ಚಿಕ್ಕಮಗಳೂರು: ಇಲ್ಲಿನ ಮೂಡಿಗೆರೆ ತಾಲೂಕಿನ ಮಲೆಮನೆ, ಮಧುಗುಂಡಿ ಗ್ರಾಮಸ್ಥರು ತಾಲೂಕು ಕಚೇರಿಯಲ್ಲಿ ವಿಷ ಹಾಗೂ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ (Suicide Attempt) ಯತ್ನಿಸಿರುವ ಘಟನೆ ನಡೆದಿದೆ.
ನೆರೆ ಸಂತ್ರಸ್ತರನ್ನು ಸರ್ಕಾರ ನಡುನೀರಲ್ಲಿ ಕೈಬಿಟ್ಟಿದೆ. ನೆರೆ ಸಂತ್ರಸ್ತರ ಸಮಸ್ಯೆ ಬಗೆಹರಿಸಲು ಸರ್ಕಾರ ನೀಡಿದ ನೂರಾರು ಕೋಟಿ ಹಣ ಎಲ್ಲಿ ಹೋಯಿತು? ನಾಲ್ಕು ವರ್ಷ ಕಳೆದರೂ ಪರಿಹಾರ ಮಾತ್ರ ಇನ್ನು ಸಿಕ್ಕಿಲ್ಲವೆಂದು ಕಿರಿಕಾರಿದರು. ಪರಿಹಾರಕ್ಕಾಗಿ ಅಲೆದು ಶುಕ್ರವಾರ ಮೂಡಿಗೆರೆಯ ತಾಲೂಕು ಆಸ್ಪತ್ರೆಯಲ್ಲಿ ಮಲೆಮನೆ ಮತ್ತು ಮದುಗುಂಡಿ ಸಂತ್ರಸ್ತರು ಪೆಟ್ರೋಲ್ ಸುರಿದುಕೊಂಡು, ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಮಲೆಮನೆ-ಮಧುಗುಂಡಿ ಗ್ರಾಮಸ್ಥರು 2019ರಲ್ಲಿ ಬಂದ ನೆರೆಯಿಂದ ಸುಮಾರು 11 ಕುಟುಂಬಗಳು ಮನೆ, ಆಸ್ತಿ, ಹೊಲ, ಗದ್ದೆ ಎಲ್ಲವನ್ನೂ ಕಳೆದುಕೊಂಡಿವೆ. ಮಲೆಮನೆಯ ಆರು ಮನೆಗಳು ಸಂಪೂರ್ಣ ನೆಲಸಮವಾಗಿದ್ದವು. ಪರಿಣಾಮ ಮನೆಯಲ್ಲಿದ್ದ ಒಂದೇ ಒಂದು ಚಮಚ ಕೂಡ ಸಿಗದಂತೆ ಎಲ್ಲವನ್ನೂ ಕಳೆದುಕೊಂಡಿದ್ದರು.
ನಾಲ್ಕು ವರ್ಷದಿಂದ ಪರಿಹಾರಕ್ಕಾಗಿ ಕಾದು ಕೂತರೂ ಪ್ರಯೋಜನವಾಗಿಲ್ಲ ಎಂದು ಕಿಡಿಕಾರಿದರು. ಪರ್ಯಾಯ ಜಾಗ ತೋರಿಸಿದರೂ ಆ ಜಾಗಕ್ಕೆ ಮತ್ತೊಬ್ಬರಿಗೆ ದಾಖಲೆ ಮಾಡಿಕೊಟ್ಟ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ಹೊರಹಾಕಿದರು.