Site icon Vistara News

Shakti Scheme : ಬಸ್‌ ನಿಲ್ಲಿಸದ್ದಕ್ಕೆ ಕಲ್ಲೆಸೆದ ವಿದ್ಯಾರ್ಥಿಗಳು; ಗಾಜು ಪೀಸ್‌ ಪೀಸ್!

ksrtc bus glass broken and conductor with people

ಯಾದಗಿರಿ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಶಕ್ತಿ” ಯೋಜನೆಯು (Shakti Scheme) ಜಾರಿಗೆ ಬಂದ ಮೇಲೆ ಕೆಎಸ್‌ಆರ್‌ಟಿಸಿ ಬಸ್‌ಗಳು (KSRTC Bus) ತುಂಬಿ ತುಳುಕುತ್ತಿವೆ. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರಿ ಬಸ್‌ಗಳನ್ನು ಹತ್ತುತ್ತಿದ್ದಾರೆ. ಆದರೆ, ಇದು ಇನ್ನೊಂದು ವರ್ಗವಾದ ವಿದ್ಯಾರ್ಥಿಗಳು, ಹಿರಿಯ ನಾಗರಿಕರಿಗೆ ಬಹಳವೇ ತೊಂದರೆಯನ್ನು ಕೊಡುತ್ತಿದೆ. ಒಂದೋ ರಶ್‌ ಇರುವ ಬಸ್ಸನ್ನೇ ಹತ್ತಬೇಕು. ಅಲ್ಲಿ ಜಾಗವಿಲ್ಲದೇ ಇದ್ದರೆ ಇನ್ನೊಂದು ಬಸ್‌ ಬರುವ ತನಕ ಕಾಯಬೇಕು. ಆ ಬಸ್‌ ಸಹ ರಶ್‌ ಇದ್ದರೆ? ಮತ್ತದೇ ತೊಂದರೆಯನ್ನು ಅನುಭವಿಸಬೇಕು. ಇನ್ನು ಕೆಲವು ಕಡೆ ಸರ್ಕಾರಿ ಬಸ್‌ಗಳು ರಶ್‌ ಎಂಬ ಕಾರಣಕ್ಕೋ ಅಥವಾ ವಿದ್ಯಾರ್ಥಿಗಳು ಎಂಬ ಕಾರಣಕ್ಕೋ ನಿಲುಗಡೆ ಪ್ರದೇಶವಿದ್ದರೂ ನಿಲ್ಲಿಸದೇ ಹೋಗುತ್ತಿರುವ ಆರೋಪಗಳು ಕೇಳಿಬಂದಿವೆ. ಈ ನಡುವೆ ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ಬಸ್‌ ನಿಲ್ಲಿಸದೇ ಇರುವುದಕ್ಕೆ ವಿದ್ಯಾರ್ಥಿಗಳು ಕಲ್ಲೆಸೆದು (Students pelt stones at bus) ಆಕ್ರೋಶವನ್ನು ಹೊರಹಾಕಿದ್ದಾರೆ.

ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ (Allipura Village) ವಿದ್ಯಾರ್ಥಿಗಳು ಎಂದಿನಂತೆ ಶಾಲೆಗೆ ಹೋಗುವ ಸಂಬಂಧ ಬಸ್‌ ನಿಲ್ದಾಣಕ್ಕೆ ಬಂದಿದ್ದಾರೆ. ಅವರು ಬಸ್‌ಗಾಗಿ ಹಲವು ಸಮಯದಿಂದ ಕಾಯುತ್ತಲಿದ್ದರು. ಈ ವೇಳೆ ಕಲಬುರಗಿಯಿಂದ ಯಾದಗಿರಿ ಕಡೆಗೆ ಬರುತ್ತಲಿದ್ದ ಬಸ್ ನಿಲ್ಲಿಸುವಂತೆ ವಿದ್ಯಾರ್ಥಿಗಳು ಕೈ ಅಡ್ಡ ಮಾಡಿದ್ದಾರೆ. ಆದರೆ, ಬಸ್ ನಿಲ್ಲಿಸದೆ ಮುಂದೆ ಸಾಗಿದ್ದಕ್ಕೆ ರೊಚ್ಚಿಗೆದ್ದ ವಿದ್ಯಾರ್ಥಿಗಳು ಕಲ್ಲೆಸೆದಿದ್ದಾರೆ. ಇದರಿಂದ ಬಸ್‌ನ ಹಿಂಬದಿ ಗಾಜು ಪುಡಿ ಪುಡಿ (Bus Glass Broken) ಆಗಿದೆ.

