೆಯ ಮೇಜರ್ ಅಭಿನವ್ ದೇಥಾ ಅವರು ಈ ಇಂಟರ್-ಸರ್ವೀಸ್ ಗಾರ್ಡ್ ಮತ್ತು ಪೊಲೀಸ್ ಗಾರ್ಡ್ ನ ಕಮಾಂಡ್ ಆಗಿರುತ್ತಾರೆ.
ರಾಷ್ಟ್ರೀಯ ಧ್ವಜ ರಕ್ಷಕ ತಂಡದಲ್ಲಿರುವ ಸೇನಾ ತುಕಡಿಗೆ ಮೇಜರ್ ಮುಖೇಶ್ ಕುಮಾರ್ ಸಿಂಗ್, ನೌಕಾ ತುಕಡಿಗೆ ಲೆಫ್ಟಿನೆಂಟ್ ಕಮಾಂಡರ್ ಹರ್‌ಪ್ರೀತ್ ಮಾನ್ ಮತ್ತು ವಾಯುಪಡೆಯ ತುಕಡಿಗೆ ಸ್ಕ್ವಾಡ್ರನ್ ಲೀಡರ್ ಶ್ರೇಯ್ ಚೌಧರಿ ಕಮಾಂಡರ್ ಆಗಿರುತ್ತಾರೆ. ದೆಹಲಿ ಪೊಲೀಸ್ ತುಕಡಿಗೆ ಹೆಚ್ಚುವರಿ ಡಿಸಿಪಿ ಶಶಾಂಕ್ ಜೈಸ್ವಾಲ್ ಅವರು ಕಮಾಂಡರ್ ಆಗಿರುತ್ತಾರೆ.
ಪ್ರಧಾನಮಂತ್ರಿಯವರು ರಾಷ್ಟ್ರಧ್ವಜವನ್ನು ಹಾರಿಸಿದ ತಕ್ಷಣ, ಲೈನ್ ಆಸ್ಟರ್ನ್ ಫಾರ್ಮೇಶನ್ (ಒಂದರ ಹಿಂದೆ ಒಂದರಂತೆ) ನಲ್ಲಿ ಭಾರತೀಯ ವಾಯುಪಡೆಯ ಎರಡು ಸುಧಾರಿತ ಲಘು ಹೆಲಿಕಾಪ್ಟರ್‌ಗಳಾದ ಮಾರ್ಕ್-III ಧ್ರುವ್ ಮೂಲಕ ಧ್ವಜಾರೋಹಣ ಸ್ಥಳದ ಮೇಲೆ ಪುಷ್ಪವೃಷ್ಟಿ ಮಾಡಲಾಗುವುದು. ವಿಂಗ್ ಕಮಾಂಡರ್ ಅಂಬರ್ ಅಗರ್ವಾಲ್ ಮತ್ತು ಸ್ಕ್ವಾಡ್ರನ್ ಲೀಡರ್ ಹಿಮಾಂಶು ಶರ್ಮಾ ಹೆಲಿಕಾಪ್ಟರ್‌ನ ಕ್ಯಾಪ್ಟನ್‌ಗಳಾಗಿರುತ್ತಾರೆ.
ಇದನ್ನೂ ಓದಿ | Independence Day 2023 : ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಾಕ್ಷಿಯಾದ ಸ್ಥಳಗಳಿವು
ಪುಷ್ಪವೃಷ್ಟಿಯ ನಂತರ ಪ್ರಧಾನಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಧಾನಮಂತ್ರಿಯವರ ಭಾಷಣದ ಕೊನೆಯಲ್ಲಿ, ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್ ಸಿ ಸಿ) ನ ಕೆಡೆಟ್‌ಗಳು ರಾಷ್ಟ್ರಗೀತೆಯನ್ನು ಹಾಡುತ್ತಾರೆ. ದೇಶದಾದ್ಯಂತ ವಿವಿಧ ಶಾಲೆಗಳ ಒಂದು ಸಾವಿರದ ನೂರು ಬಾಲಕ ಮತ್ತು ಬಾಲಕಿ ಎನ್ ಸಿ ಸಿ ಕೆಡೆಟ್ ಗಳು (ಸೇನೆ, ನೌಕಾಪಡೆ ಮತ್ತು ವಾಯುಪಡೆ) ಈ ರಾಷ್ಟ್ರೀಯ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಜ್ಞಾನಪಥ್‌ನಲ್ಲಿ ಆಸನಗಳನ್ನು ಅಳವಡಿಸಲಾಗಿದ್ದು, ಕೆಡೆಡ್‌ಗಳು ಅಧಿಕೃತ ಬಿಳಿ ಉಡುಗೆಯಲ್ಲಿ ಇಲ್ಲಿ ಕುಳಿತುಕೊಳ್ಳುತ್ತಾರೆ.
ಇದರ ಜತೆಗೆ, ಸಮವಸ್ತ್ರದಲ್ಲಿರುವ ಎನ್‌ಸಿಸಿ ಕೆಡೆಟ್‌ಗಳನ್ನು ಆಚರಣೆಯ ಭಾಗವಾಗಿ ಜ್ಞಾನ ಪಥದಲ್ಲಿ ಕೂರಿಸಲಾಗುವುದು. ಇನ್ನೊಂದು ಪ್ರಮುಖ ಅಂಶವೆಂದರೆ ಜಿ-20 ಲೋಗೋ, ಇದು ಕೆಂಪು ಕೋಟೆಯಲ್ಲಿ ಹೂವಿನ ಅಲಂಕಾರದ ಭಾಗವಾಗಿರುತ್ತದೆ.