Site icon Vistara News

Suspicion of Conversion | ಮತಾಂತರ ಶಂಕೆ; ಕ್ರೈಸ್ತ ಧರ್ಮಗುರು ನೇತೃತ್ವದಲ್ಲಿ ತೆರಳುತ್ತಿದ್ದ ತಂಡದ ಮೇಲೆ ಹಿಂದು ಸಂಘಟನೆಗಳ ದಾಳಿ

Suspicion of Conversion

ಬೆಳಗಾವಿ: ಮತಾಂತರ ಶಂಕೆ‌ (Suspicion of Conversion) ಹಿನ್ನೆಲೆಯಲ್ಲಿ ಕ್ರೈಸ್ತ ಫಾದರ್ ನೇತೃತ್ವದಲ್ಲಿ ಗೋವಾಗೆ ತೆರಳುತ್ತಿದ್ದ ತಂಡದ ಮೇಲೆ ಮಹಾರಾಷ್ಟ್ರದ ಸಾಂಗ್ಲಿಯ ರೈಲ್ವೆ ನಿಲ್ದಾಣದಲ್ಲಿ ಹಿಂದುಪರ ಸಂಘಟನೆಗಳು ಕಾರ್ಯಕರ್ತರು ದಾಳಿ ನಡೆಸಿದ್ದು, ಮತಾಂತರಕ್ಕೆ ಪ್ರಚೋದಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ಬೆಳಗಾವಿಯಲ್ಲಿ ಮತಾಂತರ ಸದ್ದಿಲ್ಲದೆ ನಡೆಯುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ.

ಮಹಾರಾಷ್ಟ್ರದ ಧುಳೆ ಜಿಲ್ಲೆಯ ಶಿರಪುರ ತಾಲೂಕಿನ ಮೂಲದ ೪೦ ಆದಿವಾಸಿಗಳು ಕ್ರಿಶ್ಚಿಯನ್ ಧರ್ಮಗರು ನೇತೃತ್ವದಲ್ಲಿ ಗೋವಾಗೆ ಬರುತ್ತಿದ್ದರು ಎನ್ನಲಾಗಿದೆ. ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಲೆಂದೇ ಅವರನ್ನು ಕರೆದೊಯ್ಯಲಾಗುತ್ತಿದೆ ಎಂಬ ಮಾಹಿತಿ ಮಹಾರಾಷ್ಟ್ರದ ಹಿಂದು ಸಂಘಟನೆ ಮುಖಂಡರಿಗೆ ಸಿಕ್ಕಿದೆ. ಹೀಗಾಗಿ ಹಜರತ್ ನಿಜಾಮುದ್ದಿನ್ ರೈಲಿನಲ್ಲಿ ಬರುತ್ತಿದ್ದ 40 ಜನರ ಗುಂಪಿನ ಮೇಲೆ ಸಾಂಗ್ಲಿಯ ರೈಲ್ವೆ ನಿಲ್ದಾಣದಲ್ಲಿ ಸಂಘಟನೆ ‌ಮುಖಂಡರು ದಾಳಿ ಸೋಮವಾರ ಮಧ್ಯರಾತ್ರಿ ಮಾಡಿದ್ದಾರೆ.

ಇದನ್ನೂ ಓದಿ | ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಹೆಸರನ್ನು ರಾಜಕೀಯಕ್ಕೆ ಬಳಸಿಕೊಂಡಿತಾ ಕಾಂಗ್ರೆಸ್‌? ಪಕ್ಷ ಸೇರಿದ ಕೃಷ್ಣ ಭಟ್‌ ಯಾರು?

ನಂತರ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿಯೂ ಹಿಂದು ಮುಖಂಡರು ಜಮಾವಣೆಗೊಂಡು, ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಬಳಿಕ ಗೋವಾಗೆ ತೆರಳುತ್ತಿದ್ದ ತಂಡಕ್ಕೆ ಪೊಲೀಸರು ಭದ್ರತೆ ನೀಡಿ ಬೆಳಗಾವಿಯ ಸೇಂಟ್‌ ಪೌಲ್ ಕಾಲೇಜಿನಲ್ಲಿ ಆಶ್ರಯ ನೀಡಿದ್ದಾರೆ. ಮಂಗಳವಾರ ಪೊಲೀಸರು ಎಲ್ಲರನ್ನೂ ಬಸ್ ಮೂಲಕ ಸ್ವ ಗ್ರಾಮಕ್ಕೆ‌ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಫಾದರ್ ಕಾನ್ಸ್ಟಿ‌ ರಾಡ್ರಿಕ್ಸ್, ವಿಶ್ವಮಂಡಲ ಸೇವಾಶ್ರಮ, ಎನ್‌ಜಿಒ ವತಿಯಿಂದ ನಮ್ಮ ತಂಡ ಗೋವಾ ಪ್ರವಾಸಕ್ಕೆ ತೆರಳುತ್ತಿತ್ತು. ಎಲ್ಲರೂ ಬಾಲವಾಡಿ ಶಿಕ್ಷಕರಾಗಿದ್ದಾರೆ. ಆದರೆ, ಸಾಂಗ್ಲಿ ಬಳಿ ರೈಲಿಗೆ ನುಗ್ಗಿ ಒಂದು ಗುಂಪು ದಾಳಿ ನಡೆಸಿದೆ. ನಾವು ರಾತ್ರಿ ಬೆಳಗಾವಿಯಲ್ಲೇ ಉಳಿದಿದ್ದೆವು. ಪೊಲೀಸರ ಸೂಚನೆ ಮೇರೆಗೆ ಮಹಾರಾಷ್ಟ್ರದ ಶಿರಪುರಕ್ಕೆ ತೆರಳುತ್ತಿದ್ದೇವೆ ಎಂದರು.

