ಯಾದಗಿರಿ: ನೆಚ್ಚಿನ ಶಿಕ್ಷಕನ ವರ್ಗಾವಣೆಗೆ ವಿದ್ಯಾರ್ಥಿಗಳು ಕಣ್ಣೀರಿಟ್ಟು, ಬಿಟ್ಟು ಹೋಗಬೇಡಿ ಸರ್ ಎಂದು ಗೋಳಾಡಿ ಅತ್ತ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡಬೆಂಬಳಿ ಪ್ರೌಢಶಾಲೆಯಲ್ಲಿ ನಡೆದಿದೆ. ಶಿಕ್ಷಕ ಸಿದ್ದಪ್ಪ ಅವರು ಬೆಂಡಬೆಂಬಳಿ ಪ್ರೌಢಶಾಲೆಯಿಂದ ಮುದ್ನಾಳ ಪ್ರೌಢಶಾಲೆಗೆ ವರ್ಗಾವಣೆ (Teacher Transfer) ಆಗಿದ್ದಾರೆ. ಹೀಗಾಗಿ ಶಿಕ್ಷಕನ ಕೈ, ಕಾಲು ಹಿಡಿದು ವಿದ್ಯಾರ್ಥಿಗಳು ಕಣ್ಣೀರಿಟ್ಟಿದ್ದು, ನಮ್ಮನ್ನು ಬಿಟ್ಟು ಹೋಗಬೇಡಿ ಎಂದು ಬೇಡಿಕೊಂಡಿದ್ದಾರೆ.
ಶಿಕ್ಷಕ ಸಿದ್ದಪ್ಪ ಹೋಗುವಾಗ ಅವರನ್ನು ಸುತ್ತುವರಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಾಲೆ ಬಿಟ್ಟು ಹೋಗಬೇಡಿ ಸರ್, ನೀವು ಇರಬೇಕು ಎಂದು ಪರಿಪರಿಯಾಗಿ ಬೇಡಿಕೊಂಡರು. ನಂತರ ಶಿಕ್ಷಕ ಬೈಕ್‌ನಲ್ಲಿ ಹತ್ತಿ ಹೊರಟ ಬಳಿಕ ರಸ್ತೆಯಲ್ಲಿ ನಿಂತು ವಿದ್ಯಾರ್ಥಿನಿಯರು ಬಿಕ್ಕಿ ಬಿಕ್ಕಿ ಅತ್ತಿದ್ದು ಕಂಡುಬಂತು.
ಇದನ್ನೂ ಓದಿ | Girls Harrassed : ಕಾಲೇಜು ಗೋಡೆ ಮೇಲೆ ವಿದ್ಯಾರ್ಥಿನಿಯರ ಬಗ್ಗೆ ಅಶ್ಲೀಲ ಬರಹ; ಪುಂಡರ ಮೇಲೆ ಕಣ್ಣು
ವರ್ಗಾವಣೆ ಆಗದಿದ್ದಕ್ಕೆ ಮನನೊಂದು ಶಿಕ್ಷಕಿ ಆತ್ಮಹತ್ಯೆ
ಬೆಂಗಳೂರು ಗ್ರಾಮಾಂತರ: ಇಲ್ಲಿನ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರ್ಗಾವಣೆ (teacher transfer) ಆಗದಿದ್ದಕ್ಕೆ ಮನನೊಂದು ಶಿಕ್ಷಕಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ನಡೆದಿದೆ. ಎನ್.ಟಿ ಜ್ಯೋತಿ (40) ನೇಣಿಗೆ ಶರಣಾದ ಶಿಕ್ಷಕಿ.
ದೊಡ್ಡಬಳ್ಳಾಪುರದ ತುರವನಹಳ್ಳಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಜ್ಯೋತಿ, ಫ್ರೌಡಶಾಲೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದರು. ಆದರೆ ವರ್ಗಾವಣೆ ಆಗದ ಕಾರಣಕ್ಕೆ ಮನನೊಂದು ರೂಮಿನ ಕಿಟಿಕಿಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ಶಿಕ್ಷಕಿ ಇಂತಹ ದುಡುಕಿನ ನಿರ್ಧಾರಕ್ಕೆ ಕೈಹಾಕಿದ್ದಾರೆ. ಪತಿ ವಿರೂಪಾಕ್ಷ ರಾತ್ರಿ ಮನೆಗೆ ಬಂದಾಗ ರೂಮಿನ ಡೋರ್ ಲಾಕ್ ಆಗಿತ್ತು. ನಿದ್ದೆಯಲ್ಲಿರಬೇಕೆಂದು ಸುಮ್ಮನಾಗಿದ್ದ ವಿರೂಪಾಕ್ಷ ಬೆಳಗ್ಗೆ ಎದ್ದು ನೋಡಿದಾಗ ಪತ್ನಿ ನೇಣಿಗೆ ಶರಣಾಗಿರುವುದು ತಿಳಿದು ಬಂದಿದೆ.
ಇದನ್ನೂ ಓದಿ | Shivamogga News: ಅರಬಗಟ್ಟೆ ಗ್ರಾಮ ಸಮಸ್ಯೆಗಳ ಆಗರ, ಮೂಲ ಸೌಕರ್ಯ ಒದಗಿಸುವಂತೆ ಜನ ಆಗ್ರಹ
ಈ ಸಂಬಂಧ ವಿರೂಪಾಕ್ಷ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಜ್ಯೋತಿ ಸಾವಿನ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.