ಬೆಂಗಳೂರು: ಪ್ರಾಥಮಿಕ ಶಾಲೆಗಳಲ್ಲಿ ಹೆಚ್ಚುವರಿ ಇರುವ ಶಿಕ್ಷಕರ ಹುದ್ದೆಗಳ ಗುರುತಿಸುವಿಕೆ ಹಾಗೂ ಮರು ಹೊಂದಾಣಿಕೆ ಪ್ರಕ್ರಿಯೆ (Teachers rationalization) ಶಿಕ್ಷಕರ ವರ್ಗದಲ್ಲಿ ಆತಂಕಕ್ಕೆ ಕಾರಣವಾಗಿದ್ದು, ಮೊದಲಿಗೆ ಬಡ್ತಿ ನೀಡಿ ನಂತರ ಮರು ಹೊಂದಾಣಿಕೆ ಪ್ರಕ್ರಿಯೆ ಆರಂಭಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯಿಸಿದೆ.
ಶನಿವಾರ ನಡೆದ ಸಂಘದ ರಾಜ್ಯ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿದ್ದು, ಮೊದಲಿಗೆ ಶಿಕ್ಷಕರ ಬಡ್ತಿ ಪ್ರಕ್ರಿಯೆ ಪೂರ್ಣಗೊಳಿಸಿ, ನಂತರ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಮತ್ತು ಮರು ಹೊಂದಾಣಿಕೆ ಮಾಡುವ ಪ್ರಕ್ರಿಯೆ ನಡೆಸಬೇಕೆಂದು ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಗಿದೆ.
ಈ ಸಂಬಂಧ ಮುಖ್ಯಮಂತ್ರಿಗಳಿಗೆ, ಶಿಕ್ಷಣ ಸಚಿವರಿಗೆ ಮನವಿ ಮಾಡಲಾಗುವುದು. ಸರ್ಕಾರದ ಮೇಲೆ ಒತ್ತಡ ಹೇರಲು ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಸ್ಥಳೀಯ ಶಾಸಕರಿಗೆ ಮನವಿ ಮಾಡಲು ಶನಿವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ. ಸಭೆಯಲ್ಲಿ ರಾಜ್ಯ ಸಂಘದ ಪದಾದಿಕಾರಿಗಳು, ಎಲ್ಲ ಜಿಲ್ಲಾಧ್ಯಕ್ಷರು ಮತ್ತು ಕಾರ್ಯರ್ಶಿಗಳು ಭಾಗವಹಿಸಿದ್ದರು.
ಡಿ.22 ಕ್ಕೆ ತಾತ್ಕಾಲಿಕ ಪಟ್ಟಿ
ಝೂಮ್ ಮೂಲಕ ಈ ಸಭೆಯಲ್ಲಿ ಭಾಗವಹಿಸಿದ್ದ ಇಲಾಖೆಯ ನಿರ್ದೇಶಕ ಪ್ರಸನ್ನಕುಮಾರ್ ಮತ್ತು ವರ್ಗಾವಣೆ ವಿಭಾಗದ ಮುಖ್ಯಸ್ಥ ಬಾಯಪ್ಪ ರೆಡ್ಡಿ, ಇದೇ ತಿಂಗಳ 22 ರಂದು ತಾತ್ಕಾಲಿಕ ಅಂತಿಮ ಹೆಚ್ಚುವರಿ ಶಿಕ್ಷಕರ ಪಟ್ಟಿ ಪ್ರಕಟಿಸಲಾಗುತ್ತದೆ. ಹೆಚ್ಚಿನ ಶಿಕ್ಷಕರಿಗೆ ತೊಂದರೆಯಾಗದಂತೆ ಈ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು.
ಯಾರು ಹೆಚ್ಚುವರಿ ಶಿಕ್ಷಕರು?
ಮಂಜೂರಾದ ಹುದ್ದೆಗಳಿಗಿಂತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆ ಹೆಚ್ಚಾಗಿದ್ದಾಗ, ಅಂತಹ ಹುದ್ದೆಗಳನ್ನು ಹೆಚ್ಚುವರಿ ಹುದ್ದೆಗಳೆಂದು ಪರಿಗಣಿಸಲಾಗುತ್ತದೆ. ಈ ರೀತಿ ಹೆಚ್ಚುವರಿ ಶಿಕ್ಷಕರನ್ನು ಗುರುತಿಸುವಾಗ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ, ವಿಷಯವಾರು ಶಿಕ್ಷಕರ ಸಂಖ್ಯೆಯನ್ನು ಪರಿಗಣಿಸಲಾಗುವುದಿಲ್ಲ.
