Site icon Vistara News

KSRTC Employees Strike: ಸಾರಿಗೆ ನೌಕರರ ವೇತನ ಶೇ.15 ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ

State govt orders 15% hike in salaries of transport employees

ಬೆಂಗಳೂರು: ಸಾರಿಗೆ ಇಲಾಖೆ ಅಧೀನದ ಎಲ್ಲಾ ನಿಗಮಗಳ ನೌಕರರ ವೇತನ ಶೇ. 15 ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ವೇತನ ಹೆಚ್ಚಳ ಮಾಡದಿದ್ದರೆ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರ ಸಂಘ (KSRTC Employees Strike) ಎಚ್ಚರಿಕೆ ನೀಡಿದ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್‌ಡಬ್ಲ್ಯುಕೆಆರ್‌ಟಿಸಿ), ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ನೌಕರರ ವೇತನ ಹೆಚ್ಚಳ ಮಾಡಲಾಗಿದೆ.

2019ರ ಡಿಸೆಂಬರ್‌ 31ಕ್ಕೆ ನೌಕರರು ಪಡೆಯುತ್ತಿದ್ದ ಮೂಲ ವೇತನಕ್ಕೆ ಶೇ. 15ರಷ್ಟು ವೇತನ ಹೆಚ್ಚಳ ಮಾಡಲಾಗಿದೆ. ಅಲ್ಲದೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಪುನಶ್ಚೇತನಕ್ಕಾಗಿ ರಚಿಸಿರುವ ಏಕ ಸದಸ್ಯ ಸಮಿತಿಗೂ ಹಲವು ಮಹತ್ವದ ಸಲಹೆ ನೀಡಲಾಗಿದೆ. ಸಾರಿಗೆ ನಿಗಮಗಳ ಆರ್ಥಿಕ ಪರಿಸ್ಥಿತಿ ಗಮನದಲ್ಲಿ ಇಟ್ಟುಕೊಂಡು ಹಾಗೂ ವೇತನ ಹೆಚ್ಚಳಕ್ಕೆ ಸರ್ಕಾರಕ್ಕೆ ಅವಶ್ಯಕತೆ ಬಗ್ಗೆ ತಿಳಿಸಲು ಸೂಚನೆ ನೀಡಲಾಗಿದೆ. ಕರ್ನಾಟಕ ರಾಜ್ಯಪಾಲರ ಆದೇಶ ಅನುಸಾರ ಸರ್ಕಾರದ ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ವಿ.ಎಸ್ ಪುಷ್ಪ ಅಧಿಕೃತ ಆದೇಶ ನೀಡಿದ್ದಾರೆ.

ಇದನ್ನೂ ಓದಿ | ವಿಸ್ತಾರ TOP 10 NEWS: 125 ಜನರಿಗೆ ಕಾಂಗ್ರೆಸ್‌ ಟಿಕೆಟ್‌ ಫೈನಲ್‌ನಿಂದ, ಮತ್ತೆ ಶುರುವಾದ ಹಲಾಲ್‌ ದಂಗಲ್‌ವರೆಗಿನ ಪ್ರಮುಖ ಸುದ್ದಿಗಳಿವು

ಸರ್ಕಾರ ಶೇ.15 ವೇತನ ಹೆಚ್ಚಳ ಮಾಡಿದ್ದರೂ ಮೂಲ ವೇತನದಲ್ಲಿ ಶೇ 25ರಷ್ಟು ಹೆಚ್ಚಳ ಮಾಡಬೇಕು ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ಅದು ಸಾಧ್ಯವಾಗದಿದ್ದರೆ ಸರ್ಕಾರಿ ನೌಕರರಿಗೆ ಸರಿಸಮಾನ ವೇತನ ನೀಡಬೇಕು. ನಮ್ಮ ಬೇಡಿಕೆಗಳನ್ನು ಪರಿಗಣಿಸದೆ ಸರ್ಕಾರ ಏಕಪಕ್ಷೀಯವಾಗಿ ಶೇ.15ರಷ್ಟು ವೇತನ ಹೆಚ್ಚಳದ ನಿರ್ಧಾರ ಕೈಗೊಂಡಿದ್ದು, ಅದನ್ನು ನಾವು ಒಪ್ಪುವುದಿಲ್ಲ ಎಂದು ಸಾರಿಗೆ ನೌಕರರ ಸಂಘ ತಿಳಿಸಿದೆ.

ಮಾರ್ಚ್ 21ರಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿರುವ ಸಾರಿಗೆ ನೌಕರರ ಸಂಘ, ಶೇಕಡ 25ರಷ್ಟು ವೇತನ ಹೆಚ್ಚಳ ಆಗದಿದ್ದರೆ ಮುಷ್ಕರ ಹಿಂದಕ್ಕೆ ಪಡೆಯುವ ಮಾತೇ ಇಲ್ಲ ಎಂದು ಸ್ಪಷ್ಟ ಪಡಿಸಿದೆ.

Exit mobile version