Site icon Vistara News

STPs Upgradation: 1,300 ಕೋಟಿ ರೂ. ವೆಚ್ಚದಲ್ಲಿ ಎಸ್‌ಟಿಪಿಗಳ ಉನ್ನತೀಕರಣಕ್ಕೆ BWSSB ಪ್ಲ್ಯಾನ್

BWSSB Corruption

ಬೆಂಗಳೂರು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಹಳೆಯ ಒಳಚರಂಡಿ ಸಂಸ್ಕರಣಾ ಘಟಕಗಳನ್ನು (STPs) ಮೇಲ್ದರ್ಜೆಗೇರಿಸಲು (STPs Upgradation) ತಯಾರಿ ನಡೆದಿದೆ. ಬಹುಕಾಲದಿಂದ ಬಾಕಿ ಉಳಿದಿರುವ ಯೋಜನೆ ಅನುಷ್ಠಾನದ ಕಾಲ ಸನ್ನಿಹಿತ ಆಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ 20 ಹಳೆಯ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಪುನಶ್ಚೇತನ ಮತ್ತು ಆಧುನೀಕರಣಗೊಳಿಸುವುದಾಗಿ ಘೋಷಿಸಿದ್ದರು. ಆದರೆ, ಇದು ಹಲವಾರು ಕಾರಣಗಳಿಂದ ವಿಳಂಬ ಆಗಿತ್ತು, ಇದೀಗ ವೇಗ ಸಿಕ್ಕಿರುವುದಾಗಿ ಮುಖ್ಯ ಲೆಕ್ಕಾಧಿಕಾರಿ ಮತ್ತು ಆರ್ಥಿಕ ಸಲಹೆಗಾರ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

ಮಿತಿ ಮೀರುತ್ತಿರುವ ಜಲಮಾಲಿನ್ಯವನ್ನು ತಡೆಗಟ್ಟಲು ಈ ಯೋಜನೆ ಬಹಳ ಅನುಕೂಲ ಆಗಲಿದೆ. ಬಿಡಬ್ಲ್ಯುಎಸ್‌ಎಸ್‌ಬಿ ನಿರ್ವಹಿಸುವ 35 ಎಸ್‌ಟಿಪಿಗಳಲ್ಲಿ 20 ಎಸ್‌ಟಿಪಿಗಳು 15 ರಿಂದ 20 ವರ್ಷಗಳಷ್ಟು ಹಳೆಯವು. ಉದಾಹರಣೆಗೆ ಕಾಡುಬೀಸನಹಳ್ಳಿ, ಹೆಬ್ಬಾಳ, ಹಲಸೂರು, ಕೆ.ಆರ್. ಪುರಂ, ವೃಷಭಾವತಿ ಕಣಿವೆ ಇತ್ಯಾದಿಗಳನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ನಿಗದಿಪಡಿಸಿದ ಚಾಲ್ತಿಯಲ್ಲಿರುವ ನಿಯತಾಂಕಗಳ ಪ್ರಕಾರ ಸ್ಥಾಪಿಸಲಾಗಿದೆ. ಆದರೆ, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಈಗ ಹಳೆಯ STP ಗಳಲ್ಲಿ ತ್ಯಾಜ್ಯ ನೀರು ಸಂಸ್ಕರಣೆಯ ಉಪಕರಣಗಳು ಮತ್ತು ಪ್ರಕ್ರಿಯೆಗಳ ಬದಲಾವಣೆಯ ಅಗತ್ಯವಿರುವ ಬಗ್ಗೆ ಒತ್ತಿ ಹೇಳಿರುವ ಹಿನ್ನೆಲೆಯಲ್ಲಿ ಉನ್ನತೀಕರಣ ಅನಿವಾರ್ಯ ಆಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Road Dispute: ಪುಷ್ಪಗಿರಿ ವನ್ಯಜೀವಿ ಅರಣ್ಯ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಪ್ರಕರಣ; ಕೊಡಗಿನ ಬಿಜೆಪಿ ಶಾಸಕರ ಮೇಲೆ ತೂಗುಗತ್ತಿ

ಈ ಯೋಜನೆಗೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಹ ಮಹತ್ವದ ಸಲಹೆ ಮತ್ತು ಮಾರ್ಗದರ್ಶನ ನೀಡಿದೆ. ಹೀಗಾಗಿ ಕೆಲವೇ ತಿಂಗಳಲ್ಲಿ ಇದರ ಕಾಮಗಾರಿ ಸಹ ಶುರುವಾಗಲಿದೆ. ಅಲ್ಲದೆ ಈ ಯೋಜನೆಗೆ 1,300 ಕೋಟಿಗೂ ವೆಚ್ಚ ಆಗುವ ಹಿನ್ನೆಲೆಯಲ್ಲಿ ಜಲ ಮಂಡಳಿ ಸಹ ವಿಶೇಷ ಮುತುವರ್ಜಿ ವಹಿಸಿದೆ. ನಗರದಲ್ಲಿ ತ್ಯಾಜ್ಯ ನೀರಿನ ಒಳ ಹರಿವು ಹೆಚ್ಚಾಗಿದ್ದು, ಇದನ್ನು ನಿಯಂತ್ರಣ ಮಾಡುವ ಅಗತ್ಯ ಇದೆ. ಇದರಿಂದ ಜಲ ಮಾಲಿನ್ಯ ಸಹ ತಪ್ಪಲಿದೆ. ಆದರಿಂದ ಜಲ ಮಂಡಳಿ ಬಹುಬೇಗ ಈ ಕಾರ್ಯ ಮುಗಿಸಲಿ ಎಂಬುದು ಜನರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Exit mobile version