ಬೆಂಗಳೂರು: ಉತ್ಥಾನ ಮಾಸಪತ್ರಿಕೆಯು ಆಯೋಜಿಸಿದ್ದ ರಾಜ್ಯ ಮಟ್ಟದ ವಾರ್ಷಿಕ ಕಥಾ ಸ್ಪರ್ಧೆಯ (Story Competition) ಫಲಿತಾಂಶ ಪ್ರಕಟಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಕರುಣಾಕರ ಹಬ್ಬುಮನೆ, ಹೆಗಡೆಕಟ್ಟಾ ಅವರು ಪ್ರಥಮ ಬಹುಮಾನ ಪಡೆದಿದ್ದಾರೆ.
ಶಿರಸಿಯ ಕರುಣಾಕರ ಹಬ್ಬುಮನೆ ಅವರ “ಒಂದು ಸಂಸ್ಕಾರದ ಕಥೆ”ಯು ಪ್ರಥಮ ಬಹುಮಾನಕ್ಕೆ (ರೂ. 15,000) ಆಯ್ಕೆಯಾಗಿದೆ. ಎರಡನೇ ಬಹುಮಾನಕ್ಕೆ (ರೂ. 12,000) ಯಾದಗಿರಿಯ ಶಿವವಿಷ್ಣು ವಲ್ಲಭ ಅವರ “ಜಂಬುಕೇಶನ ಮತಾಂತರ ಪ್ರಹಸನ” ಆಯ್ಕೆಯಾಗಿದ್ದರೆ, ಮೂರನೇ ಬಹುಮಾನವು (ರೂ. 10,000) ಕಾಸರಗೋಡಿನ ಸಂತೋಷ್ ಅನಂತಪುರ ಅವರ “ಭೂತ ಪಾದ” ಕಥೆಗೆ ಲಭ್ಯವಾಗಿದೆ.
ಐದು ಮೆಚ್ಚುಗೆಯ ಕಥೆಗಳನ್ನು ಆಯ್ಕೆ ಮಾಡಲಾಗಿದ್ದು, ಉಡುಪಿಯ ಶ್ರೀಲೋಲ ಸೋಮಯಾಜಿ ಅವರು ಬರೆದ “ಇರ್ಬುಸಾಬಿಯ ಅಷ್ಟಾವಧಾನ ಸೇವೆ”, ಬೆಂಗಳೂರಿನ ಜಯರಾಮಚಾರಿ ಅವರು ಬರೆದ “ಪೊಮ್ಯಾಟೋ”, ಧಾರವಾಡದ ರಾಮಚಂದ್ರ ಎಸ್. ಕುಲಕರ್ಣಿ ಅವರು ಬರೆದ “‘ಋಣ’ವೆಂಬ ಗೂಢ” ಚಿತ್ರದುರ್ಗದ ಜಿ.ಎಂ. ಸಂಜಯ್ (ಪತ್ರಿಕೋದ್ಯಮ ವಿದ್ಯಾರ್ಥಿ) ಅವರು ಬರೆದ “ಉದ್ಭವ ಸೇತುವೆ” ಹಾಗೂ ಮೈಸೂರಿನ ಮಾಲತಿ ಹೆಗಡೆ ಅವರು ಬರೆದ “ನೆಲೆ” – ಕಥೆಗಳು ಮೆಚ್ಚುಗೆ ಬಹುಮಾನಕ್ಕೆ (ತಲಾ ರೂ. 2,000) ಆಯ್ಕೆಯಾಗಿವೆ.
ಉತ್ಥಾನ ಮಾಸಪತ್ರಿಕೆಯು ಕಳೆದ 36 ವರ್ಷಗಳಿಂದ ವಾರ್ಷಿಕ ಕಥಾ ಸ್ಪರ್ಧೆಯನ್ನು ಆಯೋಜಿಸುತ್ತಿದ್ದು, ಈ ವರ್ಷದ 2022ರ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಕನ್ನಡದ ಖ್ಯಾತ ಕಥೆಗಾರರೂ ಸೇರಿದಂತೆ ಒಟ್ಟು 398 ಕಥೆಗಳು ಭಾಗವಹಿಸಿದ್ದವು. ಖ್ಯಾತ ಲೇಖಕರು, ಅಂಕಣಕಾರರು, ಕತೆಗಾರರಾದ ಪ್ರೇಮಶೇಖರ ಅವರು ತೀರ್ಪುಗಾರರಾಗಿ ಬಹುಮಾನಿತ ಕಥೆಗಳನ್ನು ಆಯ್ಕೆ ಮಾಡಿದರು.
ಇದನ್ನೂ ಓದಿ | Nirmala Sitharaman | ಏಮ್ಸ್ ಆಸ್ಪತ್ರೆಯಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಿಡುಗಡೆ