Site icon Vistara News

Siddaganga Mutt: ಏ.23ರಂದು ಸಿದ್ಧಗಂಗಾ ಮಠದಲ್ಲಿ ನಿರಂಜನ ಪಟ್ಟಾಧಿಕಾರ, ಉತ್ತರಾಧಿಕಾರಿ ನೇಮಕ

Successor to be appointed at Siddaganga Mutt on April 23

ತುಮಕೂರು: ಸಿದ್ಧಗಂಗಾ ಮಠ ಸೇರಿದಂತೆ (Siddaganga Mutt) ಮಠದ ಪರಂಪರೆಯಲ್ಲಿರುವ 3 ಮಠಗಳಿಗೆ ಉತ್ತರಾಧಿಕಾರಿಗಳನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪವಿತ್ರ ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ದಿನವಾದ ಏಪ್ರಿಲ್‌ 23ರಂದು ನಗರದ ಸಿದ್ಧಗಂಗಾ ಮಠದಲ್ಲಿ ನಿರಂಜನ ಪಟ್ಟಾಧಿಕಾರ ಹಾಗೂ ಉತ್ತರಾಧಿಕಾರಿ ನೇಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಒಂದೇ ದಿನ ತುಮಕೂರಿನ ಸಿದ್ಧಗಂಗಾ ಮಠ, ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠ ಹಾಗೂ ದೇವನಹಳ್ಳಿ ತಾಲೂಕಿನ ಬಸವ ಕಲ್ಯಾಣ ಮಠದ ಉತ್ತರಾಧಿಕಾರಿ ಪಟ್ಟಾಧಿಕಾರ ಸ್ವೀಕರಿಸಲಿದ್ದಾರೆ.

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಮನೋಜ್ ಕುಮಾರ್, ಮಾಗಡಿ ತಾಲೂಕಿನ ಕಂಚುಗಲ್ ಬಂಡೇಮಠಕ್ಕೆ ಹರ್ಷ ಕೆ.ಎಂ, ದೇವನಹಳ್ಳಿ ತಾಲೂಕಿನ ಬಸವ ಕಲ್ಯಾಣ ಮಠಕ್ಕೆ ಗೌರೀಶ್‌ ಕುಮಾರ್‌ ಎಂಬುವವರನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿದೆ.

ಇದನ್ನೂ ಓದಿ | Eid Ul Fitr 2023: ಮಂತ್ರಾಲಯದಲ್ಲಿ ರಾಯರ ದರ್ಶನ ಪಡೆದ ಮುಸ್ಲಿಮರು; ಸುಬುಧೇಂದ್ರ ತೀರ್ಥರಿಂದ ಆಶೀರ್ವಚನ

ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಮನೋಜ್ ಕುಮಾರ್

ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಮನೋಜ್ ಕುಮಾರ್ ಅವರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮೈಲಹಳ್ಳಿ ಮೂಲದವರು. ಷಡಾಕ್ಷರಯ್ಯ‌-ವಿರುಪಾಕ್ಷಮ್ಮ ದಂಪತಿಯ ಪುತ್ರರಾದ ಮನೋಜ್‌ಕುಮಾರ್ ಸಿದ್ಧಗಂಗಾ ಮಠದಲ್ಲೇ ಬಿ.ಎಸ್ಸಿ, ಬಿ.ಎಡ್, ಎಂ.ಎಸ್ಸಿ, ಎಂಎ, ವಿದ್ವತ್ ಪದವಿ ಪಡೆದಿದ್ದು, ಪ್ರಸ್ತುತ ಸಿದ್ಧಗಂಗಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದಾರೆ.

ಇನ್ನು ಕಂಚುಗಲ್ ಬಂಡೇಮಠ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಹರ್ಷಾ ಕೆ.ಎಂ ಅವರು ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿಯ ಕಾಳೇನಹಳ್ಳಿ ಮೂಲದವರು. ಮಹಂತೇಶ್ – ಮಲ್ಲಾಜಮ್ಮ‌ ದಂಪತಿ ಪುತ್ರರಾದ ಇವರು, ಬಿ.ಎ,‌ ಬಿಇಡಿ ಪೂರೈಸಿದ್ದು, ಎಂಎ ಸಂಸ್ಕೃತ ವಿದ್ವತ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ | Parshurama Jayanti 2023 : ಕ್ಷಾತ್ರ ತೇಜದ ಋಷಿಪುತ್ರ ಪರಾಕ್ರಮಿ ಪರಶುರಾಮ

ದೇವನಹಳ್ಳಿ ತಾಲೂಕಿನ ಬಸವಕಲ್ಯಾಣ ಮಠದ ಉತ್ತರಾಧಿಕಾರಿಯಾಗಿ ನೇಮಕವಾಗಿರುವ ಗೌರೀಶ್ ಕುಮಾರ್ ಅವರು, ಮಂಡ್ಯ ಜಿಲ್ಲೆ ದುದ್ದಾ ಹೋಬಳಿಯ ಬಿಳಗುಲಿ ಗ್ರಾಮದ ನಿವಾಸಿಯಾಗಿದ್ದಾರೆ. ಗಣೇಶ್ – ಅಂಬಿಕಾ ದಂಪತಿ ಪುತ್ರರಾದ ಇವರು, ವೇದಾಧ್ಯಯನ, ವಿದ್ವತ್ ಪ್ರಥಮ ವರ್ಷ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

Exit mobile version