Site icon Vistara News

Selco India: ಬೆಂಗಳೂರಿನಲ್ಲಿ ಮೇ 27ರಂದು ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ ಪ್ರದಾನ

International Suryamitra Annual Award Ceremony on 27th May

ಬೆಂಗಳೂರು: ಸಾಮಾಜಿಕ ಉದ್ಯಮವಾಗಿರುವ ಸೆಲ್ಕೋ ಸಂಸ್ಥೆಯು ನೀಡುವ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿ (Selco India) ಪ್ರದಾನ ಸಮಾರಂಭವು ಮೇ 27ರಂದು ಸೋಮವಾರ ಬೆಂಗಳೂರಿನ ವೈಯಾಲಿ ಕಾವಲ್‌ನಲ್ಲಿರುವ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆಯಲಿದೆ.

ಸೌರವಿದ್ಯುತ್ ಪ್ರವರ್ತಕ ಅಮೆರಿಕಾದ ರಿಚರ್ಡ್ ಹ್ಯಾನ್ಸೆನ್ ಅವರು ಈ ಬಾರಿಯ ಸೂರ್ಯಮಿತ್ರ ಪ್ರಶಸ್ತಿಗೆ ಭಾಜನರಾಗಿದ್ದು, ಸಮಾರಂಭದ ಉದ್ಘಾಟನೆಯನ್ನು ಕರ್ನಾಟಕ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಪಿ.ಎಸ್.‌ ದಿನೇಶ್‌ ಕುಮಾರ್ ನೆರವೇರಿಸುವರು. ಮುಖ್ಯ ಅತಿಥಿಯಾಗಿ ಕೇಂದ್ರ ಸರ್ಕಾರದ ನೀತಿ ಆಯೋಗದ ಪ್ರಧಾನ ಆರ್ಥಿಕ ಸಲಹೆಗಾರ ಅಣ್ಣಾ ರಾಯ್‌ ಪಾಲ್ಗೊಳ್ಳಲಿದ್ದಾರೆ. ಗೌರವಾನ್ವಿತ ಅತಿಥಿಗಳಾಗಿ ಸೆಲ್ಕೋದ ನಿರ್ದೇಶಕಿ ಎಲಿನಾ ಕ್ಯಾಸೋಲೇರಿ, ಮತ್ತಿಬ್ಬರು ನಿರ್ದೇಶಕರಾದ ಎಂ.ಎಸ್.‌ ಶ್ರೀರಾಮ್‌ ಹಾಗೂ ಥಾಮಸ್‌ ಪುಲ್ಲೆಂಕೇವ್‌ ಅವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: PSI Exam: ಪಿಎಸ್‌ಐ ಸೇರಿ 4 ಸಾವಿರ ಹುದ್ದೆಗಳ ನೇಮಕಾತಿಗೆ ಪರೀಕ್ಷಾ ದಿನಾಂಕ ಅನೌನ್ಸ್‌; ಯಾವ ದಿನಕ್ಕೆ ಯಾವ ಪರೀಕ್ಷೆ?

ಮ್ಯಾಗ್ಸೆಸ್ಸೆ ಪ್ರಶಸ್ತಿ ಪರಸ್ಕೃತರು ಹಾಗೂ ಸೆಲ್ಕೋ ಫೌಂಡೇಷನ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಹರೀಶ್ ಹಂದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸೆಲ್ಕೋ ಇಂಡಿಯಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಭಾಸ್ಕರ ಹೆಗಡೆ ತಿಳಿಸಿದ್ದಾರೆ.

ಸೌರವಿದ್ಯುತ್ ಪ್ರವರ್ತಕ ರಿಚರ್ಡ್‌ ಹ್ಯಾನ್ಸೆನ್

ಅಮೆರಿಕಾದ ರಿಚರ್ಡ್ ಹ್ಯಾನ್ಸೆನ್ ಅವರು ಅಭಿವೃದ್ಧಿಶೀಲ ರಾಷ್ಟ್ರಗಳ ಗ್ರಾಮೀಣ ಪ್ರದೇಶಗಳಲ್ಲಿ ಸೌರವಿದ್ಯುತ್ ಸೌಲಭ್ಯವನ್ನು ಹೆಚ್ಚಿಸಲು, ಆಧುನಿಕ ಫೋಟೋ ವೋಲ್ಟಾಯಿಕ್‌ (ಪಿವಿ) ತಂತ್ರಜ್ಞಾನವನ್ನು ಮೈಕ್ರೋ ಫೈನಾನ್ಸ್ ಸಂ‍ಸ್ಥೆಗಳ ಮೂಲಕ ಬೆಸೆದು ಪ್ರಸರಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಪ್ರಸ್ತುತ ಎನರ್ಜಿ ಅಕ್ಸೆಸ್‌ ಫೌಂಡೇಷನ್ (www.energyaccessfoundation.org)ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ರಿಚರ್ಡ್ ಹ್ಯಾನ್ಸೆನ್, ಜಾಗತಿಕವಾಗಿ ಸುಸ್ಥಿರ ಶಕ್ತಿಯೆಡೆಗಿನ ಪರಿವರ್ತನೆಗೆ ಸಹಾಯ ಮಾಡುವ ಉದ್ದೇಶದಿಂದ 1993ರಲ್ಲಿ ರಿಚರ್ಡ್ ಸೋಲುಜ್ ಇಂಕ್ (Soluz Inc.,) ಎಂಬ ಸಾಮಾಜಿಕ ಉದ್ಯಮವನ್ನು ಸ್ಥಾಪಿಸಿದರು. ಇದು ಪಿವಿ ಉತ್ಪನ್ನಗಳು ಮತ್ತು ಸಂಬಂಧಿತ ಮೈಕ್ರೋಫೈನಾನ್ಸ್ ಪರಿಹಾರಗಳನ್ನು ಪೂರೈಸುವ ಒಂದು ಅಂಗಸಂಸ್ಥೆಯಾಗಿ ಕೆಲಸ ಮಾಡುತ್ತಿದೆ.

ಇದನ್ನೂ ಓದಿ: KKR vs SRH Final 2024: ನಾಳೆ ಕೆಕೆಆರ್​-ಹೈದರಾಬಾದ್​ ಫೈನಲ್​ ಕಾದಾಟ; ಯಾರಿಗೆ ಒಲಿಯಲಿದೆ ಐಪಿಎಲ್​ ಕಿರೀಟ?

ಏನಿದು ಸೂರ್ಯಮಿತ್ರ ಪ್ರಶಸ್ತಿ?

ಪ್ರತಿಷ್ಠಿತ ರಾಮೋನ್‌ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತರಾಗಿರುವ ಡಾ. ಎಚ್. ಹರೀಶ್ ಹಂದೆ ಸ್ಥಾಪಿಸಿ ಮುನ್ನಡೆಸುತ್ತಿರುವ ಸೆಲ್ಕೋ ಸಂಸ್ಥೆಯು, ಪ್ರತಿಷ್ಠಿತ ಸೂರ್ಯಮಿತ್ರ ವಾರ್ಷಿಕ ಪ್ರಶಸ್ತಿಯನ್ನು 2012ರಿಂದ ನೀಡುತ್ತ ಬಂದಿದೆ. ಈ ಪ್ರಶಸ್ತಿಯನ್ನು, ಸುಸ್ಥಿರ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡುವ ಹರಿಕಾರರು ಮತ್ತು ಗ್ರಾಮೀಣ ಜನತೆಯ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದ ಅಸಾಧಾರಣ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ.

Exit mobile version