ವಿಜಯಪುರ: ಒಬ್ಬಂಟಿಯಾಗಿ ಓಡಾಡುವರನ್ನು ಕಂಡರೆ ಸಾಕು ರೊಚ್ಚಿಗೆದ್ದ ಬೀದಿ ನಾಯಿಗಳು (Street Dog Attack ) ಅಟ್ಟಾಡಿಸಿಕೊಂಡು ಹೋಗಿ ದಾಳಿ ಮಾಡುತ್ತಿರುವುದು ಕಂಡು ಬಂದಿದೆ. ವಯೋವೃದ್ಧರು ಹಾಗೂ ಶಾಲಾ ಮಕ್ಕಳು ಒಬ್ಬೊಬ್ಬರೇ ರಸ್ತೆಯಲ್ಲಿ ಓಡಾಡಲು ಹೆದರುವಂತಾಗಿದೆ. ಸದ್ಯ ಗುಮ್ಮಟ ನಗರಿ ವಿಜಯಪುರದಲ್ಲಿ ಬೀದಿ ನಾಯಿಗಳು ಸಿಕ್ಕ ಸಿಕ್ಕವರ ಮೇಲೆ ಎರಗಿ ಕಚ್ಚುತ್ತಿದೆ.
ಶ್ವಾನ ದಾಳಿಯಿಂದಾಗಿ ವಿದ್ಯಾರ್ಥಿಗಳು ಭಯದಲ್ಲೇ ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲಾ ಬಾಲಕಿಯನ್ನು ಶ್ವಾನಗಳ ಹಿಂಡು ಬೆನ್ನತ್ತಿ ಬಂದ ವಿಡಿಯೊ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಎಲ್ಲಿಂದಲೋ ಒಮ್ಮೆಲೆಗೆ ಬಂದ ಹತ್ತಾರು ನಾಯಿಗಳು ಬಾಲಕಿಯನ್ನು ಅಟ್ಟಾಡಿಸಿದೆ. ಇನ್ನೇನು ಕಚ್ಚಲು ಬಂದ ಶ್ವಾನಗಳ ದಾಳಿಯಿಂದ ಕೂದಳೆಲೆ ಅಂತರದಲ್ಲಿ ತಪ್ಪಿಸಿಕೊಂಡ ಬಾಲಕಿ ಮನೆಯೊಳಗೆ ಓಡಿದ್ದಾಳೆ.
ಮೂವರಿಗೆ ಕಚ್ಚಿ ಗಾಯಗಳಿಸಿದ್ದ ಶ್ವಾನಗಳು
ವಿಜಯಪುರ ನಗರದ ಬಡಿಕಮಾನ್,ಬಾಗಾಯತ್ ಬಡಾವಣೆಯಲ್ಲಿ ಶ್ವಾನಗಳ ಹಾವಳಿ ಹೆಚ್ಚಾಗಿದೆ. ನಿನ್ನೆ ಸೋಮವಾರವೂ ಮೂವರು ಮಕ್ಕಳಿಗೆ ಕಚ್ಚಿ ಬೀದಿ ನಾಯಿಗಳು ಗಾಯಗೊಳಿಸಿವೆ. ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡಿ, ರೇಬಿಸ್ ಲಸಿಕೆ ನೀಡಲಾಗಿದೆ. ಬೀದಿ ನಾಯಿಗಳ ಕಾಟಕ್ಕೆ ಜನರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಈಗಾಗಲೇ ಬೀದಿ ನಾಯಿಗಳ ಹತೋಟಿಗೆ ಕ್ರಮ ಕೈಗೊಳ್ಳಲು ಮನವಿ ನೀಡಿದ್ದರೂ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೂಡಲೇ ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರ ಮಾಡಬೇಕು, ಇಲ್ಲವಾದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.
ಮಕ್ಕಳೇ ಟಾರ್ಗೆಟ್!
ನಾಯಿ ದಾಳಿಗೆ ಮಕ್ಕಳೇ ಟಾರ್ಗೆಟ್ ಆಗುತ್ತಿದ್ದಾರೆ. ರಸ್ತೆ ಬದಿಯಲ್ಲಿ ನಾಯಿಗಳನ್ನು ಕಂಡರೆ ಓಡುವ ಕಾರಣಕ್ಕೆ ಅಟ್ಟಾಡಿಸಿ ದಾಳಿ ಮಾಡುತ್ತಿವೆ. ನಾಯಿಗಳಿಂದಲೇ ತಪ್ಪಿಸಿಕೊಳ್ಳಲು ಆಗದೆ ಮಕ್ಕಳು ಗಾಯಗೊಳ್ಳುತ್ತಿದ್ದಾರೆ. ಈ ಹಿಂದೆ ಶಿವಮೊಗ್ಗದ ಹೊಳೆಬೆಳಗಲು ಗ್ರಾಮದಲ್ಲಿ ನಾಯಿ ದಾಳಿಯಿಂದ ಸೆ.2ರಂದು ಬಾಲಕಿಯೊಬ್ಬಳು ಗಂಭೀರ ಗಾಯಗೊಂಡಿದ್ದಳು. ಬೀರನಹಳ್ಳಿ ಗ್ರಾಪಂ ಸದಸ್ಯ ನಂಜುಂಡಪ್ಪ ಮಗಳು ಬೇಬಿ ಗಾಯಾಳು. ಶಾಲೆಯಿಂದ ಬಂದ ಬಾಲಕಿ ಬಸ್‌ನಿಂದ ಇಳಿಯುತ್ತಿದ್ದಾಗ ನಾಯಿ ದಾಳಿ ಮಾಡಿತ್ತು. ಇದರಿಂದ ಬಾಲಕಿ ಮುಖದ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇನ್ನೂ ಜೂನ್ 23ರಂದು ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದಲ್ಲಿ ಮಕ್ಕಳು ಶಾಲೆಗೆ ಹೋಗುತ್ತಿದ್ದಾಗ ಬೆನ್ನಟ್ಟಿ ಹೋದ ನಾಯಿ ನಾಲ್ವರು ವಿದ್ಯಾರ್ಥಿಗಳನ್ನು ಕಚ್ಚಿತ್ತು. ಗಾಯಗೊಂಡ ನಾಲ್ವರೂ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಕ್ಕಳು ಮಾತ್ರವಲ್ಲ, ಮೂವರು ಹಿರಿಯರ ಮೇಲೂ ದಾಳಿ ಮಾಡಿತ್ತು.
ಅನಸ್ ಬಸ್ಸಾಪುರ, ಫರಾನ್ ಕುಂಬಾರಿ, ಶ್ರವಣ ಮಿರಾಶಿ, ಕೆಂಪಣ್ಣ ಭಜಂತ್ರಿ ಎಂಬ ಮಕ್ಕಳು ಬೆಳಗ್ಗೆ ಶಾಲೆಗೆ ಹೋಗುತ್ತಿದ್ದಾಗ ನಾಯಿ ಬೆನ್ನಟ್ಟಿ ಬಂದಿತ್ತು. ಮಕ್ಕಳು ಕೂಡಾ ಭಯದಿಂದ ಓಡಿದ್ದು ಈ ನಾಯಿ ಅವರೆಲ್ಲರನ್ನೂ ಕಚ್ಚಿತ್ತು. ಗಾಯಾಳುಗಳನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.