ಚಿತ್ರದುರ್ಗ: ಪುರಾತನ ದೇಗುಲಗಳನ್ನು ಧ್ವಂಸ ಮಾಡುವುದು, ವಿಗ್ರಹಗಳನ್ನು ಭಗ್ನಗೊಳಿಸುವುದು ಹಾಗೂ ಧಾರ್ಮಿಕ ಸ್ಥಳಗಳಿಗೆ ಸಂಬಂಧಿಸಿದ ಸ್ಥಳಗಳನ್ನು ಅತಿಕ್ರಮಣ ಮಾಡುವುದು ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಹೆಚ್ಚಾಗಿ ಕಂಡುಬರುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಚರ್ಚ್ ನಿರ್ಮಿಸಲು ಶ್ರೀರಾಮನ ದೇವಸ್ಥಾನವನ್ನೇ ನೆಲಸಮ(Temple Demolition) ಮಾಡಿರುವುದು ಕಂಡುಬಂದಿದ್ದು, ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಮಟ್ಟಿ ಗ್ರಾಮದ ಸಮೀಪದ ಕೂಡ್ಲಹಳ್ಳಿ ರಸ್ತೆಯ ಜಮೀನಿನಲ್ಲಿ ಪುರಾತನ ಶ್ರೀರಾಮ ದೇವಸ್ಥಾನವನ್ನು ವ್ಯಕ್ತಿಯೊಬ್ಬರು ಧ್ವಂಸ ಮಾಡಿದ್ದು, ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದು ಪರಿಷತ್ ಜಿಲ್ಲಾ ಸಹಕಾರ್ಯದರ್ಶಿ ಶ್ರೀನಿವಾಸ್ ಹಿರಿಯೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಗುರುವಾರ ಸ್ಥಳ ಪರಿಶೀಲನೆ ನಡೆಸಿದಾಗ, ಬೆಂಗಳೂರು ನಿವಾಸಿಯಾದ ಕ್ರಿಶ್ಚಿಯನ್ ಧರ್ಮದ ವಿಮಲ್ ರಾಜ್ ಎಂಬಾತ, ಮಸ್ಕಲ್ ಮಟ್ಟಿ ಗ್ರಾಮದ ಸುಬ್ರಹ್ಮಣ್ಯ ಅವರ ಜಮೀನನ್ನು ಖರೀದಿಸಿದ್ದು, ಆ ಜಮೀನಿನಲ್ಲಿ ಸುಮಾರು 250-300 ವರ್ಷದ ಪುರಾತನ ದೇವಸ್ಥಾನವನ್ನು ಜೆಸಿಬಿ ಸಹಾಯದಿಂದ ಧ್ವಂಸ ಮಾಡಿರುವುದು ಕಂಡುಬಂದಿದ್ದು, ಶ್ರೀರಾಮ ಕಲ್ಲಿನ ಮೂರ್ತಿಯನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ ಎಂಬುವ ವಿಷಯ ತಿಳಿದುಬಂದಿದೆ.
ಈ ಬಗ್ಗೆ ಸ್ಥಳೀಯರನ್ನು ಪೊಲೀಸರು ವಿಚಾರಿಸಿದಾಗ ಎರಡು ದಿನಗಳ ಹಿಂದೆ ಈ ದೇವಸ್ಥಾನವು ಇದ್ದು, ರಾತ್ರೋರಾತ್ರಿ ಜಮೀನಿನ ಮಾಲೀಕ ವಿಮಲ್ ರಾಜ್ ದೇವಸ್ಥಾನವನ್ನು ಧ್ವಂಸ ಮಾಡಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ದೇಗುಲ ಧ್ವಂಸ ಮಾಡಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹಿಂದುಪರ ಸಂಘಟನೆಗಳು ಒತ್ತಾಯಿಸಿವೆ.
ಇದನ್ನೂ ಓದಿ | Love Jihad| ಮುಸ್ಲಿಂ ಧರ್ಮಕ್ಕೆ ಮತಾಂತರ ಆಗುವಂತೆ ಪತಿಯಿಂದ ಚಿತ್ರಹಿಂಸೆ; ಪೊಲೀಸ್ ಮೊರೆ ಹೋದ ಹಿಂದು ಮಹಿಳೆ