ಬೆಂಗಳೂರು: ರಾಮಮಂದಿರ (Ram Mandir) ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರಿಗೆ ಆಹ್ವಾನ ನೀಡಲಾಗಿದೆ. ಜ.22ರಂದು ನಡೆಯುವ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಈಗಿನಿಂದಲೇ ಹಲವು ಪ್ರಮುಖರು ಅಯೋಧ್ಯೆಯತ್ತ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ರಾಜ್ಯದಿಂದ ವಿವಿಧ ಮಠಗಳ ಸ್ವಾಮೀಜಿಗಳು ಶನಿವಾರ ಅಯೋಧ್ಯೆಗೆ ತೆರಳಿದ್ದಾರೆ.
ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದಿಂದ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ , ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಕಾಗಿನೆಲೆಯ ನಿರಂಜನಾನಂದಪುರಿ ಶ್ರೀಗಳು, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮೀಜಿ, ಮಾದಾರ ಚೆನ್ನಯ್ಯ ಗುರುಪೀಠದ ಶ್ರೀಗಳು, ಭಗೀರಥ ಗುರುಪೀಠದ ಸ್ವಾಮೀಜಿ ಅವರು ಅಯೋಧ್ಯೆಗೆ ತೆರಳಿದ್ದಾರೆ.
ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆಗೆ ಇನ್ನೆರಡು ದಿನ ಬಾಕಿ ಇದೆ. ಅಯೋಧ್ಯೆಯಲ್ಲಿ ಸಮಾರಂಭಕ್ಕೆ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದೆ. ಪ್ರಾಣ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ದೇಶ-ವಿದೇಶದ ಗಣ್ಯರು, ಸೆಲೆಬ್ರಿಟಿಗಳು ಐತಿಹಾಸಿಕ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
ಇದನ್ನೂ ಓದಿ | Ram Mandir: ರಾಮಮಂದಿರ ಪ್ರತಿಷ್ಠಾಪನೆ; ರಾಜ್ಯದಲ್ಲಿ ಬಿಗಿ ಭದ್ರತೆಗೆ ಸಿಎಂ ಸೂಚನೆ
ರಾಮಮಂದಿರ ಪ್ರತಿಷ್ಠಾಪನೆ ದಿನವನ್ನು ರಾಮನವಮಿಯಂತೆ ಆಚರಿಸಿ: ರವಿಶಂಕರ್ ಗುರೂಜಿ
ಬೆಂಗಳೂರು: ದೇಶದ ಜನತೆ ಶತಮಾನಗಳಿಂದ ಕಾಯುತ್ತಿದ್ದ ಸಮಯ ಬರುತ್ತಿದೆ. ರಾಮ ಜನ್ಮಭೂಮಿಯಲ್ಲಿ ಭವ್ಯವಾದ ರಾಮಮಂದಿರವು (Ram Mandir) ನಿರ್ಮಾಣವಾಗುತ್ತಿದೆ. ಇದು ಎಲ್ಲರಲ್ಲೂ ಉತ್ಸಾಹ ಮೂಡಿಸಿದೆ. ಶ್ರೀರಾಮ ಹಾಗೂ ಕರ್ನಾಟಕಕ್ಕೆ ಬಹಳ ಹತ್ತಿರದ ನಂಟು ಇದೆ. ಹೀಗಾಗಿ ರಾಮಮಂದಿರ ಪ್ರತಿಷ್ಠಾಪನಾ ದಿನದಂದು ಕನ್ನಡಿಗರು ಮನೆಯಲ್ಲಿ ದೀಪಗಳನ್ನು ಹಚ್ಚಿ ಒಂದು ಅಧಿಕವಾದ ರಾಮನವಮಿಯನ್ನು ಆಚರಿಸಬೇಕು ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ, ಖ್ಯಾತ ಅಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ತಿಳಿಸಿದ್ದಾರೆ.
ರಾಮಮಂದಿರ ಉದ್ಘಾಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಈ ಸಮಯದಲ್ಲಿ ರಾಮಾಯಣ ಜತೆಗೆ ಯೋಗ ವಸಿಷ್ಠ ಓದಬೇಕು. ಯೋಗ ವಸಿಷ್ಠದಲ್ಲಿ ಶ್ರೀರಾಮನು ಬಹಳಷ್ಟು ಜ್ಞಾನವನ್ನು ಪಡೆದಿದ್ದಾನೆ, ಹಾಗೆಯೇ ಕೊಟ್ಟಿದ್ದಾನೆ. ಶ್ರೀರಾಮ ಹಾಗೂ ಕರ್ನಾಟಕಕ್ಕೂ ಬಹಳ ಹತ್ತಿರದ ನಂಟು ಇದೆ. ಶ್ರೀರಾಮನಿಗೆ ಸಹಾಯ ಮಾಡಿದ ಹನುಮಂತ ಹುಟ್ಟಿದ್ದು ನಮ್ಮ ರಾಜ್ಯದಲ್ಲಿ. ಅದೇ ರೀತಿ ಕನ್ನಡಿಗ ಶಿಲ್ಪಿಯೇ ಕೆತ್ತಿದ ರಾಮನ ಮೂರ್ತಿಯನ್ನೇ ಆಯೋಧ್ಯೆಯಲ್ಲಿ ಸ್ಥಾಪನೆ ಮಾಡಲಾಗುತ್ತಿದೆ. ಹೀಗಾಗಿ ಕಂದ ರಾಮನು ಕನ್ನಡದ ಕಂದನಾಗಿ ಅಲ್ಲಿ ಕೂರುತ್ತಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Ram Mandir : ಮುಕ್ಕಾಲು ಇಂಚಿನ ಚಾಕ್‌ಪೀಸ್‌ನಲ್ಲಿ ಅರಳಿದ ಅಯೋಧ್ಯಾ ಬಾಲರಾಮ
ಇನ್ನು ನ್ಯಾಯಾಲಯದಲ್ಲಿ ಸಹ ರಾಮಜನ್ಮಭೂಮಿ ವಿವಾದ ಬಗೆಹರಿಯಲು ಕನ್ನಡಿಗರಾದ ನಮ್ಮನ್ನೇ ಆಯ್ಕೆ ಮಾಡಲಾಗಿತ್ತು. ಜತೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಲ್ಲಿ ಒಬ್ಬರು ನಮ್ಮ ರಾಜ್ಯದವರೇ ಆಗಿದ್ದರು. ಹೀಗಾಗಿ ಕರ್ನಾಟಕದ ಜತೆ ರಾಮಮಂದಿರಕ್ಕೆ ಹತ್ತಿರ ಸಂಬಂಧವಿದೆ. ಆದ್ದರಿಂದ ಕನ್ನಡಿಗರು ಹೆಚ್ಚಿನ ಹುರುಪಿನಿಂದ ಆಚರಣೆ ಮಾಡಬೇಕು ಎಂದು ತಿಳಿಸಿದರು.