ಚಾಮರಾಜನಗರ: ಪೆನ್ನು ಹಿಡಿಯಬೇಕಿದ್ದ ಮಕ್ಕಳ ಕೈಗೆ ಶಿಕ್ಷಕರು ಪೊರಕೆ ಕೊಟ್ಟು ಶೌಚಾಲಯ ಸ್ವಚ್ಛಗೊಳಿಸಿರುವ ಪ್ರಕರಣ ಹನೂರು ತಾಲೂಕು ಕೌದಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಗೆ ಬಂದಿದೆ. ಈ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (viral video) ಆಗಿದೆ.
ನಾಲ್ಕೈದು ವಿದ್ಯಾರ್ಥಿಗಳಿಂದ ಹೆಣ್ಣು ಮಕ್ಕಳ ಶೌಚಾಲಯವನ್ನು ಸ್ವಚ್ಛಗೊಳಿಸಿದ್ದಾರೆ. ಮಕ್ಕಳು ಸಹ ಅನಿವಾರ್ಯವಾಗಿ ಶೌಚಾಲಯಕ್ಕೆ ನೀರು ಹಾಕಿ ಪೊರಕೆಯಿಂದ ಸ್ವಚ್ಛಗೊಳಿಸಿದ್ದಾರೆ. ಈ ವಿಷಯ ಬಳಿಕ ಪೋಷಕರಿಗೆ ತಿಳಿದಿದೆ. ಇದರಿಂದ ಪೋಷಕರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಸ್ವಚ್ಛತೆ ವೇಳೆ ಸಾರ್ವಜನಿಕರ ದಾಳಿ
ಇತ್ತ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಛಗೊಳಿಸಲಾಗುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಶಾಲೆಗೆ ದೌಡಾಯಿಸಿದ್ದಾರೆ. ಅಲ್ಲದೆ, ಮೊಬೈಲ್ ಮೊಬೈಲ್ ಹಿಡಿದು ಚಿತ್ರೀಕರಣಕ್ಕೆ ಮುಂದಾಗುತ್ತಿದ್ದಂತೆ ಸ್ವಚ್ಛತೆ ಮಾಡಿಸುತ್ತಿದ್ದ ಮಕ್ಕಳನ್ನು ಅಲ್ಲಿಂದ ಓಡಿಸಲಾಗಿದೆ. ಇದು ಸಾರ್ವಜನಿಕರ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ: DCC Bank Recruitment 2023 : ಬೆಂಗಳೂರು ಡಿಸಿಸಿ ಬ್ಯಾಂಕ್‌ನಲ್ಲಿ 96 ಹುದ್ದೆಗಳಿಗೆ ನೇಮಕ; ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನ
ಶಾಲೆಗೆ ಓದಲು ಕಳುಹಿಸಿದರೆ ನೀವು ಅವರಿಂದ ಶೌಚಾಲಯವನ್ನು ಸ್ವಚ್ಛಗೊಳಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆಲಕಾಲ ಗಲಿಬಿಲಿಗೊಂಡ ಶಿಕ್ಷಕರು ಬಳಿಕ, ವಿದ್ಯಾರ್ಥಿಯೇ ಅಲ್ಲಿ ಗಲೀಜು ಮಾಡಿದ್ದ. ಹೀಗಾಗಿ ಆತನಿಂದಲೇ ಅದನ್ನು ಸ್ವಚ್ಛತೆ ಮಾಡಿಸುತ್ತಿದ್ದೆವು ಎಂದು ಸಮಜಾಯಿಷಿ ನೀಡಿದ್ದಾರೆ. ಈ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಶಿಕ್ಷಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.