ಬೆಂಗಳೂರು: ಆರ್ಥಿಕ ಸ್ವಾವಲಂಬನೆಯ ಆಂದೋಲನದ ಉದ್ದೇಶದೊಂದಿಗೆ ಕಳೆದ ೩೧ ವರ್ಷಗಳಿಂದ ಆರ್ಥಿಕ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ವದೇಶಿ ಜಾಗರಣ ಮಂಚ್ (Swadeshi Jagaran Manch) ವತಿಯಿಂದ ಜನವರಿ ೪ ರಿಂದ ೮ರವರೆಗೆ ನಗರದ ದಾಸರಹಳ್ಳಿಯ ಬಾಗಲಗುಂಟೆ ಸಮೀಪದ ಎಂಇಐ ಆಟದ ಮೈದಾನದಲ್ಲಿ ಸ್ವಾವಂಬನೆ ಪರಿಕಲ್ಪನೆಯ ʼಸ್ವದೇಶಿ ಮೇಳʼ ಆಯೋಜಿಸಲಾಗಿದೆ.
೫ ದಿನಗಳ ನಡೆಯಲಿರುವ ಸ್ವದೇಶಿ ಮೇಳದಲ್ಲಿ ವಿವಿಧ ರೀತಿಯ ಉಪನ್ಯಾಸ, ಸಾಂಸ್ಕೃತಿಕ ಕಾರ್ಯಕ್ರಮ, ತರಬೇತಿ ಶಿಬಿರ ಹಾಗೂ ವಿವಿಧ ಸ್ಪರ್ಧೆಗಳು ನಡೆಯಲಿದೆ. ಜನವರಿ ೪ರಂದು ಸಂಜೆ ೫.೩೦ಕ್ಕೆ ಮೇಳವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಮತ್ತು ಮಾಜಿ ಸಿಎಂ ಡಿ.ವಿ. ಸದಾನಂದಗೌಡ ವಹಿಸಲಿದ್ದಾರೆ.
ದೇಶೀಯ ಉತ್ಪಾದಕರಿಗೆ ಮಾರುಕಟ್ಟೆಯನ್ನು ಒದಗಿಸುವುದು, ನಮ್ಮ ದೇಶದ ಜನರಿಗೆ ದೇಶದ ಉತ್ಪನ್ನಗಳನ್ನು ಪರಿಚಯಿಸುವುದು ಈ ಸ್ವದೇಶಿ ಮೇಳದ ಮುಖ್ಯ ಉದ್ದೇಶವಾಗಿದೆ. ಸ್ಥಳೀಯ ಉತ್ಪನ್ನಗಳನ್ನು ಉತ್ಪಾದಿಸುವ ಸಣ್ಣ ಉದ್ಯಮಗಳಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಅವರ ಉತ್ಪನ್ನಗಳಿಗೆ ಬ್ರಾಂಡ್ ನೀಡುವ ವ್ಯವಸ್ಥೆ ಈ ಮೇಳದಲ್ಲಿ ನಡೆಯಲಿದೆ.
ಈ ಸ್ವದೇಶಿ ಮೇಳದಲ್ಲಿ ೨೫೦ಕ್ಕೂ ಹೆಚ್ಚು ಸಣ್ಣ ಸಣ್ಣ ಉತ್ಪಾದಕರು, ಗುಡಿ ಕೈಗಾರಿಕೆಗಳನ್ನು ನಡೆಸುವವರು ತಮ್ಮ ಉತ್ಪನ್ನಗಳನ್ನು ಇಲ್ಲಿ ಮಾರಾಟ ಮಾಡಲಿದ್ದಾರೆ. ಆ ಮೂಲಕ ತಮ್ಮ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಯನ್ನು ಪಡೆಯುತ್ತಾರೆ. ಇದರಿಂದ ಹೊಸ ಉದ್ಯೋಗ ಸೃಷ್ಠಿಯಾಗುತ್ತದೆ, ಹಾಗಾಗಿ ಸ್ವದೇಶಿ ಮೇಳ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ.
ಸಮ್ಮೇಳನದ ವಿಶೇಷತೆ
- ಸುಮಾರು ೨೭೦ಕ್ಕೂ ಅಧಿಕ ಮಳಿಗೆಗಳ ಮೂಲಕ ಉತ್ಪಾದಕರು ತಮ್ಮ ವಿಭಿನ್ನ ಉತ್ಪನ್ನಗಳನ್ನು ಮಾರಾಟ ಮಾಡಲಿದ್ದಾರೆ ಮತ್ತು ೩ ಲಕ್ಷಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಲಿದ್ದಾರೆ.
- ರಾಜ್ಯದ ವಿವಿಧ ಪ್ರದೇಶಗಳ ಆಹಾರಗಳನ್ನು ಪರಿಚಯಿಸುವ ಆಹಾರಮೇಳವನ್ನೂ ಇಲ್ಲಿ ಆಯೋಜಿಸಲಾಗಿದೆ.
ಯಾವುದೇ ಪ್ಲಾಸ್ಟಿಕ್ ಬಳಕೆಯನ್ನು ಮಾಡದೆ ಪರಸರ ಸ್ನೇಹಿ ಮೇಳ ನಡೆಯಲಿದೆ. - ಆಹಾರಮೇಳ ಸೇರಿದಂತೆ ಯಾವುದೇ ಮಳಿಗೆಯಲ್ಲಿ ಸ್ಟೀಲ್ ತಟ್ಟೆ, ಲೋಟಗಳನ್ನು ಬಳಸಿ ಶೂನ್ಯಕಸದ ವ್ಯವಸ್ಥೆ ಇರಲಿದೆ.
- ಮೇಳದಲ್ಲಿ ಗ್ರಾಮೀಣ ಸೊಗಡನ್ನು ಬಿಂಬಿಸುವ ಅನೇಕ ವಸ್ತುಗಳ ಪ್ರದರ್ಶನ, ಪ್ರತೀ ದಿನ ಸಂಜೆ ವೈಚಾರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ.
- ಸಮ್ಮೇಳನದಲ್ಲಿ ಭಾರತೀಯ ಪಾರಂಪರಿಕ ಉಡುಗೆಯಾದ ಸೀರೆ ಧರಿಸಿಕೊಂಡು ಬರುವ ಮಹಿಳೆಯರಿಗೆ ಲಕ್ಕಿಡಿಪ್ ಮುಖಾಂತರ ಸೌಭಾಗ್ಯವತಿ ಉಡುಗೊರೆ
- ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
ಇದನ್ನೂ ಓದಿ | Karnataka Election | ರಸ್ತೆ, ಚರಂಡಿ ಸಮಸ್ಯೆಗಿಂತ ಲವ್ ಜಿಹಾದ್ ದೊಡ್ಡದು ಎಂದ ಬಿಜೆಪಿ ಅಧ್ಯಕ್ಷ ಕಟೀಲ್