Site icon Vistara News

Chief Minister Tour | ಕಡಲ್ಕೊರೆತ ಸಮಸ್ಯೆ ತಡೆಗೆ ತಾತ್ಕಾಲಿಕ ಕಾಮಗಾರಿ: ಸಿಎಂ ಬೊಮ್ಮಾಯಿ

ಸಿಎಂ ಬೊಮ್ಮಾಯಿ

ಉಡುಪಿ: ಕರಾವಳಿ ಜಿಲ್ಲೆಗಳಲ್ಲಿ ಪ್ರತಿ ವರ್ಷ ಕಡಲ್ಕೊರೆತ ಹೆಚ್ಚಾಗಿದ್ದು, ಸಮಸ್ಯೆ ಪರಿಹಾರಕ್ಕೆ ತಕ್ಷಣ ತಾತ್ಕಾಲಿಕ ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಮುಂದಿನ ದಿನಗಳಲ್ಲಿ ಶಾಶ್ವತ ಕಾಮಗಾರಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಬೈಂದೂರು ತಾಲೂಕಿನ ಮರವಂತೆ ಕಡಲ ತೀರದಲ್ಲಿ ಕಡಲ್ಕೊರೆತ ಪರಿಶೀಲಿಸಿ ಮಾತನಾಡಿ, ಕಡಲ್ಕೊರೆತ ತಡೆಯಲು ತಾತ್ಕಾಲಿಕ ಕಾಮಗಾರಿ ನಡೆಸಲು ಅಗತ್ಯವಿರುವ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲಾಗುತ್ತದೆ. ನನೆಗುದಿಗೆ ಬಿದ್ದಿರುವ ಹಾಗೂ ಕಳಪೆ ಕಾಮಗಾರಿಗಳನ್ನು ಪರಿಶೀಲಿಸಿ ಕ್ರಮ ಸೂಕ್ತ ಕ್ರಮ ಕೈಗಳ್ಳಲಾಗುವುದು. ಮುಂದಿನ ದಿನಗಳಲ್ಲಿ ಶಾಶ್ವತ ಕಾಮಗಾರಿ ನಡೆಸಲು ಯೋಜನಾ ವರದಿ ಸಿದ್ಧಪಡಿಸಿ ಅನುಷ್ಠಾನ ಮಾಡಲಾಗುವುದು ಎಂದರು.

ಈ ವೇಳೆ ಮಳೆಯಿಂದ ಕರಾವಳಿ ಪೂರ್ಣ ಹಾಳಾಗಿದೆಯೆಂದು ಬೈಂದೂರು ಶಾಸಕ ಬಿ.ಎಮ್.ಸುಕುಮಾರ್ ಶೆಟ್ಟಿ ಹೇಳಿದಾಗ, ನೀವು ಮಾಧ್ಯಮದವರಾ ಎಂದು ಶಾಸಕರ ವಿರುದ್ಧ ಸಿಎಂ ಬೊಮ್ಮಾಯಿ ಗರಂ ಆದರು. ಮಳೆ ಹಿನ್ನೆಲೆಯಲ್ಲಿ ಪೂರ್ವ ನಿಗದಿಯಾಗಿದ್ದ ಕಾಪು ತಾಲೂಕಿನ ಮೂಳೂರು ಕಡಲತೀರದ ಕಡಲ್ಕೊರೆತ ಪ್ರದೇಶದ ಸಿಎಂ ‌ಭೇಟಿ ರದ್ದಾಯಿತು. ನಂತರ ಅವರು ನೇರವಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ಸಿಎಂ ಮರವಂತೆ ಭೇಟಿ ವೇಳೆ ಶಾಸಕ ಸುಕುಮಾರ್ ಶೆಟ್ಟಿ, ಸಚಿವರಾದ ಆರ್‌.ಅಶೋಕ್, ಕೋಟ ಶ್ರೀನಿವಾಸ ಪೂಜಾರಿ, ಎಸ್‌.ಅಂಗಾರ ಮತ್ತಿತರರು ಇದ್ದರು.

ಇದನ್ನೂ ಓದಿ | Chief Minister Tour | ಮುಂದಿನ ವಾರ ಉತ್ತರ ಕರ್ನಾಟಕ ಪ್ರವಾಸ: ಸಿಎಂ ಬಸವರಾಜ ಬೊಮ್ಮಾಯಿ

Exit mobile version