ಶಿವಮೊಗ್ಗ: ಶಿವಮೊಗ್ಗದ ಹನಸವಾಡಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾಂತಿಯಿಂದ ಅಸ್ವಸ್ಥಗೊಂಡ 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿಯರು ಅಸ್ವಸ್ಥರಾಗಲು (Students Fell Sick) ಕಾರಣವೇನು ಎಂಬುವುದು ತಿಳಿದುಬಂದಿಲ್ಲ.
ಸೋಮವಾರ ಮಧ್ಯಾಹ್ನ ವಸತಿ ಶಾಲೆಯಲ್ಲಿ ಊಟ ಸೇವನೆ ಬಳಿಕ ಬಾಲಕಿಯರು ಅಸ್ವಸ್ಥರಾಗಿದ್ದಾರೆ. ಹೀಗಾಗಿ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳಕ್ಕೆ ಅಧಿಕಾರಿಗಳು ಧಾವಿಸಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಶಾಲೆಯ ಶಿಕ್ಷಕರು ಮೆಗ್ಗಾನ್ನಲ್ಲಿ ಮೊಕ್ಕಾಂ ಹೂಡಿದ್ದು, ವಿದ್ಯಾರ್ಥಿನಿಯರ ತಪಾಸಣೆಗೆ ನೆರವಾಗುತ್ತಿದ್ದಾರೆ. ವಸತಿ ಶಾಲೆಯಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಅಸ್ವಸ್ಥಗೊಳ್ಳುವವರ ಸಂಖ್ಯೆ ಏರುತ್ತಲೇ ಇದೆ.
ಸಿಮ್ಸ್ ನಿರ್ದೇಶಕ ವಿರೂಪಾಕ್ಷಪ್ಪ ಮಾತನಾಡಿ, ಮೊರಾರ್ಜಿ ಶಾಲೆಯ ಮಕ್ಕಳು ಮಧ್ಯಾಹ್ನ ಚಪಾತಿ, ಪಲ್ಯ, ಅನ್ನ ಸಾಂಬಾರ್ ಸೇವಿಸಿದ್ದರು. ಅದಾದ ನಂತರ ಒಬ್ಬಬ್ಬರಾಗಿ ಅಸ್ವಸ್ಥರಾಗಿದ್ದಾರೆ. ಸಂಜೆ 5ರ ನಂತರ ಶಿಕ್ಷಕರು ಮಕ್ಕಳನ್ನು ಕರೆತಂದಿದ್ದಾರೆ. ಈವರೆಗೆ 50 ಮಕ್ಕಳು ದಾಖಲಾಗಿದ್ದಾರೆ ಇನ್ನೂ 10-20 ಮಕ್ಕಳು ದಾಖಲಾಗುವ ಸಾಧ್ಯತೆ ಇದೆ. ಮಕ್ಕಳನ್ನು ಕರೆತರಲು ಆಂಬ್ಯುಲೆನ್ಸ್ ಕಳುಹಿಸಲಾಗಿದೆ ಎಂದು ತಿಳಿಸಿದರು.
ಕೆಲವರಿಗೆ ಹೊಟ್ಟೆ ನೋವು, ಇನ್ನು ಕೆಲವರಿಗೆ ವಾಂತಿ ಆಗಿದೆ. ಇನ್ನಷ್ಟು ಮಕ್ಕಳು ಸುಸ್ತಾಗಿ ತಲೆತಿರುಗಿ ಬಿದ್ದಿದ್ದಾರೆ. ಮತ್ತಷ್ಟು ಮಕ್ಕಳು ಹೆದರಿ ಆಸ್ಪತ್ರೆಗೆ ಬಂದಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಎಲ್ಲ ಮಕ್ಕಳಿಗೆ ತಜ್ಞ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಆತಂಕ ಪಡುವ ಅಗತ್ಯ ಇಲ್ಲ
ಗ್ರಾಮಾಂತರ ಶಾಸಕ ಅಶೋಕ ನಾಯಕ ಮಾತನಾಡಿ, ಮೊರಾರ್ಜಿ ಶಾಲೆಯ 80ರಷ್ಟು ಮಕ್ಕಳು ಅಸ್ವಸ್ಥರಾಗಿದ್ದಾರೆ. ಇನ್ನೂ 15 ಮಕ್ಕಳಿಗೆ ಶಾಲೆಯಲ್ಲಿ ಉಪಚರಿಸಲಾಗುತ್ತಿದೆ. ಮೇಲ್ನೋಟಕ್ಕೆ ನೀರಿನಿಂದ ತೊಂದರೆ ಆಗಿರುವ ಸಾಧ್ಯತೆ ಇದೆ. ಮಧ್ಯಾಹ್ನ ಮಕ್ಕಳು ಸೇವಿಸಿದ ಆಹಾರ, ನೀರಿನ ಸ್ಯಾಂಪಲ್ ಪಡೆಯಲಾಗಿದೆ. ಲ್ಯಾಬ್‌ನಲ್ಲಿ ಟೆಸ್ಟ್ ಮಾಡಿದ ಬಳಿಕ ನಾಳೆ ಕಾರಣ ಗೊತ್ತಾಗುತ್ತದೆ. ಎಲ್ಲ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಆತಂಕ ಪಡುವ ಅಗತ್ಯ ಇಲ್ಲ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Drunk Postman | ಈ ಗ್ರಾಮದಲ್ಲಿ ಯಾರ ಮನೆಗೂ ಬಾರದು ಪೋಸ್ಟ್; ಮದ್ಯವ್ಯಸನಿ ಪೋಸ್ಟ್ ಮ್ಯಾನ್‌ನಿಂದ ಗ್ರಾಮಸ್ಥರು ಹೈರಾಣ