| ಶಶಿಧರ ಮೇಟಿ, ಬಳ್ಳಾರಿ
ಅಕ್ರಮ ಗಣಿಗಾರಿಕೆಯಿಂದಾಗಿ ಜಿಲ್ಲೆಯ ಅದಿರು ಉತ್ಪಾದನೆ ಮೇಲಿದ್ದ ಸುಪ್ರೀಂಕೋರ್ಟ್‌ನ ಶಾಪ ಕೊಂಚ ವಿಮೋಚನೆಯಾಗಿದೆ. ಕಳೆದ ಮೂರ್ನಾಲ್ಕು ತಿಂಗಳ ಅವಧಿಯಲ್ಲಿ, ಅದಿರು ಉತ್ಪಾದನೆಯ ಮೇಲಿನ ಮಿತಿ, ಮಾರಾಟದ ಮೇಲೆ ವಿಧಿಸಿದ್ದ ಷರತ್ತನ್ನು ಸುಪ್ರೀಂಕೋರ್ಟ್ ಸಡಿಲಗೊಳಿಸಿ, ರಫ್ತು ನಿರ್ಬಂಧವನ್ನು ತೆರವುಗೊಳಿಸಿರುವುದು ಗಣಿಗಾರಿಕೆ ವಲಯಕ್ಕೆ ದೊಡ್ಡ ರಿಲೀಫ್ ನೀಡಿದೆ.
ಅಂದು ಗಣಿಗಾರಿಕೆಗೆ ಸುಪ್ರೀಂನಿಂದ ಮೂಗುದಾರ
ಇಲ್ಲಿ ನಡೆದ ಅಕ್ರಮ ಗಣಿಗಾರಿಕೆ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಲೋಕಾಯುಕ್ತ ತನಿಖೆ, ನಂತರ ಸಿಬಿಐ ತನಿಖೆ ಕೂಡ ನಡೆದಿತ್ತು. ಅಕ್ರಮವಾಗಿ ನಡೆಯುತ್ತಿದ್ದ ಗಣಿಗಾರಿಕೆಯ ವಿಷಯವು ಸರ್ವೋಚ್ಚ ನ್ಯಾಯಾಲಯದ ಕೆಂಗಣ್ಣಿಗೆ ಕೂಡ ಗುರಿಯಾಗಿತ್ತು. ಕೇಂದ್ರ ಉನ್ನತಾಧಿಕಾರ ಸಮಿತಿ(ಸಿಇಸಿ)ಯ ವರದಿ ಆಧರಿಸಿ ಸುಪ್ರೀಂಕೋರ್ಟ್ ಗಣಿಗಾರಿಕೆಯ ಮೇಲೆ ಹಲವು ನಿರ್ಬಂಧ ವಿಧಿಸಿ ಗಣಿಗಾರಿಕೆಗೆ ಮೂಗುದಾರ ಹಾಕಿತ್ತು.
ಸುಪ್ರೀಂಕೋರ್ಟ್ ವಿಧಿಸಿದ್ದ ಷರತ್ತುಗಳೇನು?
ಅಕ್ರಮ ಗಣಿಗಾರಿಕೆಯಿಂದ ಪರಿಸರ ಹಾನಿಯ ಜತೆಗೆ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಗಣಿಗಾರಿಕೆಯಲ್ಲಿ ನಿಯಮಗಳು ಪಾಲನೆಯಾಗಿಲ್ಲ ಎಂಬ ಆರೋಪ ಹಿನ್ನಲೆಯಲ್ಲಿ ಅದಿರು ಉತ್ಪಾದನೆಗೆ ಮಿತಿ ನಿಗದಿ, ಅದಿರು ರಫ್ತಿಗೆ ನಿರ್ಬಂಧ, ಅದಿರನ್ನು ಮಾನಿಟರಿಂಗ್ ಕಮಿಟಿ ಮೂಲಕ ಇ- ಹರಾಜ್ ಮೂಲಕವೇ ಮಾರಾಟ ಮಾಡಬೇಕು, ಸಿ- ಕೆಟಗರಿ ಗಣಿ ಗುತ್ತಿಗೆಗಳನ್ನು ಮಾಲೀಕರಿಂದ ಪಡೆದು ಈ ಹರಾಜು ಮೂಲಕ ಗುತ್ತಿಗೆ ನೀಡಬೇಕೆಂದು ಸೂಚಿಸಿತ್ತು.
