ಸಾಗರ: ಕಣ್ಣೂರಿನಲ್ಲಿ ನಡೆಯುತ್ತಿರುವ ಕಲ್ಲುಕ್ವಾರೆ (Stone Quarry) ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿದರೆ ತಾಲೂಕು ಆಡಳಿತ ಸುಮ್ಮನೆ ಇರುವುದಿಲ್ಲ ಎಂದು ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ತಿಳಿಸಿದರು.
ತಾಲೂಕಿನ ಆನಂದಪುರ ಸಮೀಪದ ತಂಗಳವಾಡಿ ಅಂಗನವಾಡಿಯಲ್ಲಿ ಕಂದಾಯ ಇಲಾಖೆ ವತಿಯಿಂದ ಶನಿವಾರ (ಜ.೨೧) ಹಮ್ಮಿಕೊಳ್ಳಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ವಿವಿಧ ಯೋಜನೆಯ ಪತ್ರ ವಿತರಣೆ ಮಾಡಿದ ಅವರು, ಬಳಿಕ ಜಮೀನು ವಿವಾದ ಇರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಕಣ್ಣೂರು ಭಾಗದಲ್ಲಿ ಅಕ್ರಮವಾಗಿ ಕಲ್ಲುಕ್ವಾರೆ ನಡೆಸುತ್ತಿರುವ 17 ಜನರಿಗೆ ನೋಟಿಸ್ ನೀಡಲಾಗಿದೆ. 17 ಕಲ್ಲುಕ್ವಾರೆ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಚಿಂತನೆ ನಡೆಸಲಾಗಿದ್ದು, ಅಕ್ರಮವನ್ನು ಸಕ್ರಮಗೊಳಿಸಲು ತಿಳಿಸಲಾಗಿದೆ. ಒಂದೊಮ್ಮೆ ಕಲ್ಲುಕ್ವಾರೆ ಮಾಲೀಕರು ಅಧಿಕೃತಗೊಳಿಸಿಕೊಳ್ಳದೆ ಹೋದಲ್ಲಿ ಕಲ್ಲುಕ್ವಾರೆ ಪ್ರದೇಶವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ ಎಂದು ಹೇಳಿದರು.
ಗ್ರಾಮ ವಾಸ್ತವ್ಯದ ಮೂಲಕ ಅನೇಕ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದ್ದು, ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿನ ಜ್ವಲಂತ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ. ವಿವಿಧ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳು ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಇದು ಪೂರಕವಾಗಿದೆ. ಎಲ್ಲ ಇಲಾಖೆಯ ಅಧಿಕಾರಿಗಳು ಗ್ರಾಮ ವಾಸ್ತವ್ಯದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: Manso Re | ರಾಷ್ಟ್ರಪಶಸ್ತಿ ಪುರಸ್ಕೃತ ಮಂಸೋರೆ ನಿರ್ದೇಶನದ ‘19.20.21’ ಟೀಸರ್ ಔಟ್
ಇದೇ ಸಂದರ್ಭದಲ್ಲಿ ತಂಗಳವಾಡಿ ಮಹಿಳೆಯರು ಅಕ್ರಮ ಮದ್ಯ ಮಾರಾಟ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದರೆ, ಸರ್ಕಾರಿ ಬಸ್ ನಿಲ್ಲಿಸುತ್ತಿಲ್ಲ, ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದ್ದು ಸೂಕ್ತ ನಿರ್ದೇಶನ ನೀಡುವಂತೆ ತಂಗಳವಾಡಿ, ಗಿಳಾಲಗುಂಡಿ, ಪತ್ರೆಹೊಂಡ, ಮುರುಘಾಮಠ ನಾಗರಿಕರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಇಒ ಪುಷ್ಪಾ ಕಮ್ಮಾರ್, ಶಿಶು ಕಲ್ಯಾಣಾಭಿವೃದ್ಧಿ ಅಧಿಕಾರಿ ಸಂತೋಷ್, ಕಂದಾಯ ಇಲಾಖೆಯ ಕವಿರಾಜ್, ವಿವಿಧ ಇಲಾಖೆಯ ಸುರೇಶ್, ವಿ.ಟಿ.ಸ್ವಾಮಿ, ಭದ್ರೇಶ್, ಮಂಜನಾಯ್ಕ, ಪ್ರಕಾಶ್, ಪ್ರಭಾಕರ್, ಮಹೇಶ್, ಶಿವಾಜ್, ಆಕಾಶ್, ರಘು ಇನ್ನಿತರರು ಹಾಜರಿದ್ದರು.