ಬೆಂಗಳೂರು: ವಿಶ್ವಕರ್ಮ ಸಮಾಜದಲ್ಲಿ ಮೀಸಲಾತಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯದ 745 ಹೋಬಳಿ, 175 ತಾಲೂಕು ಹಾಗೂ 31 ಜಿಲ್ಲೆಗಳಲ್ಲಿ ಜಾಗೃತಿ ಸಭೆಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಾವೇಶದ ಉದ್ಘಾಟನೆ ನೆರವೇರಿಸಲಿದ್ದಾರೆ.
ಈ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶುಕ್ರವಾರ ಜು .15 ಅರಮನೆ ಮೈದಾನದಲ್ಲಿ ರಾಜ್ಯಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇಂಧನ ಸಚಿವ ಸುನೀಲ್‌ಕುಮಾರ್ ಅಧ್ಯಕ್ಷತೆ ವಹಿಸಲಿದ್ದು, ಉತ್ತರಾಖಂಡದ ಸಂಸದ ಅಜಯ್ ತಮಟಾ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.
ವಿಶ್ವಕರ್ಮ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವುದು, ಮೀಸಲಾತಿ ಹಾಗೂ ವಿಶ್ವಕರ್ಮ ಜಾತಿಯ ಕುಲಶಾಸ್ತ್ರ ಅಧ್ಯಯನ ಮಾಡಿಸುವುದರ ಜತೆಗೆ ಇನ್ನಿತರ 6 ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಕೆ.ಪಿ. ನಂಜುಂಡಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿ ನಮ್ಮ ಸಮಾಜದ 8 ರಿಂದ 10 ಕೋಟಿ ಮತ್ತು ರಾಜ್ಯದಲ್ಲಿ 40 ಲಕ್ಷಕ್ಕಿಂತ ಹೆಚ್ಚು ಜನರಿದ್ದಾರೆ. ಆದರೆ ಇಂದಿಗೂ ಸಮಾಜವು ಸಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದೆ. ವಿಪರ್ಯಾಸವೆಂದರೆ ಸಮಾಜದ ಸಾಕಷ್ಟು ಮಂದಿಗೆ ಮೀಸಲಾತಿ, ಸೌಕರ್ಯ, ಸರ್ಕಾರದ ಯೋಜನೆಗಳು ಸೇರಿ ಹಲವು ವಿಚಾರಗಳ ಬಗ್ಗೆ ಅರಿವಿನ ಕೊರತೆಯಿದೆ.
ಹಾಗಾಗಿ ವಿಶ್ವಕರ್ಮ ಸಮುದಾಯದವರು ಸರ್ಕಾರದ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಈ ಕುರಿತು ಈಗಾಗಲೇ ರಾಜ್ಯಾದ್ಯಂತ ಸಭೆಗಳನ್ನು ಮಾಡಿ ಜಾಗೃತಿ ಮೂಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಸಮಾರೋಪದ ಅಂಗವಾಗಿ ಬೀದರ್‌ನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡಲು ತೀರ್ಮಾನಿಸಿದ್ದೇವೆ. ಸಮಾವೇಶದಲ್ಲಿ ಈ ವಿಚಾರಗಳನ್ನು ಸರ್ಕಾರದ ಗಮನಕ್ಕೆ ತರುತ್ತೇವೆ ಎಂದರು.
ಇದನ್ನೂ ಓದಿ| ಮರಾಠಿ ಭಾಷಾ ಹೋರಾಟಕ್ಕೂ ಮರಾಠ ಸಮುದಾಯಕ್ಕೂ ಸಂಬಂಧ ಇಲ್ಲ: ಮಾರುತಿರಾವ್ ಮುಳೆ