ವಿಜಯಪುರ/ರಾಯಚೂರು: ರಾಯಚೂರಿನಲ್ಲಿ ಕಲುಷಿತ ನೀರು ಸೇವಿಸಿ ಅನೇಕರು ಮೃತಪಟ್ಟ ಘಟನೆ ಕಣ್ಣಮುಂದೆ ಇರುವಾಗಲೇ, ಜಿಲ್ಲೆಯ ಇಂಡಿ ತಾಲೂಕಿನ ಸಾತಪೂರ ಗ್ರಾಮದ ಸುಮಾರು 70 ಮಂದಿಗೆ ವಾಂತಿ- ಭೇದಿ ಕಾಣಿಸಿಕೊಂಡಿದೆ. ಅಸ್ವಸ್ಥರಾದ 42 ಜನರು ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಹಾಗೂ ಸುಮಾರು 30 ಜನರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೇ ವೇಳೆ, ರಾಯಚೂರಿನ ಮಾನ್ವಿ ತಾಲೂಕಿನಲ್ಲೂ ಕುಡಿಯುವ ನೀರು ಕಲುಷಿತವಾಗಿ ಸಮಸ್ಯೆ ಉಂಟಾಗಿದೆ.
ಶನಿವಾರ ಬೆಳಗ್ಗೆ ಗ್ರಾಮದ ಜನರಲ್ಲಿ ದಿಢೀರನೆ ವಾಂತಿ ಹಾಗೂ ಭೇದಿ ಸಮಸ್ಯೆ ಕಾಣಿಸಿಕೊಂಡಿದೆ. ಭಾನುವಾರ ವಾಂತಿ-ಭೇದಿ ಉಲ್ಬಣಗೊಂಡ ಕಾರಣ ಅಸ್ವಸ್ಥರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಕಲುಷಿತ ಕುಡಿಯುವ ನೀರು ಸೇವನೆಯಿಂದ ಸಮಸ್ಯೆಯಾಗಿರುವ ಶಂಕೆ ಉಂಟಾಗಿದೆ.
ಇಂಡಿ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯಿಂದ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತದೆ. ಗ್ರಾಮದಲ್ಲಿನ ನೀರಿನ ಮಾದರಿಯನ್ನು ವಿಜಯಪುರ ಪರೀಕ್ಷಾಲಯಕ್ಕೆ ಕಳುಹಿಸಲಾಗಿದೆ. ನೀರಿನ ಪರೀಕ್ಷಾ ವರದಿ ಬಂದ ಬಳಿಕ ಸಮಸ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.
ಇದನ್ನೂ ಓದಿ | ಯುವಕನನ್ನು ರಕ್ಷಿಸಿದ ಸಿಬ್ಬಂದಿಗೆ ಪೊಲೀಸ್ ಇಲಾಖೆ ಶ್ಲಾಘನೆ
ಇಂಡಿ ತಾಲೂಕು ಆಸ್ಪತ್ರೆಗೆ ಸ್ಥಳಿಯ ಶಾಸಕ ಯಶವಂತರಾಯಗೌಡ ಪಾಟೀಲ್ ಭೇಟಿ ನೀಡಿ, ಅಸ್ವಸ್ಥರಾದವರ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದರು. ಸೂಕ್ತ ಚಿಕಿತ್ಸೆ ನೀಡಲು ವೈದ್ಯರಿಗೆ ಸೂಚಿಸಿದರು. ಸಮಸ್ಯೆಗೆ ನಿಖರ ಕಾರಣ ಕಂಡುಕೊಳ್ಳಲು ಆರೋಗ್ಯಾಧಿಕಾರಿಗಳು ಹಾಗೂ ಇತರ ಆಧಿಕಾರಿಗಳಿಗೆ ಸೂಚನೆ ನೀಡಿದರು.
ರಾಯಚೂರು ಜಿಲ್ಲೆಯಲ್ಲಿ ಕಲುಷಿತ ನೀರು ಸೇವಿಸಿ ೩೦ ಮಂದಿ ಅಸ್ವಸ್ಥ
ರಾಯಚೂರು: ಜಿಲ್ಲೆಯಲ್ಲಿ ಮತ್ತೊಂದು ಕಲುಷಿತ ನೀರಿನ ದುರಂತ ನಡೆದಿದ್ದು, ಮಾನ್ವಿ ತಾಲೂಕಿನ ವಲ್ಕಂ ದಿನ್ನಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾದ ಗ್ರಾಮದ 10 ವಿದ್ಯಾರ್ಥಿಗಳು ಸೇರಿ 30 ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಸ್ಪತ್ರೆಗೆ ದಾಖಲಾದವರಲ್ಲಿ ಸರ್ಕಾರಿ ಶಾಲೆಯ ಹತ್ತು ಮಕ್ಕಳಿಗೆ ನಿರ್ಜಲೀಕರಣ ಸಮಸ್ಯೆ ಉಂಟಾಗಿದೆ. ಗ್ರಾಮಕ್ಕೆ ತುಂಗಭದ್ರಾ ನದಿ ನೀರು ಸರಬರಾಜು ಆಗುತ್ತಿದ್ದು, ನೀರು ಕಲುಷಿತವಾದ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ವಾಂತಿ ಭೇದಿಯಿಂದ ಅಸ್ವಸ್ಥರಾದವರಿಗೆ ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಇದನ್ನೂ ಓದಿ | ಖಾಸಗಿ ಆಸ್ಪತ್ರೆಗಳ ತಂತ್ರಕ್ಕೆ ಆರೋಗ್ಯ ಇಲಾಖೆ ತಿರುಮಂತ್ರ: ಕೋವಿಡ್ ಹಣ ವಸೂಲಿ