ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ (Teacher Transfer) ಇದ್ದ ಹಲವು ನಿರ್ಬಂಧಗಳನ್ನು ತೆಗೆದು ಹಾಕಿ “ಶಿಕ್ಷಕ ಸ್ನೇಹಿʼʼ ವರ್ಗಾವಣೆ ನೀತಿ ರೂಪಿಸಿರುವ ಸರ್ಕಾರ ಈ ಸಂಬಂಧ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಜತೆಯಲ್ಲಿ ಶಿಕ್ಷಣ ಇಲಾಖೆಯು ವರ್ಗಾವಣೆಯ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.
ನವೆಂಬರ್‌ನಲ್ಲಿ ಕರಡು ಅಧಿಸೂಚನೆ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಈಗ ಅಂತಿಮ ಅಧಿಸೂಚನೆ ಪ್ರಕಟಿಸಲಾಗಿದೆ. ವರ್ಗಾವಣೆಗೆ ಸಂಬಂಧಿಸಿದ ಹೊಸ ನಿಯಮಗಳ “ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಅಧಿನಿಯಮ-2022ʼʼಕ್ಕೆ ಕಳೆದ ಸೆಪ್ಟೆಂಬರ್‌ನಲ್ಲಿಯೇ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತ್ತು. ನಂತರ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಿ ಅಂಗೀಕಾರ ಪಡೆಯಲಾಗಿತ್ತು.
ಹೊಸ ವರ್ಗಾವಣೆ ನಿಯಮದಲ್ಲಿ ಪರಸ್ಪರ ವರ್ಗಾವಣೆಗೆ ಇದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ. ಇದುವರೆಗೆ ಒಂದು ಬಾರಿ ಮಾತ್ರ ಈ ರೀತಿಯ ವರ್ಗಾವಣೆ ಮಾಡಿಕೊಳ್ಳಬಹುದಾಗಿತ್ತು. ಒಮ್ಮೆ ವರ್ಗಾವಣೆಯಾದ ಬಳಿಕ ಮತ್ತೆ ಮೂರು ವರ್ಷ ವರ್ಗಾವಣೆಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ಎಂಬ ನಿಯಮವೂ ಇದರಲ್ಲಿ ಸೇರಿದೆ.
ಎರಡು ತಿಂಗಳು ವರ್ಗಾವಣೆ ಪ್ರಕ್ರಿಯೆ
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯು ಡಿಸೆಂಬರ್ 28ರಿಂದ ಫೆಬ್ರವರಿ28 ರವರೆಗೆ ನಡೆಯಲಿದೆ. ಒಟ್ಟು ಎರಡು ತಿಂಗಳ ಕಾಲ ಈ ಪ್ರಕ್ರಿಯೆ ನಡೆಯಲಿದ್ದು, ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭವಾಗುವುದಕ್ಕೂ ಮೊದಲು ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇಲಾಖೆ ನಿರ್ಧರಿಸಿದೆ. ಈ ಶೈಕ್ಷಣಿಕ ವರ್ಷ ಪೂರ್ಣಗೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆಯನ್ನೂ ವಹಿಸಲಾಗುತ್ತಿದೆ.
ಡಿಸೆಂಬರ್ 28ರಂದು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹೆಚ್ಚುವರಿ ಶಿಕ್ಷಕರ ಕರಡು ಪಟ್ಟಿ ಪ್ರಕಟವಾಗಲಿದೆ. ಡಿ.30 ರೊಳಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಜನವರಿ 6 ಮತ್ತು 7 ರಂದು ವರ್ಗಾವಣೆ ತಂತ್ರಾಂಶದ ಮೂಲಕ ಆದ್ಯತೆ ಕೋರಿ ಅರ್ಜಿ, ದಾಖಲೆ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗುತ್ತದೆ. ಜನವರಿ 11ಕ್ಕೆ ಕರಡು ಜೇಷ್ಠತಾ ಪಟ್ಟಿ ಪ್ರಕಟವಾಗಲಿದೆ. 12ಕ್ಕೆ ವೃಂದವಾರು ಖಾಲಿ ಹುದ್ದೆಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ. ಫೆ.28 ಕ್ಕೆ ಅಂತಿಮ ಆದ್ಯತಾ ಪಟ್ಟಿಯಂತೆ ಪರಸ್ಪರ ವರ್ಗಾವಣೆಗಳ ಗಣಕೀಕೃತ ಕೌನ್ಸೆಲಿಂಗ್ ಮೂಲಕ ಸ್ಥಳ ನಿಯುಕ್ತಿ ನಡೆಯಲಿದೆ.
ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು, ಮಲೆನಾಡು ವಲಯ ಹಾಗೂ ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲೂಕುಗಳಿಗೆ ಹೋಗ ಬಯಸುವವರಿಗೆ ವಿಶೇಷ ಆದ್ಯತೆ ದೊರೆಯಲಿದೆ.
ಶಿಕ್ಷಕರ ವರ್ಗಾವಣೆಯ ನಿಯಮ ಮತ್ತು ವೇಳಾಪಟ್ಟಿಗೆ ಇಲ್ಲಿ ಕ್ಲಿಕ್ ಮಾಡಿ
ಸಾರ್ವತ್ರಿಕ ವರ್ಗಾವಣೆ ಒಟ್ಟು ವೃಂದ ಬಲದ ಶೇ.11ರಷ್ಟು ಮಿತಿ ಇರುತ್ತದೆ. ವಿಶೇಷ ಆದ್ಯತೆಯಡಿ ವರ್ಗಾವಣೆ ಬಯಸುವವರಿಗೆ ಈ ನಿಯಮ ಅನ್ವಯವಾಗದು. ಯಾವುದೇ ಒಂದು ಘಟಕ ಹಾಗೂ ವೃಂದದಲ್ಲಿ ಕನಿಷ್ಠ 10 ವರ್ಷ ಅಥವಾ ಎಲ್ಲ ವೃಂದಗಳೂ ಸೇರಿ 15 ವರ್ಷ ಕೆಲಸ ಮಾಡಿದ ಶಿಕ್ಷಕರನ್ನು ಶೇ.25 ರಷ್ಟು ಮಿತಿಯ ಒಳಗೆ ಖಾಲಿ ಹುದ್ದೆಗಳಿರುವ ತಾಲೂಕಿಗೆ ವರ್ಗಾವಣೆಗೆ ಅವಕಾಶವಿರುತ್ತದೆ. ಈಗಾಗಲೇ ಶಿಕಕ್ಷರ ವರ್ಗಾವಣೆ ಮಾರ್ಗಸೂಚಿಯಲ್ಲಿರುವಂತೆ ಶಿಕ್ಷಕರ ವೇಯ್ಟೆಡ್ ಅಂಕಗಳ (ಸೇವಾ ಅಂಕಳಗ)ಲೆಕ್ಕಾಚಾರವನ್ನು ಹೊಸ ನಿಯಮಾವಳಿಗೆ ಸೇರಿಸಲಾಗಿದೆ.
ಶಿಕ್ಷಕರ ಸ್ನೇಹಿ ವರ್ಗಾವಣೆ ನಿಯಮ ರೂಪಿಸಿರುವ ರಾಜ್ಯ ಸರ್ಕಾರವನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಅಭಿನಂದಿಸಿದೆ. ವರ್ಗಾವಣಾ ಮಾರ್ಗಸೂಚಿ, ವೇಳಾಪಟ್ಟಿಗಳು ಪ್ರಕಟಗೊಂಡಿದ್ದು, ಸಂಘದ ಬಹುದೊಡ್ಡ ಬೇಡಿಕೆ ಈಡೇರಿದಂತಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.
ಇದನ್ನೂ ಓದಿ | ಸಂಪಾದಕೀಯ l ಕೆಲವೇ ಕೆಲವು ನೀತಿಗೆಟ್ಟ ಶಿಕ್ಷಕರಿಂದ ಇಡೀ ಶಿಕ್ಷಕ ವರ್ಗಕ್ಕೆ ಕಳಂಕ ತಟ್ಟದಿರಲಿ