ಮಂಗಳೂರು: ನಗರದ ಮಳಲಿ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿ ನವೀಕರಣದ ವೇಳೆ ದೇಗುಲ ಮಾದರಿಯ ರಚನೆಗಳು ಪತ್ತೆಯಾದ ಹಿನ್ನೆಲೆಯಲ್ಲಿ, ಅಲ್ಲಿ ದೈವೀ ಶಕ್ತಿಯ ಇರುವಿಕೆ ಪತ್ತೆ ಹಚ್ಚಲು ಮೇ 25ರಂದು ವಿಶ್ವ ಹಿಂದೂ ಪರಿಷತ್ ನಿಂದ ʼತಾಂಬೂಲ ಪ್ರಶ್ನೆ ಹಮ್ಮಿಕೊಳ್ಳಲಾಗಿದೆ.
ಮಸೀದಿ ಸಮೀಪದ ರಾಮಂಜನೇಯ ಭಜನಾ ಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಿದ್ದು, ಇದರಲ್ಲಿ ಇಬ್ಬರು ಬಿಜೆಪಿ ಶಾಸಕರು ಭಾಗಿಯಾಗಲಿದ್ದಾರೆ. ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹಾಗೂ ವಿಎಚ್‌ಪಿ ಪ್ರಮುಖರು ಮತ್ತು ಸ್ಥಳೀಯ ಮುಖಂಡರು ಭಾಗಿಯಾಗಲಿದ್ದಾರೆ.
ತಾಂಬೂಲ ಪ್ರಶ್ನೆಯನ್ನು ಕೇರಳ ಮೂಲದ ಮುಖ್ಯ ಜ್ಯೋತಿಷಿ ಸೇರಿ ಇಬ್ಬರು ಪೊದುವಾಲ್ ತಂತ್ರಿಗಳಿಂದ ನಡೆಸಲಾಗುತ್ತದೆ. ಇವರು ವೀಳ್ಯದೆಲೆಗಳ ಲೆಕ್ಕಾಚಾರದ ಆಧಾರದಲ್ಲಿ ಗ್ರಹಗತಿಗಳ ಚಲನೆ ಮೇಲೆ ದೈವೀ ಶಕ್ತಿ ಪತ್ತೆ ಮಾಡಲಿದ್ದಾರೆ.
ಏನಿದು ತಾಂಬೂಲ ಪ್ರಶ್ನೆ?
ಭಾರತೀಯ ಜ್ಯೋತಿರ್ವಿಜ್ಞಾನದ ತ್ರಿಸ್ಕಂದಗಳಲ್ಲಿ ಪ್ರಶ್ನೆಶಾಸ್ತ್ರವೂ ಒಂದು. ಇದರಲ್ಲಿ ಪ್ರಶ್ನೆಮಾಡಿದ ಸಮಯ, ಪ್ರಶ್ನೆಕರ್ತನ ಸ್ವರೂಪ, ಅಗಚೇಷ್ಟ ಇತ್ಯಾದಿಗಳ ಆಧಾರದ ಮೇಲೆ ಪ್ರಶ್ನೆಗಳ ಫಲ ಹೇಳಲಾಗುತ್ತದೆ. ಪ್ರಶ್ನೆಶಾಸ್ತ್ರದಲ್ಲಿ ಚಕ್ರಗಳು, ಕವಡೆಗಳು, ತಾಂಬೂಲ ಇತ್ಯಾದಿಗಳನ್ನು ಉಪಯೋಗಿಸಲಾಗುತ್ತದೆ. ಇದರಲ್ಲಿ ಒಂದಾದ ತಾಂಬೂಲ ಪ್ರಶ್ನೆಯಲ್ಲಿ ವೀಳ್ಯದೆಲೆ ಸಹಾಯದಿಂದ ತನ್ವಾದಿ ದ್ವಾದಶ ಭಾವಗಳ ಶುಭ ಅಶುಭ ಫಲಗಳನ್ನು ಹೇಳಲಾಗುತ್ತದೆ.
