ಬೆಂಗಳೂರು: ರಾಜಕೀಯ ತಂತ್ರಜ್ಞ ಸುನೀಲ್ ಕನುಗೋಳು (Sunil Kanugolu) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಖ್ಯ ಸಲಹೆಗಾರರಾಗಿ ನೇಮಕಗೊಂಡಿದ್ದಾರೆ. ಅಲ್ಲದೆ, ಅವರಿಗೆ ಸಂಪುಟ ದರ್ಜೆಯ ಸಚಿವರ ಸ್ಥಾನಮಾನ ಮತ್ತು ಸೌಲಭ್ಯ ನೀಡಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇ 31ರಂದು ಆದೇಶ ಹೊರಡಿಸಿದ್ದಾರೆ.
ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ ಕಂಪನಿ ಮೆಕೆನ್ಸಿಯ ಸಲಹೆಗಾರರಾಗಿದ್ದ 42 ವರ್ಷದ ಸುನೀಲ್ ಕನುಗೋಳು ಬಳ್ಳಾರಿಯವರು. ಆದರೆ ಓದಿದ್ದು, ಬೆಳೆದಿದ್ದು ಎಲ್ಲ ಚೆನ್ನೈನಲ್ಲಿ. ಬಳ್ಳಾರಿಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರ ಕುಟುಂಬ ಚೆನ್ನೈಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಓದಿದ ಅವರು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಹೋಗಿದ್ದರು. ಎಂಜಿನಿಯರಿಂಗ್ ಓದಿರುವ ಅವರು, ಫೈನಾನ್ಸ್ ವಿಷಯದಲ್ಲಿ ಎಂಎಸ್ಸಿ ಮಾಡಿದ್ದಾರೆ. ಅಲ್ಲದೆ ಎಂಬಿಎ ಪದವಿಯನ್ನೂ ಪಡೆದುಕೊಂಡಿದ್ದಾರೆ. 2009ರಲ್ಲಿ ಅಮೆರಿಕದಿಂದ ಹಿಂದಿರುಗಿ, 2014ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಸ್‌ಆರ್ ಇಂಡಿಪೆಂಡೆಂಟ್ ಫಿಷರೀಸ್ ಪ್ರವೇಟ್ ಲಿಮಿಟೆಡ್, ಎಸ್‌ಆರ್ ನ್ಯೂಟ್ರೋ ಫುಡ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಬ್ರೈನ್ ಸ್ಟ್ರೋಮ್ ಇನೋವೇಷನ್ ಅಂಡ್ ರಿಸರ್ಚ್ ಪ್ರವೇಟ್ ಲಿಮಿಟೆಡ್ (BSIR) ಕಂಪನಿಗಳ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ: Karnataka CM: ಸಿಎಂ ಮಾಧ್ಯಮ ಸಲಹೆಗಾರರಾಗಿ ಕೆ.ವಿ. ಪ್ರಭಾಕರ್, ಹೆಚ್ಚುವರಿ ಕಾರ್ಯದರ್ಶಿಯಾಗಿ ರಜನೀಶ್
ಸುನೀಲ್ ಕನುಗೋಳು ಇಷ್ಟುವರ್ಷ ಬಿಜೆಪಿಗಾಗಿ ಕೆಲಸ ಮಾಡಿದ್ದರು. 2014ರ ಚುನಾವಣೆಯಿಂದ ಪ್ರಧಾನಿ ಮೋದಿ ಪ್ರಚಾರಕ ಹುದ್ದೆ ನಿರ್ವಹಿಸಿದ್ದರು. ಈ ಸಲ ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೂ ಪೂರ್ವ ಸಮೀಕ್ಷೆಯೊಂದನ್ನು ನಡೆಸಿ, ಕಾಂಗ್ರೆಸ್ಗೆ 120 ಪ್ಲಸ್ ಸೀಟ್ಗಳು ಗ್ಯಾರಂಟಿ ಎಂದಿದ್ದರು ಮತ್ತು ಕೈ ಗೆಲುವಿಗೆ ಬೇಕಾದ ಎಲ್ಲ ಯೋಜನೆಗಳನ್ನೂ ವ್ಯವಸ್ಥಿತವಾಗಿ ಮಾಡಿಕೊಟ್ಟಿದ್ದರು. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಲ್ಲಿ ಇದೇ ಸುನೀಲ್ ಕನುಗೋಳು ಮುಖ್ಯಪಾತ್ರ ವಹಿಸಿದ್ದರು. ಅಷ್ಟೇ ಅಲ್ಲ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಗಳಲ್ಲೂ ಬಿಜೆಪಿ ಪರ ಕೆಲಸ ಮಾಡಿದ್ದಾರೆ.
ಈ ಸಲ ಕರ್ನಾಟಕದಲ್ಲಿ ಕಾಂಗ್ರೆಸ್ ಜತೆ ಇದ್ದರು. ಬಿಜೆಪಿ ವಿರುದ್ಧ ಪೇಸಿಎಂ, 40 ಪರ್ಸೆಂಟ್ ಕಮಿಷನ್ ಸರ್ಕಾರ ಎಂಬ ಅಭಿಯಾನ ಅತ್ಯಂತ ಪರಿಣಾಮಕಾರಿಯಾಗಿ ನಡೆಯುವಂತೆ ನೋಡಿಕೊಂಡರು. ಸೋಷಿಯಲ್ ಮೀಡಿಯಾಕ್ಕೆ ಸಂಬಂಧಪಟ್ಟಂತೆ ಕಾರ್ಯತಂತ್ರ ಹೆಣೆದುಕೊಟ್ಟು, ಐಟಿ ಸೆಲ್ ಕಾರ್ಯಕರ್ತರು ಶಿಸ್ತಿನಿಂದ ಅದನ್ನು ಪಾಲಿಸುವಂತೆ ಮಾಡಿದ್ದರು. ಈ ಜಮಾನಾದಲ್ಲಿ ಸೋಷಿಯಲ್ ಮೀಡಿಯಾ ತುಂಬ ಪ್ರಭಾವ ಬೀರುತ್ತದೆ ಎಂಬುದನ್ನು ಅರಿತಿದ್ದ ಅವರು ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಇದನ್ನೊಂದು ಮುಖ್ಯ ಅಂಶವಾಗಿ ಸೇರಿಸಿದ್ದರು. 2024ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ರೂಪಿಸಿರುವ ಟಾಸ್ಕ್ ಫೋರ್ಸ್‌ನ ಸದಸ್ಯರಾಗಿ ನೇಮಕಗೊಂಡಿರುವ ಸುನೀಲ್, ಈ ವರ್ಷ ನಡೆಯಲಿರುವ ಮಧ್ಯಪ್ರದೇಶ, ರಾಜಸ್ಥಾನ ರಾಜ್ಯಗಳ ಚುನಾವಣೆಯ ತಂತ್ರಗಾರಿಕೆ ರೂಪಿಸುವಲ್ಲೂ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.