ಶಿಕಾರಿಪುರ: ಬಿಜೆಪಿ ಪರವಾಗಿ ಚುನಾವಣಾ (Karnataka Election) ಪ್ರಚಾರಕ್ಕೆ ಇಳಿದಿರುವ ಚಂದನವನದ ನಟ ಕಿಚ್ಚ ಸುದೀಪ್ ಅವರು ಇದೀಗ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದಾರೆ.
ಶಿಕಾರಿಪುರದಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಕಿಚ್ಚ ಅವರು ಬಿಜೆಪಿ ಅಭ್ಯರ್ಥಿ ಬಿ.ವೈ. ವಿಜಯೆಂದ್ರ ಅವರ ಪರ ಮತ ಯಾಚಿಸಿದರು. ಅವರಿಗೆ ಸಂಸದ ಬಿ.ವೈ. ರಾಘವೇಂದ್ರ ಸಾಥ್ ನೀಡಿದರು.
ಸುಮಾರು ಎರಡು ಗಂಟೆಗಳ ಕಾಲ ನಡೆದ ರೋಡ್ ಶೋ ಅಕ್ಕಮಹಾದೇವಿ ವೃತ್ತದಿಂದ ಆರಂಭವಾಗಿ, ಪ್ರಮುಖ ರಸ್ತೆಗಳಲ್ಲಿ ಸಾಗಿ ಬಸ್ ನಿಲ್ದಾಣ ವೃತ್ತದಲ್ಲಿ ಕೊನೆಯಾಯಿತು. ನಾಲ್ಕು ಕಿಲೋಮೀಟರ್‌ನಷ್ಟು ದೂರ ಸಾಗಿದ ಈ ರೋಡ್ ಶೋನಲ್ಲಿ ಸಾವಿರಾರು ಜನರು ರಸ್ತೆಯ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸಿದರು. ಹಲವರು ಹೂವುಗಳನ್ನು ಎರಚಿ ಸಂಭ್ರಮಿಸಿದರು. ಬಿ.ವೈ. ವಿಜಯೇಂದ್ರ, ಬಿ.ವೈ. ರಾಘವೇಂದ್ರ ಹಾಗೂ ಯಡಿಯೂರಪ್ಪ ಪರ ಘೋಷಣೆ ಕೂಗಿದರು.
ಈ ವೇಳೆ “ಕಿಚ್ಚ ಕಿಚ್ಚ” ಎಂಬ ಘೋಷಣೆಯಂತೂ ಮುಗಿಲು ಮುಟ್ಟಿತ್ತು. ಕಿಚ್ಚ ಸುದೀಪ್ ಅವರು ಮದಕರಿ ಸಿನಿಮಾದ “ಕೋಪದಲ್ಲಿದ್ದಾಗ ದೇವ್ರು ಎಂಥೆಂತವರನ್ನೋ ಸೃಷ್ಟಿ ಮಾಡ್ತಾನೆ. ಆದ್ರೆ ಖುಷಿಯಲ್ಲಿದ್ದಾಗ ಕಿಚ್ಚ ಸುದೀಪ್ ತರದವರನ್ನು ಸೃಷ್ಟಿ ಮಾಡ್ತಾನೆ” ಡೈಲಾಗ್ ಹೇಳಿ ರಂಜಿಸಿದರು.
ರೋಡ್ ಶೋ ಉದ್ದಕ್ಕೂ ಬಿಜೆಪಿಯ ಬಾವುಟಗಳು, ಕಿಚ್ಚ ಸುದೀಪ್ ಅವರ ಫೋಟೊಗಳು, ಪ್ಲಕಾರ್ಡ್‌ಗಳು, ರಾರಾಜಿಸಿದವು.