ಬಿಗಿಬಂದೋಬಸ್ತ್
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತರ ಸೂಚನೆಯಂತೆ ಮಸೀದಿ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಏ.22ರಿಂದ ಇಲ್ಲಿ ಮಸೀದಿ ಕಾಮಗಾರಿ ಸ್ಥಗಿತ ಗೊಳಿಸಲಾಗಿದೆ. ನ್ಯಾಯಾಲಯದಲ್ಲಿ ಈ ಬಗ್ಗೆ ಕಾನೂನು ಹೋರಾಟ ನಡೆಸಲು ಮಸೀದಿಯ ಆಡಳಿತ ಮಂಡಳಿ ತೀರ್ಮಾನಿಸಿದೆ. ಮಸೀದಿಯಲ್ಲಿ ಕಂಡು ಬಂದ ದೆವಸ್ಥಾನದ ಮಾದರಿಯ ಬಗ್ಗೆ ತಹಸೀಲ್ದಾರ್ ಅವರು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಈ ನಡುವೆ ವಿಎಚ್‌ಪಿ ಇಲ್ಲಿ ಧಾರ್ಮಿಕ ನಂಬಿಕೆಯ ಮೂಲಕ ಸತ್ಯ ಶೋಧನೆಗೆ ಮುಂದಾಗಿರುವ ಬಗ್ಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಪ್ರತಿಕ್ರಿಯೆ ನೀಡಿ, ಪ್ರಶ್ನಾ ಚಿಂತನೆ ಅವರ ವೈಯಕ್ತಿಕ ವಿಚಾರವಾಗಿದ್ದು, ಮಸೀದಿ ವಿಚಾರವಾಗಿ ಏನೇ ಇದ್ರು ನ್ಯಾಯಾಂಗದ ತೀರ್ಮಾನ ಫೈನಲ್ ಎಂದಿದ್ದಾರೆ.
ಅಷ್ಟ ಮಂಗಳ ಪ್ರಶ್ನೆ?
ಮಸೀದಿಯಲ್ಲಿ ದೈವ ಸಾನ್ನಿಧ್ಯ ಇರುವಿಕೆ ತಿಳಿಯಲು ಸ್ಥಳದಲ್ಲಿ ಅಷ್ಟಮಂಗಳ ನಡೆಸೋದು ಕಷ್ಟ. ಹೀಗಾಗಿ ಮೊದಲಿಗೆ ತಾಂಬೂಲ ಪ್ರಶ್ನೆ ನಡೆಸಿ ಸ್ಥಳದ ಮಾಹಿತಿ ಹಾಗೂ ಗ್ರಾಮ ದೈವಗಳ ಮಾಹಿತಿ ಹಾಗೂ ಈಗ ಮಸೀದಿ ಇರೋ ಜಾಗದ ಹಿನ್ನೆಲೆ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ದೇವಸ್ಥಾನದ ಮಾಹಿತಿ ಲಭ್ಯ ಆದಲ್ಲಿ ಮುಂದೆ ಅಷ್ಟ ಮಂಗಳದ ಮೂಲಕ ಯಾವ ದೇವರು ಎಷ್ಟನೇ ಶತಮಾನದ್ದು, ಯಾರು ಸ್ಥಾಪಿಸಿದ್ದರು. ಅಲ್ಲಿ ಹೇಗೆ ಮಸೀದಿ ನಿರ್ಮಿಸಲಾಯಿತು ಎಂಬುದಕ್ಕೆ ಉತ್ತರ ಪಡೆದು ಬಳಿಕ ದಾಖಲೆ ಸಹಿತ ಕಾನೂನು ಹೋರಾಟಕ್ಕೆ ವಿ.ಎಚ್.ಪಿ ಯೋಜನೆ ರೂಪಿಸಿದೆ.
ಇದನ್ನೂ ಓದಿ | New twist: ಕೃಷ್ಣ ಜನ್ಮಭೂಮಿಗೆ 1991ರ ಪೂಜಾ ಸ್ಥಳಗಳ ಕಾಯಿದೆ ಅನ್ವಯಿಸದು?