ಬೆಂಗಳೂರು: ಯುವಜನತೆಗೆ ಸ್ಪೂರ್ತಿ ತುಂಬುವ ನೈಜ ಕಥೆ ಆಧಾರಿತ ತನುಜಾ ಚಿತ್ರ (Tanuja Movie) ಈಗಾಗಲೇ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಈ ಚಿತ್ರ ಸ್ಫೂರ್ತಿಯಾಗಬೇಕೆಂದು ಹರಿಹರದ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಹನಗವಾಡಿ ಅವರು ದಿನಕ್ಕೆ ನಾಲ್ಕು ಬಾರಿ ಉಚಿತ ವೀಕ್ಷಣೆಗೆ ಅನುವು ಮಾಡಿಕೊಟ್ಟಿದ್ದಾರೆ.
ಕೊರೊನಾದ ಕಷ್ಟದ ದಿನಗಳನ್ನು ಎದುರಿಸಿ ಶಿವಮೊಗ್ಗದ ಶಿಕಾರಿಪುರದ ಕುಗ್ರಾಮದ ತನುಜಾ ಎಂಬಾಕೆ ವೈದ್ಯೆಯಾಗುವ ನಿಟ್ಟಿನಲ್ಲಿ ಬೆಂಗಳೂರಿಗೆ ಬಂದು ನೀಟ್ ಪರೀಕ್ಷೆ ಬರೆದಿದ್ದು ದೊಡ್ಡ ಸುದ್ದಿಯಾಗಿತ್ತು. ಅಂದಿನ ಸಿಎಂ ಆಗಿದ್ದ ಬಿ.ಎಸ್ ಯಡಿಯೂರಪ್ಪ ಹಾಗೂ ಸಚಿವ ಸುಧಾಕರ್ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಟ್ಟಿದ್ದರು. ಜತೆಗೆ ಪರಿಶ್ರಮ ಅಕಾಡೆಮಿಯ ಸಾಧಕ ಪ್ರದೀಪ್ ಈಶ್ವರ್ ಮಾಡಿದ ಶ್ಲಾಘನೀಯ ಕಾರ್ಯವೊಂದರ ನೈಜ ಘಟನೆ ಕುರಿತು ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಲೇಖನವೊಂದನ್ನು ಆಧರಿಸಿದ ಸಿನಿಮಾ ಇದಾಗಿತ್ತು. ಸಾಕಷ್ಟು ಅಡೆತಡೆಗಳ ನಡುವೆ ತನುಜಾ ನೀಟ್ ಪರೀಕ್ಷೆ ಬರೆಯುವಲ್ಲಿ ಯಶಸ್ವಿಯಾಗಿದ್ದರು.
ಇದೇ ನೈಜ ಘಟನೆಯನ್ನು ಆಧರಿಸಿ ʻತನುಜಾʼ ಹೆಸರಲ್ಲಿ ಸಿನಿಮಾ ತೆರೆಗೆ ಬಂದು ಎರಡನೇ ವಾರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಿಶೇಷ ಎಂದರೆ ಈ ಚಿತ್ರವನ್ನು ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮೀಣ ವಿದ್ಯಾರ್ಥಿಗಳ ಉಚಿತ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಫೆ.10ರಿಂದ 16ರ ವರೆಗೆ ಉಚಿತ ಪ್ರದರ್ಶನದ ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಎರಡು ದಿನದ ಪ್ರದರ್ಶನದಲ್ಲಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೋಷಕರು ಚಿತ್ರವನ್ನು ಕಣ್ತುಂಬಿಕೊಂಡಿದ್ದಾರೆ.
ತಾಲೂಕು ವ್ಯಾಪ್ತಿಯ ಸರಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೂ ಉಚಿತ ಪ್ರದರ್ಶನ ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ಉತ್ಸಾಹದೊಂದಿಗೆ ಸಿನಿಮಾ ವೀಕ್ಷಣೆ ಮಾಡುತ್ತಿದ್ದು, ಆತ್ಮಸ್ಥೈರ್ಯ ಮತ್ತು ಧೈರ್ಯವನ್ನು ಹೆಚ್ಚಿಸುತ್ತಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಾನು ಗ್ರಾಮೀಣ ಭಾಗದ ಹಿನ್ನೆಲೆಯಿಂದ ಬಂದಿರುವುದಾಗಿ ಹರಿಹರದ ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಹನಗವಾಡಿ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ಬಡತನದ ಕುಟುಂಬದಲ್ಲಿ ಹುಟ್ಟಿ ಪ್ರತಿಭಾವಂತೆಯಾಗಿದ್ದು ಆಕೆಯ ಬದುಕು ಮತ್ತೊಬ್ಬರಿಗೂ ಸ್ಫೂರ್ತಿ ಆಗಬೇಕೆಂದು ಹರಿಹರದಲ್ಲಿ ಉಚಿತ ಪ್ರದರ್ಶನವನ್ನು ಏರ್ಪಡಿಸಿದ್ದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: CM Ibrahim : ನನ್ನ ಮಗನನ್ನು ಗೆಲ್ಲಿಸಿ ಕೊಡು ದೇವಾ; ದರ್ಗಾದಲ್ಲಿ ಕಣ್ಣೀರು ಹಾಕಿ ಪ್ರಾರ್ಥನೆ ಮಾಡಿದ ಸಿ.ಎಂ ಇಬ್ರಾಹಿಂ