ದಾವಣಗೆರೆ: ವಂದೇ ಭಾರತ್ (Vande Bharat) ರೈಲುಗಳಿಗೆ ಕಲ್ಲು ಹೊಡೆಯುವ ಘಟನೆಗಳ ಸರಣಿ ಮುಂದುವರಿದಿದೆ. ಇತ್ತೀಚೆಗಷ್ಟೇ ಪ್ರಾರಂಭವಾದ ಧಾರವಾಡ-ಬೆಂಗಳೂರು ವಂದೇ ಭಾರತ್ ರೈಲಿಗೆ (Dharwad Bengaluru Vande Bharat) ದಾವಣಗೆರೆ ನಗರದ ಹೊರವಲಯದಲ್ಲಿರುವ ಜಿಎಂ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ಬಳಿ ಕಿಡಿಗೇಡಿಗಳು ರೈಲಿಗೆ ಕಲ್ಲು ಎಸೆದ (Stone Pelt)ಪರಿಣಾಮ, ಕಿಟಕಿ ಗಾಜು ಒಡೆದಿದೆ. ವಂದೇ ಭಾರತ್ ರೈಲು (Vande Bharat Train) ಧಾರವಾಡದಿಂದ ಬೆಂಗಳೂರಿಗೆ ವಾಪಸ್ ಬರುವಾಗ, ಶನಿವಾರ ಮಧ್ಯಾಹ್ನ 3.30ರ ಹೊತ್ತಿಗೆ ಘಟನೆ ನಡೆದಿದ್ದು, ಕಲ್ಲು ಹೊಡೆದವರು ಪರಾರಿಯಾಗಿದ್ದಾರೆ.
ಕಿಡಿಗೇಡಿಗಳು ಎಸೆದ ಕಲ್ಲು ಕಿಟಕಿಗೆ ತಗುಲಿ, ಹಾನಿಯಾದರೂ ಅದು ಒಳಗಿದ್ದ ಪ್ರಯಾಣಿಕರಿಗೆ ಯಾವುದೇ ತೊಂದರೆ ಮಾಡಿಲ್ಲ ಎನ್ನಲಾಗಿದೆ. ಹಾಗೇ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾವಣಗೆರೆ ಭಾಗಗಳಲ್ಲಿ ಇತ್ತೀಚೆಗೆ ಹೀಗೆ ಕಲ್ಲು ಎಸೆಯವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ. ದಾವಣಗೆರೆ-ಅರಸೀಕೆರೆ ನಡುವಿನ ಹೊಸದುರ್ಗ, ಹೊಳಲ್ಕೆರೆ, ಚಿಕ್ಕಜಾಜಾರು ಭಾಗದಲ್ಲಿ ಬೇರೆ ಕೆಲವು ರೈಲುಗಳಿಗೆ ಕಿಡಿಗೇಡಿಗಳು ಕಲ್ಲು ಹೊಡೆದಿದ್ದರು.
ಇದನ್ನೂ ಓದಿ: Vande Bharat Express: ಧಾರವಾಡ- ಬೆಂಗಳೂರು ವಂದೇ ಭಾರತ್ ರೈಲು; ಟೈಮಿಂಗ್ ಹೇಗೆ? ಪ್ರಯಾಣ ದರ ಎಷ್ಟು?
ದೇಶದಲ್ಲಿ ಸದ್ಯ 23 ವಂದೇ ಭಾರತ್ ರೈಲುಗಳು ಸಂಚಾರ ಮಾಡುತ್ತಿವೆ. ಧಾರವಾಡ-ಬೆಂಗಳೂರು ಮಾರ್ಗ ಸೇರಿ ಒಟ್ಟು ಐದು ನೂತನ ವಂದೇ ಭಾರತ್ ರೈಲುಗಳಿಗೆ ಜೂ.27ರಂದು ಪ್ರಧಾನಿ ಮೋದಿ ಮಧ್ಯಪ್ರದೇಶದ ಭೋಪಾಲ್ನಿಂದಲೇ ಚಾಲನೆ ನೀಡಿದ್ದರು. ಈ ಧಾರವಾಡ-ಬೆಂಗಳೂರು ನಮ್ಮ ರಾಜ್ಯಕ್ಕೆ ಸಿಕ್ಕ ಎರಡನೇ ವಂದೇ ಭಾರತ್ ರೈಲಾಗಿದೆ. ದೇಶಾದ್ಯಂತ ಹಲವು ಕಡೆ ಹೀಗೆ ವಂದೇ ಭಾರತ್ ರೈಲುಗಳಿಗೆ ಕಲ್ಲು ತೂರುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ನಮ್ಮ ರಾಜ್ಯದ ಮೊದಲ ವಂದೇ ಭಾರತ್ ರೈಲು ಬೆಂಗಳೂರು-ಮೈಸೂರು-ಚೆನ್ನೈ ಟ್ರೇನ್ಗೂ ಇದೇ ಫೆಬ್ರವರಿಯಲ್ಲಿ ಕಲ್ಲುತೂರಾಟವಾಗಿತ್ತು. ಆ ರೈಲಿನ ಕಿಟಕಿಗೂ ಹಾನಿಯಾಗಿತ್ತು. ಅದಕ್ಕೂ ಮೊದಲು ಕೇರಳ, ಪಶ್ಚಿಮ ಬಂಗಾಳ, ಬಿಹಾರದಲ್ಲಿ ಕೂಡ ಹೀಗೆ ವಂದೇ ಭಾರತ್ ರೈಲಿಗೆ ಕಲ್ಲು ಹೊಡೆಯಲಾಗಿದೆ.