ksrtc bus and students throw stones

ಆದರೆ, ಬಸ್‌ನಲ್ಲಿ ಅದಾಗಲೇ 90ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬಸ್ ಫುಲ್ ಆಗಿದ್ದರಿಂದ ಬಸ್‌ ಅನ್ನು ನಿಲ್ಲಿಸದೇ ಹೋಗಲಾಗಿದೆ ಎಂದು ಬಸ್‌ ನಿರ್ವಾಹಕರು ಹೇಳಿದ್ದಾರೆ. ಯಾದಗಿರಿ ಕಡೆಗೆ ಹೊರಟಿದ್ದ ಬಸ್ ಇದಾಗಿತ್ತು. ಬಸ್ ನಿಲ್ಲಿಸದ ಕಾರಣ ಸಮಯಕ್ಕೆ ಸರಿಯಾಗಿ ಶಾಲೆ-ಕಾಲೇಜಿಗೆ ಹೋಗಲಾಗದೇ ಸಮಸ್ಯೆ ಆಗುತ್ತಿದೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ.

ಬಸ್‌ಗೆ ಕಲ್ಲು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಬಸ್‌ ಅನ್ನು ನಿಲ್ಲಿಸಲಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರು (Bus passengers) ಹಾಗೂ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ತಲುಪಲಾಗದೇ ಪರದಾಡಿದ್ದಾರೆ. ಜತೆಗೆ ಅಲ್ಲಿಪುರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ನಡುವೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಅವರೊಂದಿಗೂ ವಿದ್ಯಾರ್ಥಿಗಳು ವಾಗ್ವಾದ ನಡೆಸಿದ್ದಾರೆ. ಇನ್ನು ಬಸ್ ಚಾಲಕ ಹಾಗೂ ನಿರ್ವಾಹಕರು ನಡೆದಿರುವ ಸಂಗತಿಯನ್ನು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಶಟಲ್‌ ಬಸ್‌ ನಿಲ್ಲಿಸದಿದ್ದರೆ ನನಗೆ ದೂರು ಕೊಡಿ ಎಂದಿರುವ ಸಾರಿಗೆ ಸಚಿವ

ಶಟಲ್‌ ಬಸ್‌ ಆಗಿದ್ದೂ ನಿಲ್ದಾಣಗಳಲ್ಲಿ ನಿಲ್ಲಸದೇ ಹೋಗುವುದು ಕಾನೂನು ಉಲ್ಲಂಘನೆ. ಹಾಗೆ ಮಾಡುವಂತೆ ಇಲ್ಲ. ಒಂದು ವೇಳೆ ಈ ರೀತಿಯ ಪ್ರಕರಣಗಳು ಕಂಡು ಬಂದರೆ ಸಾರ್ವಜನಿಕರು ಯಾರೇ ಆದರೂ, ಆ ಸಾರಿಗೆ ಬಸ್‌ ನಂಬರ್‌ ಸಹಿತ ದೂರನ್ನು ತಮಗೆ ಪತ್ರ ಬರೆಯಿರಿ. ಅಂಥವರ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತೇನೆ. ಅಲ್ಲದೆ, ಮುಂದೆ ಈ ರೀತಿಯಾಗದಂತೆ ಅವರಿಗೆ ಎಚ್ಚರಿಕೆಯನ್ನೂ ನೀಡಲಾಗುವುದು ಎಂದು ಸಚಿವ ರಾಮಲಿಂಗಾ ರೆಡ್ಡಿ (Transport Minister Ramalinga Reddy) ಅವರು ವಿಸ್ತಾರ ನ್ಯೂಸ್‌ನ “ಹಲೋ ಸಚಿವರೇ” (Vistara News Hello Minister) ನೇರ ಫೋನ್‌ ಇನ್‌ (Vistara News Phone in) ಕಾರ್ಯಕ್ರಮದಲ್ಲಿ ಹೇಳಿದ್ದರು.

ಇದನ್ನೂ ಓದಿ: Weather Report : ಕರಾವಳಿ, ಮಲೆನಾಡಿನಲ್ಲಿ ಬಿರುಸಾಗಿ ಸುರಿಯಲಿದೆ ಮಳೆ

ಈ ನಿಟ್ಟಿನಲ್ಲಿ ಬಸ್‌ ನಿಲ್ಲಿಸದೇ ಸಮಸ್ಯೆಗಳು ಆಗುತ್ತಿದ್ದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಹೀಗೆ ಕಲ್ಲೆಸೆತ ಸೇರಿದಂತೆ ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಷ್ಟ ಮಾಡದೆ ಬಸ್‌ ನಂಬರ್‌ ಸಹಿತ ದೂರು ನೀಡಬಹುದಾಗಿದೆ.

Exit mobile version