ಪೊಲೀಸರ ಕ್ರಮಕ್ಕೆ ಹಿಂದು ಸಂಘಟನೆಗಳ ಆಕ್ರೋಶ
ಮತಾಂತರ ಮಾಡಲು ಕ್ರಿಶ್ಚಿಯನ್ ಧರ್ಮಗರು ನೇತೃತ್ವದಲ್ಲಿ 40 ಜನರ ತಂಡ ಗೋವಾಗೆ ತೆರಳುತ್ತಿತ್ತು ಎಂದು ಆರೋಪಿಸಿರುವ ಹಿಂದು ಸಂಘಟನೆಗಳ ಕಾರ್ಯಕರ್ತರು, ಪೊಲೀಸರು ವಿಚಾರಣೆ ನಡೆಸಿ, ದೂರು ದಾಖಲಿಸಿಕೊಳ್ಳದೇ ಮಹಾರಾಷ್ಟ್ರಕ್ಕೆ ವಾಪಸ್ ಕಳುಹಿಸಿದ್ದಾರೆ ಆಕ್ರೋಶ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಸದ್ದಿಲ್ಲದೇ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ನಡೆಯುತ್ತಿರುವ ಬಗ್ಗೆ ಅನುಮಾನಗಳು ಮೂಡಿವೆ. ಮತಾಂತರ ಮಾಡಲೆಂದೇ ಆದಿವಾಸಿ ಜನಾಂಗದವರನ್ನು ಬೆಳಗಾವಿಗೆ ಕರೆತರಲಾಗಿತ್ತು ಎಂದು ವಿಎಚ್‌ಪಿ ಮುಖಂಡ ಕೃಷ್ಣ ‌ಭಟ್ ಆರೋಪಿಸಿದ್ದಾರೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ 40 ಜನರನ್ನು ವಿಎಚ್‌ಪಿ, ಭಜರಂಗದಳ ಕಾರ್ಯಕರ್ತರು ತಡೆದಾಗ ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಮನವೊಲಿಸಿ, ಠಾಣೆಗೆ ಕರೆಯಿಸಿ ವಿಚಾರಣೆ ನಡೆಸುವ ಭರವಸೆ ನೀಡಿದ್ದರು. ಆದರೆ, ನಮಗೆ ಮಾಹಿತಿ ನೀಡದೇ ಆದಿವಾಸಿಗಳನ್ನು ಪೊಲೀಸರು ವಾಪಸ್ ಮಹಾರಾಷ್ಟ್ರಕ್ಕೆ ಕಳುಹಿಸಿದ್ದಾರೆ ಎಂದು ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ.

ಕಾನೂನು ಕ್ರಮಕ್ಕೆ ಆಗ್ರಹ
ಮತಾಂತರಕ್ಕೆ ಯತ್ನಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಗರದ ಕ್ಯಾಂಪ್‌ ಪೊಲೀಸ್‌ ಸ್ಟೇಷನ್ ಬಳಿ ಹಿಂದುಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಒತ್ತಾಯಿಸಿದರು. ಡಿಸಿಪಿ ರವೀಂದ್ರ ಗಡಾದ, ಎಸಿಪಿ ಚಂದ್ರಪ್ಪ, ಸಿಪಿಐ ಧರ್ಮಟ್ಟಿ ಅವರೊಂದಿಗೆ ಹಿಂದುಪರ ಸಂಘಟನೆಗಳ ಮುಖಂಡರು ಚರ್ಚೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ವಿಶ್ವ ಹಿಂದು ಪರಿಷತ್ ‌ಪ್ರಾಂತ ಕೋಶಾಧ್ಯಕ್ಷ ಕೃಷ್ಣ ಭಟ್‌, ಬೆಳಗಾವಿ ಜಿಲ್ಲಾ ಬಜರಂಗದಳದ ಸಂಯೋಜಕ ಭಾವಕಣ್ಣಾ ಲೋಹಾರ, ಬಜರಂಗದಳದ ನಗರ ಸಂಯೋಜಕ ಆದಿನಾಥ ಗಾವಡೆ, ಕಾರ್ಪೊರೇಟರ್‌ ಶಂಕರ ಪಾಟೀಲ, ಕಾರ್ಪೊರೇಟರ್‌ ರಾಜು ಬಾತಖಾಂಡೆ, ಸುನೀಲ ಕನೇರಿ,‌ ಕೃಷ್ಣಕಾಂತ ಗೋಂಡಾಡಕರ ಸೇರಿ ನೂರಾರು ಬಜರಂಗದಳದ ಕಾರ್ಯಕರ್ತರು ಇದ್ದರು.

ಇದನ್ನೂ ಓದಿ | Thief Case | ಮನೆಗೆ ನುಗ್ಗಿ ಕಳ್ಳತನ ಮಾಡುವಾಗಲೇ ಸಿಕ್ಕಿಬಿದ್ದ ಕಳ್ಳಿ; ಸಾರ್ವಜನಿಕರಿಂದ ಬಿತ್ತು ಧರ್ಮದೇಟು

Exit mobile version