ಇದನ್ನೂ ಓದಿ | Vijayapura Earthquake | ವಿಜಯಪುರದಲ್ಲಿ ಸರಣಿ ಭೂಕಂಪನ; ತಜ್ಞರ ಭೇಟಿ, ಭಯಗೊಳ್ಳದಂತೆ ಸಲಹೆ
ಗಣಿಗಾರಿಕೆ ಮೇಲಿನ ನಿರ್ಬಂಧಕ್ಕೆ ರಿಲೀಫ್
ಕಳೆದ ಮೇ ತಿಂಗಳಲ್ಲಿ ಕಬ್ಬಿಣದ ಅದಿರು ರಫ್ತು ಮೇಲಿನ ನಿರ್ಬಂಧ ತೆರವು ಗೊಳಿಸಲಾಗಿತ್ತು. ಜತೆಗೆ ಗಣಿ ಮಾಲೀಕರು ನೇರವಾಗಿ ಅದಿರು ಮಾರಾಟಕ್ಕೆ ವಿಧಿಸಿರುವ ನಿರ್ಬಂದ ತೆರವುಗೊಳಿಸಿತು, ಈಗ ಅದಿರು ಉತ್ಪಾದನೆಗೆ ವಿಧಿಸಿರುವ ಮಿತಿಯನ್ನು ಹೆಚ್ಚಿಸಿದೆ. ಹೀಗೆ ಗಣಿಗಾರಿಕೆ ಮೇಲೆ ಹಾಕಿರುವ ಮೂಗುದಾರವನ್ನು ಸುಪ್ರೀಂ ಕೋರ್ಟ್ ಸಡಿಲಗೊಳಿಸಿದೆ.
1.4 ಕೋಟಿ ಮೆಟ್ರಿಕ್ ಟನ್ ಏರಿಕೆಗೆ ಅನುಮತಿ
ಬಳ್ಳಾರಿ ಜಿಲ್ಲೆಯ ಗಣಿಗಾರಿಕೆಗಳಿಂದ ವರ್ಷಕ್ಕೆ 2.8 ಕೋಟಿ ಮೆಟ್ರಿಕ್ ಟನ್ ಉತ್ಪಾದನೆಗೆ ಅವಕಾಶವಿತ್ತು. ಸುಪ್ರೀಂ ಕೋರ್ಟ್ ಈಗ ಉತ್ಪಾದನೆಯ ಮಿತಿಯನ್ನು ವಾರ್ಷಿಕ 3.5 ಕೋಟಿ ಮೆಟ್ರಿಕ್ ಟನ್‌ಗೆ ಏರಿಸಲು ಅನುಮತಿ ನೀಡಿದೆ. ಅದೇ ರೀತಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ವಾರ್ಷಿಕವಾಗಿ 70 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಗೆ ವಿಧಿಸಿದ್ದ ಮಿತಿಯನ್ನು 1.5 ಕೋಟಿ ಮೆಟ್ರಿಕ್ ಟನ್‌ಗಳಿಗೆ ಏರಿಕೆಯಾಗಿರುವುದು ಗಣಿಗಾರಿಕೆ ವಲಯದಲ್ಲಿ ಸಂಚಲನ ಮೂಡಿಸಿದೆ.
ಇಷ್ಟು ದಿನಗಳ ಕಾಲ ಮಂಕಾಗಿದ್ದ ಗಣಿಗಾರಿಕೆಯ ವಲಯ ಚೇತರಿಸಿಕೊಳ್ಳುತ್ತಿದೆ. ಆರ್ಥಿಕ ಅಭಿವೃದ್ಧಿಯ ಜತೆಗೆ ಪರಿಸರ ಸಂರಕ್ಷಣೆಗೂ ಹೆಚ್ಚಿನ ನಿಗಾವಹಿಸಬೇಕೆಂದು ಆದೇಶದಲ್ಲಿ ಸೂಚಿಸುವ ಮೂಲಕ ಗಣಿ ಗುತ್ತಿಗೆದಾರರಿಗೂ ಸುಪ್ರೀಂಕೋರ್ಟ್ ಎಚ್ಚರಿಕೆಯನ್ನು ನೀಡಿದೆ.
ಇದನ್ನೂ ಓದಿ | ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲರ್ ಬಂಧನ; 14 ಕೆಜಿ ಹೆರಾಯಿನ್ ಜಪ್ತಿ