ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ (Teacher Transfer) ಇದ್ದ ಹಲವು ನಿರ್ಬಂಧಗಳನ್ನು ತೆಗೆದು ಹಾಕಿ “ಶಿಕ್ಷಕ ಸ್ನೇಹಿʼʼ ವರ್ಗಾವಣೆ ನೀತಿ ರೂಪಿಸಿರುವ ಸರ್ಕಾರ ಈ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.
ವರ್ಗಾವಣೆಗೆ ಸಂಬಂಧಿಸಿದ ಹೊಸ ನಿಯಮಗಳ “ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಅಧಿನಿಯಮ-2022ʼʼಕ್ಕೆ ಕಳೆದ ಸೆಪ್ಟೆಂಬರ್ನಲ್ಲಿಯೇ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ನಂತರ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು. ಇದೀಗ ಕರಡು ಅಧಿಸೂಚನೆ ಪ್ರಕಟವಾಗಿದೆ.
ಕರಡು ಅಧಿಸೂಚನೆ ಇಲ್ಲಿದೆ
ಹೊಸ ವರ್ಗಾವಣೆ ನಿಯಮದಲ್ಲಿ ಪರಸ್ಪರ ವರ್ಗಾವಣೆಗೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಇದುವರೆಗೆ ಒಂದು ಬಾರಿ ಮಾತ್ರ ಈ ರೀತಿಯ ವರ್ಗಾವಣೆ ಮಾಡಿಕೊಳ್ಳಬಹುದಾಗಿತ್ತು. ಒಮ್ಮೆ ವರ್ಗಾವಣೆಯಾದ ಬಳಿಕ ಮತ್ತೆ ಮೂರು ವರ್ಷ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂಬ ನಿಯಮವೂ ಇದರಲ್ಲಿ ಸೇರಿದೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು, ಮಲೆನಾಡು ವಲಯ ಹಾಗೂ ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲೂಕುಗಳಿಗೆ ಹೋಗ ಬಯಸುವವರಿಗೆ ವಿಶೇಷ ಆದ್ಯತೆ ದೊರೆಯಲಿದೆ.
ಸಾರ್ವತ್ರಿಕ ವರ್ಗಾವಣೆ ಒಟ್ಟು ವೃಂದ ಬಲದ ಶೇ.11ರಷ್ಟು ಮಿತಿ ಇರುತ್ತದೆ. ವಿಶೇಷ ಆದ್ಯತೆಯಡಿ ವರ್ಗಾವಣೆ ಬಯಸುವವರಿಗೆ ಈ ನಿಯಮ ಅನ್ವಯವಾಗದು. ಯಾವುದೇ ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ.25 ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ತಾಲೂಕಿಗೆ ವರ್ಗಾವಣೆಗೆ ಅವಕಾಶವಿರುತ್ತದೆ.
ಈಗಾಗಲೇ ಶಿಕಕ್ಷರ ವರ್ಗಾವಣೆ ಮಾರ್ಗಸೂಚಿಯಲ್ಲಿರುವಂತೆ ಶಿಕ್ಷಕರ ವೇಯ್ಟೆಡ್ ಅಂಕಗಳ (ಸೇವಾ ಅಂಕಳಗ)ಲೆಕ್ಕಾಚಾರವನ್ನು ಹೊಸ ನಿಯಮಾವಳಿಗೆ ಸೇರಿಸಲಾಗಿದೆ. ಈಗ ಪ್ರಕಟವಾಗಿರುವ ಈ ಕರಡು ಅಧಿಸೂಚನೆಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ವರ್ಗಾವಣೆಗೆ ಸಂಬಂಧಿಸಿದ ಅಂತಿಮ ನೀತಿಗಳನ್ನು ಪ್ರಕಟಿಸುವುದರ ಜತೆಗೆ ವೇಳಾಪಟ್ಟಿಯನ್ನೂ ಪ್ರಕಟಿಸಲು ಶಿಕ್ಷಣ ಇಲಾಖೆಯು ಉದ್ದೇಶಿಸಿದೆ. ಬಹುತೇಕವಾಗಿ ಡಿಸೆಂಬರ್ನಲ್ಲಿ ವರ್ಗಾವಣೆ ಪ್ರಕ್ರಿಗೆ ಆರಂಭವಾಗಲಿದೆ.
ಇದನ್ನೂ ಓದಿ | ಶಿಕ್ಷಕರ ವರ್ಗಾವಣೆ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಒಪ್ಪಿಗೆ; ಶಿಕ್ಷಕರ ಸಂಘ ಹರ್ಷ