ಪಿಎಸ್‌ಟಿ ಶಿಕ್ಷಕರನ್ನು ಬಹುತೇಕವಾಗಿ ಹೆಚ್ಚುವರಿ ಎಂದು ಗುರುತಿಸಲಾಗುವುದಿಲ್ಲ. ಜಿಪಿಟಿ ಇಂಗ್ಲಿಷ್ ಶಿಕ್ಷಕರು ಕೂಡ ಹೆಚ್ಚುವರಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಹಿಂದಿ ಮತ್ತು ದೈಹಿಕ ಶಿಕ್ಷಕರನ್ನು ಶಾಲೆಯಲ್ಲಿಯೇ ಹುದ್ದೆಗಳನ್ನು ಸೃಷ್ಟಿಸಿ ಉಳಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸಂಘದ ಇನ್ನಿತರ ಬೇಡಿಕೆಗಳು
ಕಳೆದ ಸಾಲಿನ ಹೆಚ್ಚುವರಿ/ಮರು ಹೊಂದಾಣಿಕೆ ಪ್ರಕ್ರೀಯೆ ಮಾಡುವ ಸ೦ದರ್ಭದಲ್ಲಿ 10 ಮಕ್ಕಳಿರುವ ಎಲ್ಲಾ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಇಬ್ಬರು ಶಿಕ್ಷಕರನ್ನು ಆರ್‌ಟಿಇ ಕಾಯ್ದೆಯ ಪ್ರಕಾರ ನಿಗದಿಗೊಳಿಸಲಾಗಿತ್ತು, ಸದರಿ ನಿಯಮವನ್ನು ಅಂದರೆ 10 ಮಕ್ಕಳಿರುವ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಇಬ್ಬರು ಶಿಕ್ಷಕರನ್ನು ನಿಗದಿಗೊಳಿಸಬೇಕು.
ಹೆಚ್ಚುವರಿ ಪ್ರಕ್ರೀಯೆಯನ್ನು ಮಾಡುವ ಸಂದರ್ಭದಲ್ಲಿ ಹಾಲಿ ಮಕ್ಕಳ ಸಂಖ್ಯೆಗನುಗುಣವಾಗಿ ಕಾರ್ಯನಿರ್ವ ಹಿಸುತ್ತಿರುವ, ಮರು ಹೊಂದಾಣಿಕೆಯ ಹೆಸರಿನಲ್ಲಿ ಪಿಎಸ್‌ಟಿ ಶಿಕ್ಷಕರು ಹೆಚ್ಚುವರಿಯಾಗದಂತೆ ನೋಡಿಕೊಳ್ಳಬೇಕು.
120ರಿಂದ 240 ದಾಖಲಾತಿ ಇದ್ದಲ್ಲಿ ನಲಿ-ಕಲಿ ತರಗತಿಗೆ ಒಂದು ಹೆಚ್ಚುವರಿ ಹುದ್ದೆಯನ್ನು ನೀಡಬೇಕು. ಶಾಲಾ ಮಾತೆಯರು ಇರುವ ಶಾಲೆಗಳಲ್ಲಿ ಒಂದು ಪಿಎಸ್‌ಟಿ ಕನ್ನಡ ಹುದ್ದೆಯನ್ನು ಹೆಚ್ಚುವರಿಯಾಗಿ ನೀಡಬೇಕು. ಹೆಚ್ಚುವರಿ ಪ್ರಕ್ರೀಯೆಯ ಸಂದರ್ಭದಲ್ಲಿ ಮುಖ್ಯ ಗುರುಗಳ ಹುದ್ದೆಯನ್ನು ಮಕ್ಕಳ ಶಿಕ್ಷಕರ ಅನುಪಾತದಿಂದ ಹೊರತುಪಡಿಸಿ, ಹೆಚ್ಚುವರಿ ಪ್ರಕ್ರೀಯೆಗಳನ್ನು ಮಾಡಬೇಕು.
ಈಗಾಗಲೇ ಇಂಗ್ಲೀಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭ ಮಾಡಿದ್ದು, ಸದರಿ ಶಾಲೆಗಳಿಗೆ ಯಾವುದೇ ಪ್ರತ್ಯೇಕವಾದ ಹುದ್ದೆಗಳನ್ನು ಮಂಜೂರು ಮಾಡಿರುವುದಿಲ್ಲ, ಕಾರಣ ಮರು ಹೊಂದಾಣಿಕೆಯ ಸಂದರ್ಭದಲ್ಲಿ ಇಂಗ್ಲೀಷ್ ಮಾಧ್ಯಮದ ಶಾಲೆಗಳಿಗೆ ಹೆಚ್ಚುವರಿ ಇಂಗ್ಲೀಷ್ ಹುದ್ದೆಗಳ ಅವಶ್ಯಕತೆ ಇದ್ದು, ಇದನ್ನು ಮಂಜೂರು ಮಾಡಬೇಕು.
ಇದನ್ನೂ ಓದಿ | KSGEA News | ಹೆಚ್ಚುವರಿ ಶಿಕ್ಷಕರ ಹೊಂದಾಣಿಕೆ; ನ್ಯೂನತೆ ಸರಿಪಡಿಸಲು ಸರ್ಕಾರಿ ನೌಕರರ ಸಂಘ ಒತ್ತಾಯ