ಕಾರವಾರ: ಬೇಸಿಗೆ ರಜೆಯನ್ನು (Summer Holidays) ಕಳೆಯಲು ಪ್ರವಾಸಿಗರು ನೀರಿರುವ ಪ್ರದೇಶಗಳತ್ತ ಮುಖಮಾಡಿದ್ದು ಕಡಲತೀರಗಳಿಗೆ ಹೆಸರುವಾಸಿಯಾಗಿರುವ ಉತ್ತರಕನ್ನಡ ಕರಾವಳಿಯತ್ತ ಇದೀಗ ಪ್ರವಾಸಿಗರ ದಂಡೇ ಮುಗಿಬೀಳುತ್ತಿದೆ. ಬಿರುಬೇಸಿಗೆಗೆ ಸಮುದ್ರದಲ್ಲಿ ಈಜಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ವಿಶಾಲವಾದ ಕಡಲತೀರಗಳಿಗೆ ಹೆಸರುವಾಸಿಯಾದ ಉತ್ತರಕನ್ನಡದ ಬೀಚ್‌ಗಳತ್ತ ಇದೀಗ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು ಕಾರವಾರ, ಗೋಕರ್ಣ, ಹೊನ್ನಾವರ ಹಾಗೂ ಮುರ್ಡೇಶ್ವರದಲ್ಲಿ ಕಣ್ಣುಹಾಯಿಸಿದಷ್ಟು ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ಕರಾವಳಿ ಭಾಗದಲ್ಲೂ ಬಿಸಿಲಿನ ಶಾಖ ಜೋರಾಗಿಯೇ ಇದೆ. ಆದರೂ ಕಡಲತೀರಗಳಲ್ಲಿ ತಣ್ಣಗೆ ಗಾಳಿ ಬೀಸುವುದರಿಂದ ಇಲ್ಲಿನ ಸಮುದ್ರದ ನೀರಿನಲ್ಲಿ ಈಜಾಡುತ್ತಾ ತಣ್ಣಗೆ ಬೀಸುವ ಗಾಳಿಗೆ ಮೈಯೊಡ್ಡಿ ಜನರು ಬಿಸಿಲಿನ ಬೇಗೆಯಿಂದ ಕೊಂಚ ರಿಲ್ಯಾಕ್ಸ್ ಆಗುತ್ತಿದ್ದಾರೆ.
ಈ ಬಾರಿ ಘಟ್ಟದ ಮೇಲಿನ ಪ್ರದೇಶಗಳಲ್ಲೂ ತೀವ್ರವಾಗಿ ತಾಪಮಾನ ಏರಿಕೆಯಾಗಿದ್ದು ಕರಾವಳಿಯಲ್ಲೇ ಕೊಂಚ ಅನುಕೂಲಕರ ವಾತಾವರಣ ಇದೆ ಎನ್ನುವಂತಾಗಿದೆ. ಹೀಗಾಗಿ ಜನರು ಕುಟುಂಬಸ್ಥರೊಂದಿಗೆ ಒಟ್ಟಾಗಿ ವೀಕೆಂಡ್‌ಗಳಲ್ಲಿ ಇಲ್ಲಿನ ಕಡಲತೀರಗಳಿಗೆ ಭೇಟಿ ನೀಡುವ ಮೂಲಕ ರಜೆಯ ಮಜವನ್ನು ಎಂಜಾಯ್ ಮಾಡುತ್ತಿದ್ದಾರೆ.
ಇದನ್ನೂ ಓದಿ: Weather Report: ಕರಾವಳಿಯಲ್ಲಿ ತಗ್ಗಿದ ಮಳೆ ಅಬ್ಬರ; ಬೆಂಗಳೂರು, ಮೈಸೂರು ಗುಡುಗು ಸಹಿತ ಮಳೆ ಸಾಧ್ಯತೆ
ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ 26 ರಿಂದ 35 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಇರುತ್ತಿದ್ದು, ತೇವಾಂಶದ ಪ್ರಮಾಣ ಜಾಸ್ತಿಯಿರುವ ಹಿನ್ನೆಲೆ 40 ಡಿಗ್ರಿಯಷ್ಟು ಸೆಕೆಯ ಅನುಭವವಾಗುತ್ತಿದೆ. ಆದರೆ ಕಡಲತೀರಗಳ ಬಳಿ ಜೋರಾಗಿ ಗಾಳಿ ಬೀಸುವುದರಿಂದ ಹೆಚ್ಚು ಬಿಸಿಲಿದ್ದರೂ ಅಷ್ಟೊಂದು ಸೆಕೆ ಎನಿಸುವುದಿಲ್ಲ. ಜತೆಗೆ ಸಮುದ್ರದ ನೀರಿನ ತಾಪಮಾನ ಹಗಲಿನಲ್ಲಿ ಕೊಂಚ ಕಡಿಮೆಯಿರುವುದರಿಂದ ಬಂದಂತಹ ಪ್ರವಾಸಿಗರಿಗೆ ಬೀಚ್‌ಗಳಲ್ಲಿ ಹೆಚ್ಚು ಕಾಲಕಳೆಯುತ್ತಿದ್ದಾರೆ.