ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಸಬ್ಬತ್ತಿ ಗ್ರಾಮದಲ್ಲಿ ವೈಯಕ್ತಿಕ ಕಾರಣಕ್ಕೆ ವ್ಯಕ್ತಿಯೊಬ್ಬರು ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದು, ಗಂಡು ಮಕ್ಕಳು ಇಲ್ಲದ ಕಾರಣ ಅಂತ್ಯ ಸಂಸ್ಕಾರವನ್ನು ಯಾರು ಮಾಡಬೇಕು ಎಂಬ ಪ್ರಶ್ನೆ ಎದ್ದಿತ್ತು. ಕೊನೆಗೆ ಹಿರಿಯ ಹೆಣ್ಣು ಮಗಳೇ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.
ಮಂಜುನಾಥ ನಾಗಪ್ಪ ನಾಯ್ಕ (51) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರವಷ್ಟೇ (ನ.೨೧) ಮನೆಯ ಗೃಹಪ್ರವೇಶ ಮಾಡಿ ಮುಗಿಸಿದ್ದ ಮಂಜುನಾಥ ಅವರು ಮನೆಯ ಬಳಿ ಮರಕ್ಕೆ ಲುಂಗಿ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೈಯಕ್ತಿಕ ಕಾರಣಕ್ಕಾಗಿ ಸಾವಿಗೆ ಶರಣಾಗಿದ್ದರು ಎನ್ನಲಾಗಿದೆ.
ಮಂಜುನಾಥ್‌ಗೆ ಮೂವರು ಹೆಣ್ಣು ಮಕ್ಕಳು ಇದ್ದಾರೆ. ಹಿಂದು ಸಂಪ್ರದಾಯದ ಪ್ರಕಾರ ಗಂಡು ಮಕ್ಕಳು ಅಂತ್ಯಕ್ರಿಯೆ ಮಾಡಬೇಕು. ಆದರೆ, ಇಲ್ಲಿ ಇರುವ ಮೂವರು ಹೆಣ್ಣು ಮಕ್ಕಳಲ್ಲಿ ಯಾರಿಗೂ ಇನ್ನೂ ವಿವಾಹವಾಗಿಲ್ಲ. ಈ ಕಾರಣದಿಂದ ಅಂತಿಮ ಸಂಸ್ಕಾರವನ್ನು ಯಾರು ಮಾಡಬೇಕು ಎಂಬ ಸಮಸ್ಯೆ ಉದ್ಭವಿಸಿತ್ತು. ಈ ಎಲ್ಲ ಚರ್ಚೆಗಳ ಮಧ್ಯೆಯೇ ಮಂಜುನಾಥ ಅವರ ಹಿರಿಯ ಮಗಳಾದ ಶ್ವೇತಾ ನಾಯ್ಕ ಅಂತ್ಯಕ್ರಿಯೆ ನೆರವೇರಿಸಲು ಮುಂದಾದರು. ಧಾರ್ಮಿಕ ವಿಧಿಗಳನ್ನು ಪೂರೈಸಿ ತಂದೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದಾರೆ.
ಇದನ್ನೂ ಓದಿ | ಮಂಗಳೂರು ಸ್ಫೋಟ | ಮೈಸೂರಲ್ಲಿ ಹಿಂದು ಎಂದೇ ಗುರುತಿಸಿಕೊಂಡಿದ್ದ ಶಾರಿಕ್‌ನ ಮುಸ್ಲಿಂ ಫ್ರೆಂಡ್ ಅರೆಸ್ಟ್