ತುಮಕೂರು: ಕರ್ನಾಟಕ ಸರ್ಕಾರದ ನಿರ್ಮಾಣ ತಂತ್ರಾಂಶ-2ರಲ್ಲಿ (Nirman 2) ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ನಗರ ಪ್ರದೇಶಗಳಲ್ಲಿ ಮನೆ ನಿರ್ಮಾಣಕ್ಕೆ ಆನ್‌ಲೈನ್ ಮೂಲಕ ನಿರಾಕ್ಷೇಪನಾ ಪತ್ರ (ಎನ್‌ಒಸಿ) ನೀಡಲು ಸಮಸ್ಯೆಯಾಗಿದೆ. ಹೀಗಾಗಿ ಹೊಸ ಮನೆ ನಿರ್ಮಿಸಬೇಕೆಂದು ಅಂದುಕೊಂಡವರು ಪರವಾನಗಿ ಸಿಗದೆ ಪರದಾಡುವಂತಾಗಿದೆ.
ಇಡಿ ರಾಜ್ಯದಲ್ಲಿ ಬಳಸುವ ಅಪ್ಲಿಕೇಶನ್‌ನ ಸರ್ವರ್‌ಗೆ ಕೇವಲ 2.6 ಟಿಬಿ ಹಾರ್ಡ್‌ಡ್ರೈವ್ ಮೀಸಲಿಟ್ಟಿರುವುದೇ ವೆಬ್‌ಸೈಟ್ ಸಮಸ್ಯೆಗೆ ಮೂಲ ಕಾರಣ ಎನ್ನಲಾಗಿದೆ. ಸುಮಾರು ಒಂದು ತಿಂಗಳಿಂದ ನಿರ್ಮಾಣ-2 ತಂತ್ರಾಂಶ ಬಂದ್ ಆಗಿರುವುದರಿಂದ ಪರವಾನಗಿ ಪಡೆಯಲು ತೊಂದರೆಯಾಗಿದೆ.
ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ 2018ರಲ್ಲಿ ಆರಂಭಿಸಲಾಗಿದ್ದ ನಿರ್ಮಾಣ-2 ತಂತ್ರಾಂಶ ಸಾರ್ವಜನಿಕ ಸ್ನೇಹಿ ಎನಿಸಿಕೊಂಡಿದೆ. ಆದರೆ, ಈಗ ಡೇಟಾ ಸ್ಟೋರ್ ಮಾಡಲು ಸಾಮರ್ಥ್ಯದ ಕೊರತೆ ಇರುವುದರಿಂದ ಅರ್ಜಿ ಸ್ವೀಕಾರವನ್ನು ಸ್ಥಗಿತ ಮಾಡಲಾಗಿದೆ.
ಇದನ್ನೂ ಓದಿ | ರಾಜ್ಯಸಭೆ ಚುನಾವಣೆ | ಜೆಡಿಎಸ್ ತೆಕ್ಕೆಯಿಂದ ಹಾರಿದ ತುಮಕೂರು ʼಗುಬ್ಬಿʼ
ನಿರ್ಮಾಣ-2 ಬಂದ್ ಆಗಿರುವುದರಿಂದ ಪರವಾನಗಿ ನೀಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಡುತ್ತಿರುವುದು ಹೆಚ್ಚಾಗಿದೆ. ನಿರ್ಮಾಣ-2 ಸ್ಥಗಿತವಾಗಿರುವುದರಿಂದ ಹಿಂದಿನಂತೆಯೇ ನಿರ್ಮಾಣ -1ರಲ್ಲಿ ಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕಾದ ಅನಿವಾರ್ಯತೆ ಇದೆ. ಇದು ಭಷ್ಟಾಚಾರಕ್ಕೆ ಎಡೆಮಾಡಿಕೊಡಲಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ತುಮಕೂರು ಮಹಾನಗರ ಪಾಲಿಕೆಯಲ್ಲಿ ನಿರ್ಮಾಣ-2 ರಲ್ಲಿ ಪರವಾನಗಿ ಕೋರಿ 77 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಈ ಅರ್ಜಿಗಳ ವಿಲೇವಾರಿ ಆಗದೆ ಜನರು ಸಂಕಷ್ಟ ಎದುರಿಸುವಂತಾಗಿದೆ. ಬ್ಯಾಂಕ್‌ಗಳಿಂದ ಸಾಲ ಪಡೆಯಲು ಈ ಪರವಾನಗಿ ಅಗತ್ಯ, ಹೀಗಾಗಿ ಕಟ್ಟಡ ನಿರ್ಮಾಣವೇ ದೊಡ್ಡ ತಲೆನೋವಾಗಿದೆ.
ಪರವಾನಗಿಗೆ ಅರ್ಜಿ ಸಲ್ಲಿಸಬೇಕು
ಸದ್ಯ 2018 ಏಪ್ರಿಲ್‌ಗೂ ಪೂರ್ವದಲ್ಲಿ ಲಭ್ಯವಿದ್ದ ನಿರ್ಮಾಣ -1 ತಂತ್ರಾಂಶದ ಮೂಲಕ ಕಟ್ಟಡ ನಿರ್ಮಾಣ ಪರವಾನಗಿಗೆ ಅರ್ಜಿ ಸಲ್ಲಿಸಲು ಪೌರಾಡಳಿತ ನಿರ್ದೇಶನಾಲಯ ಸೂಚಿಸಿದೆ. ಇದರಿಂದ ಸಾರ್ವಜನಿಕರಿಗೆ ಹೆಚ್ಚಿನ ತಲೆನೋವಾಗಿವೆ. ನಿರ್ಮಾಣ-1ನಲ್ಲಿ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ಪಾಲಿಕೆ ಕಚೇರಿಗೂ ದಾಖಲೆ ಸಲ್ಲಿಸಬೇಕು. ಆಗ ಅಧಿಕಾರಿಗಳು ಭೌತಿಕ ಕಡತಗಳನ್ನು ಪರಿಶೀಲಿಸಿ ಅನುಮತಿ ನೀಡಬೇಕಾಗುತ್ತದೆ. ಮ್ಯಾನ್ಯುಯಲ್ ಆಗಿ ಪರವಾನಗಿ ನೀಡುವುದರಿಂದ ಪಾಲಿಕೆ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಕೆಲಸ ತಡಮಾಡುವ ಸಾಧ್ಯತೆ ಇದ್ದು, ಇದು ಲಂಚಗುಳಿತನಕ್ಕೂ ಅವಕಾಶ ಮಾಡಿಕೊಡಲಿದೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ | ಪರಿಸರಕ್ಕೆ ಧಕ್ಕೆಯಾಗದೇ ಹೊಸಪೇಟೆ ಸುರಂಗ ಮಾರ್ಗ ನಿರ್ಮಾಣ: ಸಚಿವ ನಿತಿನ್ ಗಡ್ಕರಿ ಮೆಚ್ಚುಗೆ