Site icon Vistara News

ಭಾರತೀಯ ನೌಕಾದಳ ವಿಶ್ವದಲ್ಲೇ ಅತ್ಯಂತ ಸಶಕ್ತ: ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್

Rajnath singh

ಉತ್ತರ ಕನ್ನಡ: ಭಾರತವು ನೌಕಾದಳವನ್ನು ಬಲಪಡಿಸುತ್ತಿರುವುದು ಯಾರ ವಿರುದ್ಧವೂ ಅಲ್ಲ, ಬದಲಾಗಿ ದೇಶದ ಕರಾವಳಿ ಹಾಗೂ ಜನರ ರಕ್ಷಣೆಗೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ತಿಳಿಸಿದರು.

ಕಾರವಾರದ ಕದಂಬ ನೌಕಾನೆಲೆಗೆ ಶುಕ್ರವಾರ ಭೇಟಿ ನೀಡಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ರಕ್ಷಣಾ ವ್ಯವಸ್ಥೆ ಪರಿಶೀಲಿಸಿ ಮಾತನಾಡಿದ ಅವರು ʼʼಐಎನ್‌ಎಸ್ ಖಂಡೇರಿ ಸಬ್‌ಮೆರಿನ್‌ ಮೇಕ್‌ ಇನ್‌ ಇಂಡಿಯಾಗೆ ಒಂದು ಉದಾಹರಣೆಯಾಗಿದೆ. ಈಗಾಗಲೇ 41 ಸಬ್‌ಮೆರಿನ್‌ ಹಾಗೂ 31 ನೌಕೆಗಳನ್ನು ಭಾರತದಲ್ಲೇ ನಿರ್ಮಿಸಲಾಗುತ್ತಿದೆ. ಭಾರತದ ನೌಕಾಪಡೆಯನ್ನು ಜಗತ್ತಿನ ಶಕ್ತಿಶಾಲಿ ನೌಕಾದಳಗಳಲ್ಲಿ ಒಂದುʼʼ ಎಂದರು.

ʼʼಸಮುದ್ರದಾಳದಲ್ಲಿ ನೌಕಾದಳದ ಕಾರ್ಯಾಚರಣೆ ಹೇಗೆ ನಡೆಯುತ್ತದೆ ಎಂದು ಐಎನ್‌ಎಸ್ ಖಂಡೇರಿಯಲ್ಲಿ ಪ್ರಯಾಣ ಮಾಡುವ ಮೂಲಕ ವೀಕ್ಷಿಸಿದ್ದೇನೆ. ಭಾರತ ನೌಕಾದಳದ ಸಾಮರ್ಥ್ಯದ ಬಗ್ಗೆ ಅಡ್ಮಿರಲ್ ಆರ್. ಹರಿಕುಮಾರ್ ಹಾಗೂ ಪಶ್ಚಿಮ ನೌಕಾ ವಲಯ ಮುಖ್ಯಸ್ಥ ಅಜೇಂದ್ರ ಬಹಾದ್ದೂರ್ ಸಿಂಗ್ ಮಾಹಿತಿ ನೀಡಿದ್ದಾರೆ, ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಇದನ್ನು ನೋಡಿದ ಬಳಿಕ ಯಾವುದೇ ಬಾಹ್ಯ ದಾಳಿಗಳನ್ನು ನಮ್ಮ ಸೈನ್ಯ ಧೈರ್ಯವಾಗಿ ಎದುರಿಸಲಿದೆ ಎಂಬುವುದು ಖಾತರಿಯಾಗಿದೆʼʼ ಎಂದರು.

ʼʼಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆ ಸಿದ್ಧಗೊಳ್ಳುತ್ತಿದೆ. ವಿಕ್ರಾಂತ್ ಹಾಗೂ ವಿಕ್ರಮಾದಿತ್ಯ ಭಾರತದ ನೌಕಾಶಕ್ತಿಯ ಶಕ್ತಿ ಹೆಚ್ಚಿಸಲಿವೆ. ಪ್ರಪಂಚದ ದೊಡ್ಡ ದೊಡ್ಡ ನೌಕಾಶಕ್ತಿಗಳು ಭಾರತದ ಜತೆ ಸಹಯೋಗ ಹೊಂದಲು ಆಸಕ್ತಿ ತೋರಿಸಿವೆʼʼ ಎಂದು ಹೇಳಿದರು.

ಇದಕ್ಕೂ ಮುನ್ನ ಗುರುವಾರ ಭೇಟಿ ನೀಡಿದ್ದಾಗ ನೌಕಾಸೇನೆ ಸಿಬ್ಬಂದಿ ಮತ್ತು ಕುಟುಂಬಸ್ಥರ ಯೋಗಕ್ಷೇಮವನ್ನು ರಾಜನಾಥ್‌ ಸಿಂಗ್‌ ವಿಚಾರಿಸಿ, ಸಿಬ್ಬಂದಿಯಲ್ಲಿ ಆತ್ಮಸ್ಥೈರ್ಯ ತುಂಬಿದರು. ಅಡ್ಮಿರಲ್ ಆರ್. ಹರಿಕುಮಾರ್ ಹಾಗೂ ಪಶ್ಚಿಮ ನೌಕಾವಲಯ ಮುಖ್ಯಸ್ಥ ಅಜೇಂದ್ರ ಬಹಾದ್ದೂರ್ ಸಿಂಗ್, ಫ್ಲ್ಯಾಗ್‌ ಆಫೀಸರ್‌ ರಿಯಲ್‌ ಅಡ್ಮಿರಲ್‌ ಅತುಲ್‌ ಆನಂದ್‌ ಮತ್ತಿತರರು ಇದ್ದರು.

ಇದನ್ನೂ ಓದಿ | Explainer: ಭಾರತದ ಮಿಲಿಟರಿ ವೆಚ್ಚ ರಷ್ಯಾಕ್ಕಿಂತಲೂ ಹೆಚ್ಚು!

Exit mobile version