ಈ ವೇಳೆ ಮಾತನಾಡಿದ ಸುದೀಪ್, ಬಿ.ವೈ. ವಿಜಯೇಂದ್ರ ಅವರು ಸೋಲಲು ಶಿಕಾರಿಪುರದ ಜನರು ಬಿಡುವುದಿಲ್ಲ. ಗೆಲ್ಲಿಸಿಯೇ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. “ಬಿ.ವೈ.ವಿಜಯೇಂದ್ರ ಅವರು ಇದುವರೆಗೆ ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಆದರೆ, ಇಂದು ಮೊದಲ ಬಾರಿ ಪರೀಕ್ಷೆ ಬರೆಯೋ ವಿದ್ಯಾರ್ಥಿ ರೀತಿ ಆಗಿದ್ದಾರೆ. ಅವರ ಮೊದಲ ಚುನಾವಣೆ ಇದು. ಶಿಕಾರಿಪುರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯ, ಜನರ ಬೆಂಬಲ ನೋಡಿದರೆ ಅವರ ಗೆಲವು ಖಚಿತ ಎಂಬುದು ಸ್ಪಷ್ಟ” ಎಂದರು.
ಇದನ್ನೂ ಓದಿ: Karnataka Election : ಯಾರು ಏನೇ ಹೇಳಿದ್ರೂ ಲಿಂಗಾಯತರ ಮತ ಬಿಜೆಪಿಗೇ; ಬಿಎಸ್‌ವೈ ಪುನರುಚ್ಚಾರ
“ಒಂದು ವೋಟ್‌ನಿಂದ ಗೆದ್ದರೂ ಗೆಲುವೇ, ಸಾವಿರ ವೋಟ್‌ನಿಂದ ಗೆದ್ದರೂ ಗೆಲುವೇ. ಗೆಲ್ಲುವುದಷ್ಟೇ ಮುಖ್ಯವಲ್ಲ. ಗತ್ತಿನಿಂದ ಗೆಲ್ಲಬೇಕು” ಎಂದು ಹೇಳಿದ ಸುದೀಪ್, ಎಲ್ಲರೂ ಅವರಿಗೆ ಮತ ಹಾಕಿ ಭಾರಿ ಅಂತರದಿಂದ ಗೆಲ್ಲಿಸಿ ಎಂದು ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, “ಶಿಕಾರಿಪುರಕ್ಕೆ ಇನ್ನಷ್ಟು ಏತ ನೀರಾವರಿ ಯೋಜನೆ ತರಲಿದ್ದೇವೆ. ಇದೇ ವೃತ್ತದಲ್ಲಿ ಯಡಿಯೂರಪ್ಪ ಅವರ ಮೇಲೆ ಹಲ್ಲೆ ನಡೆದಿತ್ತು. ಆದರೆ, ಅವರು ಬದುಕಿ ಬಂದಿದ್ದರು. ಶಿಕಾರಿಪುರ ಜನತೆಯ ಏಳಿಗೆಗಾಗಿ ಯಡಿಯೂರಪ್ಪ ಅವರು ರಕ್ತವನ್ನು ಸುರಿಸಿದ್ದಾರೆ. ನೀರು ಕೊಟ್ಟಿದ್ದಾರೆ” ಎಂದರು.
ಅಭ್ಯರ್ಥಿ ಬಿ.ವೈ.ವಿಜಯೇಂದ್ರ ಮಾತನಾಡಿ, “ತಂದೆಯವರಾದ ಯಡಿಯೂರಪ್ಪ ಅವರು ಹಾಗೂ ಸಂಸದ ಬಿ.ವೈ. ರಾಘವೇಂದ್ರ ಅವರು ಕ್ಷೇತ್ರದಲ್ಲಿ ಮಾಡಿದ ಕೆಲಸಗಳನ್ನು ಜನರು ನೋಡಿದ್ದಾರೆ. ನನ್ನ ಮೇಲೆಯೂ ಜನತೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಜನರ ಏಳಿಗೆಗಾಗಿ ನಿರಂತರ ಕೆಲಸ ಮಾಡುವುದೇ ನನ್ನ ಗುರಿ” ಎಂದರು.