ಕಾರವಾರ: ತಪಸ್ ಹೆಸರಿನ ಮಾನವರಹಿತ ವೈಮಾನಿಕ ವಾಹನದ ಕಮಾಂಡ್ ಮತ್ತು ನಿಯಂತ್ರಣ ಸಾಮರ್ಥ್ಯಗಳನ್ನು ಯಶಸ್ವಿಯಾಗಿ ಪ್ರದರ್ಶಿಸುವ ಮೂಲಕ ಕಾರವಾರದ ನೌಕಾನೆಲೆ (karwar naval base) ಗಮನಾರ್ಹ ಸಾಧನೆಯನ್ನು ಮಾಡಿದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಓ) ಮತ್ತು ಭಾರತೀಯ ನೌಕಾಪಡೆಯು ಜಂಟಿಯಾಗಿ ಈ ಕೌಶಲ್ಯ ಪ್ರದರ್ಶಿಸಿದ್ದು, ಕಾರವಾರ ನೌಕಾನೆಲೆಯಿಂದ 148 ಕಿಲೋ ಮೀಟರ್ ದೂರದಲ್ಲಿರುವ ಯುದ್ಧನೌಕೆ ಐಎನ್‌ಎಸ್ ಸುಭದ್ರಾಗೆ ದೂರದ ಗ್ರೌಂಡ್ ಸ್ಟೇಷನ್‌ನಿಂದ ಯುಎವಿ ಕಮಾಂಡ್ ಮಾಡುವ ಮೂಲಕ ಈ ಮಹತ್ವದ ಸಾಧನೆ ಮಾಡಲಾಗಿದೆ.
ಇದನ್ನೂ ಓದಿ: ಮಳೆಗಾಲ ಬಂದ್ರೂ ನೀರಿಲ್ಲ! ಬಾಲಕನೇ ಇಲ್ಲಿ ನೀರಿನ ಟ್ರ್ಯಾಕ್ಟರ್ ಚಾಲಕ; ಅಪಘಾತಕ್ಕೆ ನೀರುಗಂಟಿ ಸಾವು
ಜೂನ್ 16 ರಂದು ನಡೆದ ಈ ಮಹತ್ವದ ಘಟನೆಯನ್ನು ಸ್ವತಃ ಡಿಆರ್‌ಡಿಓ ಟ್ವೀಟ್ ಮಾಡಿದೆ. ಪ್ರದರ್ಶನದ ಸಮಯದಲ್ಲಿ, ಮಾನವರಹಿತ ವೈಮಾನಿಕ ವಾಹನ ತಪಸ್ ಸಮುದ್ರ ಮಟ್ಟದಿಂದ 20,000 ಅಡಿ ಎತ್ತರದಲ್ಲಿ ದೋಷರಹಿತವಾಗಿ ಕಾರ್ಯನಿರ್ವಹಿಸಿದೆ. ತಪಸ್ 3 ಗಂಟೆ 30 ನಿಮಿಷಗಳ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಐಎನ್‌ಎಸ್ ಸುಭದ್ರ 40 ನಿಮಿಷಗಳ ಅವಧಿಗೆ ತಪಸ್ ಯುಎವಿಯ ಕಾರ್ಯಾಚರಣೆಗಳ ನಿಯಂತ್ರಣವನ್ನು ವಹಿಸಿಕೊಂಡಿತ್ತು.
ತಪಸ್ ಯುಎವಿ ಚಿತ್ರದುರ್ಗದ ಏರೋನಾಟಿಕಲ್ ಟೆಸ್ಟ್ ರೇಂಜ್ (ಎಟಿಆರ್) ನಿಂದ 07:35 ಗಂಟೆಗೆ ಟೇಕ್ ಆಫ್ ಆಗಿದ್ದು, ಕಾರವಾರ ನೌಕಾ ನೆಲೆಯನ್ನು ತಲುಪಲು 285 ಕಿಲೋ ಮೀಟರ್ ದೂರವನ್ನು ಕ್ರಮಿಸಿತು. ಮಾನವರಹಿತ ವೈಮಾನಿಕ ವಾಹನದ ತಡೆರಹಿತ ನಿಯಂತ್ರಣವನ್ನು ಸುಲಭಗೊಳಿಸಲು, ಐಎನ್ ಸುಭದ್ರಾ ಹಡಗಿನಲ್ಲಿ ಒಂದು ರೌಂಡ್ ಕಂಟ್ರೋಲ್ ಸ್ಟೇಷನ್ ಮತ್ತು ಎರಡು ಶಿಪ್ ಡೇಟಾ ಟರ್ಮಿನಲ್‌ಗಳನ್ನು ಸ್ಥಾಪಿಸಲಾಗಿತ್ತು ಎಂದು ಡಿಆರ್‌ಡಿಓ ಪ್ರಕಟಣೆಯಲ್ಲಿ ತಿಳಿಸಿದೆ. ಯಶಸ್ವಿ ಪ್ರಯೋಗದ ನಂತರ, ತಪಸ್ ಯುಎವಿ ಸುರಕ್ಷಿತವಾಗಿ ಎಟಿಆರ್‌ಗೆ ಮರಳಿತು.
ಇದನ್ನೂ ಓದಿ: Vinay Kulakarni: ಧಾರವಾಡಕ್ಕೆ ಬರುವ ವಿನಯ್ ಕುಲಕರ್ಣಿ ಆಸೆಗೆ ತಣ್ಣೀರು; ಅನುಮತಿ ನೀಡದ ಕೋರ್ಟ್!
ಗುಪ್ತಚರ, ಕಣ್ಗಾವಲು, ಗುರಿ ಸ್ವಾಧೀನ, ಟ್ರ್ಯಾಕಿಂಗ್ ಮತ್ತು ವಿಚಕ್ಷಣ ಅವಶ್ಯಕತೆಗಳನ್ನು ಪೂರೈಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ತಪಸ್ ಹಗಲು ಮತ್ತು ರಾತ್ರಿ ಎರಡೂ ಪರಿಸ್ಥಿತಿಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ದೂರದಿಂದಲೇ ನಿಯಂತ್ರಿಸಬಹುದಾಗಿದೆ.