ವಿಜಯನಗರ: ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂಬಂತೆ ಗುರುವಿಗೆ ಶರಣಾಗುವ ತನಕ ಜ್ಞಾನ ಸಂಪೂರ್ಣ ಸಿಗುವುದಿಲ್ಲ ಎಂಬ ಮಾತಿದೆ. ತಂದೆ-ತಾಯಿ ಸಮಾನರಾದ ಗುರುವಿಗಾಗಿ ವಿದ್ಯಾರ್ಥಿಗಳು ಕಣ್ಣೀರು ಹಾಕಿದ್ದಾರೆ. ಇಲ್ಲಿನ ಹರಪ್ಪನಹಳ್ಳಿ ತಾಲ್ಲೂಕಿನ ಗುಂಡಗತ್ತಿ ಗ್ರಾಮದಲ್ಲಿ ಕಳೆದ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕರೊಬ್ಬರ ಬೀಳ್ಕೊಡುಗೆ ದಿನ (Farewell Ceremony) ವಿದ್ಯಾರ್ಥಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಶಾಲೆ ಬಿಟ್ಟು ಹೋಗದಂತೆ ಗೋಗರೆದಿದ್ದಾರೆ. ಆ ಶಿಕ್ಷಕನನ್ನು ತಮ್ಮ ಕಣ್ಣೀರಿನಲ್ಲೇ ಕಟ್ಟಿಹಾಕಿದ (Teacher Transfer) ಘಟನೆ ನಡೆದಿದೆ.
ಶಿಕ್ಷಕ ಲಕ್ಯಾ ನಾಯ್ಕ್ ಅವರು ಗುಂಡಗತ್ತಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಮಕ್ಕಳಿಗೆ ಸಮಾಜ ವಿಜ್ಞಾನ ವಿಷಯವನ್ನು ಬೋಧನೆ ಮಾಡುತ್ತಿದ್ದರು. ಇತ್ತೀಚೆಗಷ್ಟೇ ನಡೆದ ವರ್ಗಾವಣೆ ಪ್ರಕ್ರಿಯೆಯಲ್ಲಿ ಶಿಕ್ಷಕ ಲಕ್ಯಾ ನಾಯ್ಕ್ ಬೇರೆಡೆ ವರ್ಗಾವಣೆಯಾಗಿದ್ದರು.
ಹೀಗಾಗಿ ಶಿಕ್ಷಕ ಲಕ್ಯಾ ನಾಯ್ಕ್ ಅವರಿಗೆ ಇಂದು ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ವಿದ್ಯಾರ್ಥಿಗಳು ನೆಚ್ಚಿನ ಶಿಕ್ಷಕನನ್ನು ಕಂಡ ಕೂಡಲೇ ಓಡಿ ಬಂದು ಶಾಲೆ ಬಿಟ್ಟು ಹೋಗಬಾರದು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅತ್ಯಂತ ಸರಳ ಹಾಗೂ ಪ್ರಾಮಾಣಿಕ ಶಿಕ್ಷಕರೆಂದು ಇಲಾಖೆ ಸಹಿತ ಸುತ್ತಮುತ್ತಲಿನ ಹಳ್ಳಿಯಲ್ಲಿ ಗುರುತಿಸಿಕೊಂಡಿದ್ದ ಲಕ್ಯಾ ನಾಯ್ಕ್ ಅವರು ವಿದ್ಯಾರ್ಥಿಗಳಿಗೆ ಅತ್ಯಂತ ಪ್ರೀತಿಪಾತ್ರರಾಗಿದ್ದರು.
ಇದನ್ನೂ ಓದಿ: Education News: ಒಂದೂ ಮಕ್ಕಳಿಲ್ಲದ ಶಾಲೆಗೆ ಇಬ್ಬರು ಶಿಕ್ಷಕರು! ಇದು ದಾಸನಹುಂಡಿ ಸಕಿಪ್ರಾ ಶಾಲೆಯ ಕಥೆ-ವ್ಯಥೆ
ಶಾಲೆಯಿಂದ ಬೀಳ್ಕೊಡುವ ಸಂದರ್ಭದಲ್ಲಿ ಶಿಕ್ಷಕರನ್ನು “ಹೋಗಬೇಡಿ ಸರ್” ಎಂದು ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದಾರೆ. ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