Site icon Vistara News

Teacher Transfer | ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಶಾಲೆ ಪ್ರಶಸ್ತಿ ಪಡೆದ ಶಾಲಾ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ

Bidarahalli Government School Protest

ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿದರಹಳ್ಳಿ ಸರ್ಕಾರಿ ಶಾಲೆಯ ಶಿಕ್ಷಕ ದಿನೇಶ್ ಅವರನ್ನು ದಿಡೀರ್ ವರ್ಗಾವಣೆ (Teacher Transfer) ಮಾಡಿರುವುದನ್ನು ವಿರೋಧಿಸಿ ಗ್ರಾಮಸ್ಥರು, ಪೋಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಗೇಟ್‌ಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ಮಲೆನಾಡ ಗಾಂಧಿ ಎಚ್‌.ಜಿ. ಗೋವಿಂದೇಗೌಡ ಹೆಸರಿನ ರಾಜ್ಯಮಟ್ಟದ ಅತ್ಯುತ್ತಮ ಸರ್ಕಾರಿ ಶಾಲೆ ಎಂಬ ಪ್ರಶಸ್ತಿ ಹಾಗೂ ಇನ್ನಿತರ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪಡೆಯುವ ಮೂಲಕ ಮಲೆನಾಡಿನ ಹಳ್ಳಿಯೊಂದು ರಾಜ್ಯದಲ್ಲಿ ಗುರುತಿಸಿಕೊಂಡಿದೆ. ಇತ್ತೀಚೆಗೆ ಈ ಶಾಲೆಗೆ ರಾಜ್ಯ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಭೇಟಿ ನೀಡಿ ಶಾಲೆಯ ಕಾರ್ಯವೈಖರಿಯನ್ನು ಪ್ರಶಂಸಿಸಿದ್ದರು.

ಶಿಕ್ಷಕರ ನಿಸ್ವಾರ್ಥ ಸೇವೆ, ಶಿಕ್ಷಣ ಪ್ರೇಮ, ಊರವರ ಸಹಾಯ, ಸಹಕಾರ ಸೇರಿದರೆ ಸರ್ಕಾರಿ ಶಾಲೆಯೊಂದು ಹೇಗೆ ಅಭಿವೃದ್ಧಿ ಪಥದಲ್ಲಿ ಸಾಗಬಹುದು ಎಂಬುದಕ್ಕೆ ಉತ್ತರವಾಗಿ ನಿಲ್ಲುತಿತ್ತು ಈ ಶಾಲೆ. ಆದರೆ ಇಂದು ಅದೇ ಶಾಲೆಯ ಮುಂಭಾಗ ಪೋಷಕರು, ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆದಿದೆ. ಶಿಕ್ಷಕ ದಿನೇಶ್ ಅವರ ವರ್ಗಾವಣೆ ವಿರೋಧಿಸಿ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಬಾಡದ ಕನಕದಾಸರ ಅರಮನೆ ಮಾದರಿ ಕೋರಲಿದೆ ಸ್ವಾಗತ

ಹಳ್ಳಿ ಶಾಲೆಯ ಅಭಿವೃದ್ಧಿ ಸಹಿಸದ ಕೆಲವು ಪಟ್ಟಭದ್ರ ಹಿತಾಸಕ್ತಿ ಶಕ್ತಿಗಳ ಕೈವಾಡದಿಂದ ನಮ್ಮೆಲ್ಲರ ನೆಚ್ಚಿನ ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಬಂದು ವರ್ಗಾವಣೆ ಆದೇಶವನ್ನು ರದ್ದುಪಡಿಸದಿದ್ದಲ್ಲಿ ಶಾಲೆಯ ಮುಂಭಾಗದಲ್ಲೇ ಅಹೋರಾತ್ರಿ ಧರಣಿ ಕೂರುತ್ತೇವೆ. ಇಲ್ಲದಿದ್ದಲ್ಲಿ ಶಾಲೆಯಿಂದ ಸಾಮೂಹಿಕ ಟಿಸಿ ಪಡೆಯುತ್ತೇವೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಶಾಲಾ ವಿದ್ಯಾರ್ಥಿಗಳಂತೂ‌ ನಮ್ಮ ದಿನೇಶ್ ಸರ್ ಅವರನ್ನು ನಾವು ಎಲ್ಲಿಗೂ ಕಳುಹಿಸುವುದಿಲ್ಲ ಎಂದು ಗೋಳಿಟ್ಟರು. ಪ್ರತಿಭಟನೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪದ್ಮರಾಜ್, ಉಪಾಧ್ಯಕ್ಷರಾದ ಕುಸುಮ ಸುರೇಶ್, ರಾಘವೇಂದ್ರ, ಸದಸ್ಯರಾದ ರಾಜೇಶ್ ಬಿ.ಎಲ್.ನಾಗೇಶಪ್ಪ ಕೆರೆಮನೆ, ಅಮೃತ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಂಡಿ ಲಿಂಗ ರಾಜ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಗ್ರಾಮಸ್ಥರಾದ ಬಿ.ಪಿ. ಮಹೇಶ್, ರಮೇಶ್ ಸೇರಿದಂತೆ ನೂರಾರು ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು

ಇದನ್ನೂ ಓದಿ | Ola auto service | ಸರ್ಕಾರ ನಿಗದಿಪಡಿಸಿದ ಆಟೋ ದರಕ್ಕೆ ಓಲಾ, ಉಬರ್‌ ಆಕ್ಷೇಪ: ಅಧಿಸೂಚನೆಗೆ ಕೋರ್ಟ್‌ ತಡೆ

Exit mobile version