Site icon Vistara News

Surathkal Murder | ಸುರತ್ಕಲ್‌ನಲ್ಲಿ ನೆರವೇರಿದ ಜಲೀಲ್ ಅಂತ್ಯ ಸಂಸ್ಕಾರ; ವ್ಯಾಪಕ ಪೊಲೀಸ್‌ ಬಂದೋಬಸ್ತ್‌

Surathkal Murder

ಮಂಗಳೂರು: ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಚಾಕು ಇರಿತಕ್ಕೊಳಗಾಗಿ ಮೃತಪಟ್ಟಿದ್ದ ಅಂಗಡಿ ಮಾಲೀಕ ಜಲೀಲ್ ಅವರ ಅಂತ್ಯ ಸಂಸ್ಕಾರ ನೂರಾರು ಜನರ ಸಮ್ಮುಖದಲ್ಲಿ ಭಾನುವಾರ ನಡೆಯಿತು. ಕೊಲೆ (Surathkal Murder) ನಡೆದ ಹಿನ್ನೆಲೆಯಲ್ಲಿ ಬೂದಿ ಮುಚ್ಚಿದ ಕೆಂಡಂತಾಗಿರುವ ಸುರತ್ಕಲ್‌ನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಸುರತ್ಕಲ್ ಕೋಮು ಸೂಕ್ಷ್ಮ ಪ್ರದೇಶವಾಗಿದೆ. ಕಳೆದ ಕೆಲ ತಿಂಗಳ ಹಿಂದೆ ನಡೆದ ಫಾಝಿಲ್ ಹತ್ಯೆಯ ನೆನಪು ಮಾಸುವ ಮುನ್ನವೇ ಇದೀಗ ಜಲೀಲ್ ಹತ್ಯೆಯಾಗಿದೆ. ಸುರತ್ಕಲ್‌ನ ಕಾಟಿಪಳ್ಳ ದ ನಾಲ್ಕನೇ ಬ್ಲಾಕ್‌ನಲ್ಲಿ ಅಂಗಡಿ ನಡೆಸುತ್ತಿದ್ದ ಜಲೀಲ್ ಅವರನ್ನು ಇಬ್ಬರು ದುಷ್ಕರ್ಮಿಗಳು ಚೂರಿಯಿಂದ ಇರಿದು ಶನಿವಾರ ರಾತ್ರಿ ಕೊಂದಿದ್ದರು. ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಜಲೀಲ್ ಮೃತಪಟ್ಟಿದ್ದರು. ಈ ಘಟನೆ ಸುದ್ದಿಯಾಗುತ್ತಿದ್ದಂತೆ ಆಸ್ಪತ್ರೆ ಬಳಿ ಸಾಕಷ್ಟು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ, ಪೊಲೀಸರು ಹೆಚ್ಚಿನ‌ ಬಂದೋಬಸ್ತ್ ಏರ್ಪಡಿಸಿದ್ದರು.

ಭಾನುವಾರವೂ ಮುಂಜಾಗ್ರತಾ ಕ್ರಮವಾಗಿ ಘಟನೆ ನಡೆದ ಆಸುಪಾಸಿನ ಸುರತ್ಕಲ್, ಪಣಂಬೂರು, ಕಾವೂರು, ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿಸೆಂಬರ್ 27 ರವರೆಗೆ 144 ಸೆಕ್ಷನ್ ಜಾರಿಗೊಳಿಸಿದ್ದು, ಈ ಠಾಣಾ ವ್ಯಾಪ್ತಿಯ ಮದ್ಯ ಮಾರಾಟವನ್ನೂ ನಿಷೇಧಿಸಲಾಗಿದೆ. ಜತೆಗೆ ಫ್ಯಾಕ್ಟರಿ, ವಾಣಿಜ್ಯ ಸಂಕೀರ್ಣಗಳಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡದಂತೆ ಕಾರ್ಮಿಕರನ್ನು ಸಂಜೆ 6 ಗಂಟೆಗೆ ಮನೆಗೆ ಕಳಿಸುವಂತೆ ಮಂಗಳೂರು ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ. ತನಿಖೆ ಪ್ರಗತಿಯಲ್ಲಿ ಇದ್ದು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ | Surathkal Murder | ಸುರತ್ಕಲ್‌ನಲ್ಲಿ ಕಳೆದ 5 ತಿಂಗಳಲ್ಲಿ ಎರಡನೇ ಹತ್ಯೆ ಹಿನ್ನೆಲೆಯಲ್ಲಿ ಜನತೆಯಲ್ಲಿ ಹೆಚ್ಚಿದ ಆತಂಕ

ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜಲೀಲ್ ಅವರ ಶವ ಪರೀಕ್ಷೆ ನಡೆಯಿತು. ಬಳಿಕ ಕಾಟಿಪಳ್ಳದ ನೈತಂಗಡಿಯಲ್ಲಿರುವ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಪಂಜಿಮೊಗರುನಲ್ಲಿರುವ‌ ಮಸೀದಿಯಲ್ಲಿ ಶವ ದಫನ‌ ನಡೆಸಲಾಯಿತು. ಆದರೆ ಈ ನಡುವೆ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿ ಶವ ಇಟ್ಟು ಸಂಬಂಧಿಕರು ಪ್ರತಿಭಟನೆ ನಡೆಸಿದರು. ಆದರೆ ಪೊಲೀಸ್ ಆಯುಕ್ತ ಶಶಿಕುಮಾರ್ ಜನರ ಮನ ಒಲಿಸಿ ಬಿಗಿ ಭದ್ರತೆಯಲ್ಲಿ ಮೃತ ದೇಹವನ್ನು ಅಂತ್ಯ ಸಂಸ್ಕಾರಕ್ಕೆ ಕೊಂಡೊಯ್ದರು.

ಈ ವೇಳೆ ಸುರತ್ಕಲ್ ಸೇರಿ ಜಿಲ್ಲೆಯ ಎಲ್ಲಾ ಕೋಮು‌ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋ‌ಬಸ್ತ್ ಮಾಡಲಾಗಿತ್ತು, ಇದರಿಂದ ಸುರತ್ಕಲ್ ಪೇಟೆ ಸಂಪೂರ್ಣ ಬಂದ್ ಆಗಿ ಬಿಕೋ‌ ಎನ್ನುತ್ತಿತ್ತು. ಈ ಹತ್ಯೆ ಹಿಂದೆ ಯಾರಿದ್ದಾರೆ ಎಂಬುವುದು ಇನ್ನೂ ಬೆಳಕಿಗೆ ಬಂದಿಲ್ಲ. ಆದರೆ, ಈ ಸಾವಿನಲ್ಲಿ ಯಾರೂ ರಾಜಕೀಯ ಮಾಡಲು ಮುಸ್ಲಿಂ ಸಮುದಾಯ ಬಿಡುವುದಿಲ್ಲ. ರಾಜಕೀಯಕ್ಕಾಗಿ ಬಡಪಾಯಿಗಳ ಜೀವ‌ ಬಲಿ ತೆಗೆದುಕೊಳ್ಳುಬೇಡಿ ಎಂದು ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಸಮುದಾಯದ ಯಾರೂ ಗಲಭೆ ನಡೆಸದಂತೆಯೂ ಮುಖಂಡರು ವಿನಂತಿಸಿಕೊಂಡಿದ್ದಾರೆ.

ಹತ್ಯೆಗೀಡಾದ ಜಲೀಲ್ ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದೆ ಎಲ್ಲಾ ಜಾತಿ ಧರ್ಮದವರೊಂದಿಗೂ ಒಡನಾಟದಲ್ಲಿದ್ದರು. ಯಾವುದೇ ಪಕ್ಷ, ಸಂಘಟನೆಯಲ್ಲೂ ಗುರಿತಿಸಿಕೊಳ್ಳದೆ ಸುಮಾರು 15 ವರ್ಷದಿಂದ ವ್ಯಾಪಾರ ನಡೆಸುತ್ತಿದ್ದರು. ಕೊಲೆ‌ ಮಾಡಿದ ನೈಜ್ಯ ಆರೋಪಿಗಳನ್ನು ಬಂಧಿಸಿ, ನ್ಯಾಯ ನೀಡಬೇಕೆಂದು ಜಲೀಲ್ ಮನೆಯವರು ಆಗ್ರಹಿಸಿದ್ದಾರೆ.

ಸದ್ಯ ಪೊಲೀಸರು ಈ ಕೊಲೆ ಪ್ರಕರಣದ ತನಿಖೆಯನ್ನು ಮುಂದುವರಿಸಿದ್ದಾರೆ. ಪ್ರಕರಣದ ಹಿಂದೆ ಜಲೀಲ್‌ಗೆ ಮಹಿಳೆಯ ಜತೆ ಇದ್ದ ಅನ್ಯೋನ್ಯತೆಯೇ ಕಾರಣ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಹೀಗಾಗಿ ಈ ವಿಚಾರವನ್ನೇ ಪ್ರಮುಖವಾಗಿ ಇಟ್ಟುಕೊಂಡು ಇಬ್ಬರು ಮಹಿಳೆಯರು ಸೇರಿ ನಾಲ್ವರನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇದನ್ನೂ ಓದಿ | Surathkal Murder | ಸುರತ್ಕಲ್‌ನಲ್ಲಿ ಜಲೀಲ್‌ ಹತ್ಯೆ ಪ್ರಕರಣ, ಮರಣೋತ್ತರ ಪರೀಕ್ಷೆ ಆರಂಭ

Exit mobile version