ಮಂಗಳೂರು: ಇಲ್ಲಿನ ಉಚ್ಚಿಲ ಬಟ್ಟಪಾಡಿ ಕಡಲ ತೀರದಲ್ಲಿ ವಿದೇಶಿ ಹಡಗೊಂದು ಮುಳುಗಡೆಯಾಗಿದೆ. ಈ ಹಡಗಿನಲ್ಲಿ ಬರೋಬ್ಬರಿ 220 ಮೆಟ್ರಿಕ್ ಟನ್ ತೈಲ ಸೋರಿಕೆಯಾಗುವ ಆತಂಕ ಎದುರಾಗಿದ್ದು ಹೀಗಾದರೆ ಆ ಪ್ರದೇಶದ ಸಮುದ್ರ ಕಲುಷಿತಗೊಳ್ಳುತ್ತದೆ. ಅಪಾರ ಮೀನುಗಳು ಸಾಯಲಿದ್ದು, ಸ್ಥಳೀಯ ಮೀನುಗಾರರಿಗೆ ಭಾರಿ ಪ್ರಮಾಣದ ನಷ್ಟವಾಗಲಿದೆ. ಸದ್ಯ ಈ ಹಡಗಿನ ಮೇಲೆ ಕೋಸ್ಟ್ ಗಾರ್ಡ್‌ನಿಂದ ವೈಮಾನಿಕ ಕಣ್ಗಾವಲು ಇಡಲಾಗಿದೆ.
ಇದು ಸಿರಿಯಾ ಮೂಲದ ಎಂ.ಬಿ.ಪ್ರಿನ್ಸೆಸ್ ಮೆರಿಲ್ ಎಂಬ ಸರಕು ಸಾಗಣೆ ಹಡಗು. ಚೀನಾದಿಂದ ಲೆಬನಾನ್‌ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಣೆ ಮಾಡುತ್ತಿತ್ತು. ಹಡಗಿನಲ್ಲಿ ರಂಧ್ರ ಉಂಟಾಗಿ ಜೂ.23ರಂದು ಮುಳುಗಡೆಯಾಗಿದ್ದು, ಇದರಲ್ಲಿದ್ದ 15 ಮಂದಿಯನ್ನು ಮಂಗಳೂರು ಕರಾವಳಿ ರಕ್ಷಕ ಪಡೆ ಸಿಬ್ಬಂದಿ ಕಾಪಾಡಿದ್ದಾರೆ. ಆದರೆ ಈ ಹಡಗು ಮಂಗಳೂರಿಗೆ ಬಂದಿದ್ದೇಕೆ ಎಂಬ ಬಗ್ಗೆ ಮಾಹಿತಿ ಇಲ್ಲ.
ಸದ್ಯ ಇರುವ ಆತಂಕ ತೈಲ ಸೋರಿಕೆಯದ್ದೇ ಆಗಿದೆ. ಹಾಗೊಮ್ಮೆ ತೈಲ ಸೋರಿಕೆ ಆದರೆ ಅದನ್ನು ನಿಯಂತ್ರಿಸಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಎನ್‌ಡಿಆರ್‌ಎಫ್, ಕರಾವಳಿ ರಕ್ಷಕ ಪಡೆ, ಗೃಹ ರಕ್ಷಕ ಪಡೆ, ಜಿಲ್ಲಾಡಳಿತಗಳೆಲ್ಲ ಅಲರ್ಟ್ ಆಗಿವೆ. ಪರಿಸ್ಥಿತಿಯ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಮೇಲ್ವಿಚಾರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಮಂಗಳೂರು ಬಜ್ಪೆ ಏರ್‌ಪೋರ್ಟ್‌ಗೆ ಬಿಎಂಟಿಸಿ ಮಾದರಿ ಬಸ್ ಸೌಕರ್ಯ