ಹಾವೇರಿ : ಹೊಸದಾಗಿ ಆರಂಭವಾಗಿರುವ ಇಲ್ಲಿಯ ಸರ್ಕಾರಿ ವೈದ್ಯಕೀಯ ಕಾಲೇಜು ಬಾಲಗ್ರಹ ಪೀಡೆಯಿಂದ ಬಳಲುತ್ತಿದ್ದೆ. ಜಿಲ್ಲೆಯ ಜನತೆಯಲ್ಲಿ ಬಹು ನಿರೀಕ್ಷೆ ಮೂಡಿಸಿದ್ದ “ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಹಿಮ್ಸ್)ʼʼ ಸರಿಯಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಇಲ್ಲದೆ ಹುಟ್ಟುತ್ತಿದ್ದಂತೆಯೇ ಕುಗುರಲಾರಂಭಿಸಿದೆ.
ಮುಖ್ಯವಾಗಿ ಪ್ರಾಧ್ಯಾಪಕರ ಕೊರತೆಯಿಂದಾಗಿ ಒಂದೂವರೆ ತಿಂಗಳು ಕಳೆದರೂ ಪಾಠ ಆರಂಭವಾಗಿಲ್ಲ. ಈ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿದಂತೆ 79 ಮಂದಿ ಕಾಯಂ ಹುದ್ದೆಗಳಿವೆ. ಆದರೆ ನೇಮಕ ನಡೆದಿಲ್ಲ. ನೇಮಕಾತಿಗಾಗಿ 2022ರ ಜನವರಿಯಲ್ಲಿ ಸಂದರ್ಶನ ನಡೆಸಲಾಗಿತ್ತು. ತಾತ್ಕಾಲಿಕ ಆಯ್ಕೆ ಪಟ್ಟಿಯನ್ನ 2022ರ ಡಿಸೆಂಬರ್ 9ರಂದು ಪ್ರಕಟಿಸಲಾಗಿತ್ತು. ಆಕ್ಷೇಪಣೆ ಅವಧಿ ಮುಗಿದು, ಎರಡು ತಿಂಗಳು ಕಳೆದರೂ ಅಂತಿಮ ಆಯ್ಕೆ ಪಟ್ಟಿ ಪ್ರಕಟವಾಗಿಲ್ಲ. ಹೀಗಾಗಿ ಬೋಧಕ ಸಿಬ್ಬಂದಿಯ ಕೊರತೆ ಉಂಟಾಗಿದೆ. ಡೀನ್ ಮತ್ತು ಒರ್ವ ಪ್ರಾಧ್ಯಾಪಕರು ಸದ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನಡೆದಿದ್ದು ಫೌಂಡೇಷನ್ ಕೋರ್ಸ್ ಮಾತ್ರ!
ಹಾವೇರಿ ಜಿಲ್ಲಾಸ್ಪತ್ರೆ ಮತ್ತು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ತಜ್ಞ ವೈದ್ಯರಿಂದ ಕಾಲೇಜಿನ ಆರಂಭದಲ್ಲಿ ಫೌಂಡೇಷನ್ ಕೋರ್ಸ್ ನಡೆಸಲಾಗಿದೆ. ಆದರೆ ನಂತರ ಪಾಠ ಮಾಡುವವರೇ ಇಲ್ಲವಾಗಿದ್ದಾರೆ. ಈ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ 2020ರ ಜನವರಿಯಲ್ಲಿ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರೆತಿತ್ತು. ದೇವಗಿರಿ-ಯಲ್ಲಾಪುರ ಬಳಿ 56 ಎಕರೆಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನದಡಿ 478 ಕೋಟಿ ವೆಚ್ಚದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಕಾಮಗಾರಿ ನಡೆಸಲಾಗುತ್ತಿದೆ.
ಇನ್ನೂ ಕಾಲೇಜಿಗೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿಲ್ಲ. ಕಟ್ಟಡ ಕಾಮಗಾರಿಯೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ತರಗತಿ ನಡೆಸಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಆದರೆ ಪಾಠ ಮಾಡುವವರೇ ಇಲ್ಲವಾಗಿರುವುದರಿಂದ ವಿದ್ಯಾರ್ಥಿಗಳು ತರಗತಿಗಳಿಗೆ ಹೋಗದೆ ಹಾಸ್ಟೆಲ್‌ನಲ್ಲಿ ಕಾಲ ಕಳೆಯುತ್ತಿದ್ದಾರೆ.
ಕಾಲೇಜು ಆರಂಭವಾಗಿ ಒಂದೂವರೆ ತಿಂಗಳಾದರೂ ಪಾಠಗಳು ಆರಂಭವಾಗಿಲ್ಲ. ಹೀಗಾದರೆ ನಮ್ಮ ಭವಿಷ್ಯದ ಕತೆ ಏನು ಎಂದು ಪ್ರಶ್ನಿಸುತ್ತಿರುವ ವಿದ್ಯಾರ್ಥಿಗಳು ಈ ಸಂಬಂಧ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ. ಒಟ್ಟಾರೆ 149 ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ.
ಇದನ್ನೂ ಓದಿ : ವಿಜಯಪುರದ ಖಾಸಗಿ ಮೆಡಿಕಲ್ ಕಾಲೇಜು ಆವರಣದಲ್ಲಿ ನಾಯಿಗಳಿಗೆ ಹಿಂಸೆ ಆರೋಪ, ನಿಜವಾಗಿ ನಡೆದಿದ್ದೇನು?