Site icon Vistara News

Inter State Metro: ಬೆಂಗಳೂರು-ಹೊಸೂರು ಸಂಪರ್ಕ; ಮೊದಲ ಅಂತಾರಾಜ್ಯ ಮೆಟ್ರೊ ಯೋಜನೆಗೆ ಟೆಂಡರ್‌

chennai metro rail

ಬೆಂಗಳೂರು: ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಮೆಟ್ರೋ ರೈಲು ಯೋಜನೆಗೆ ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (ಸಿಎಂಆರ್‌ಎಲ್‌) ಚಿಂತನೆ ನಡೆಸಿದ್ದು, ಈ ಸಂಬಂಧ ಅಧ್ಯಯನ ವರದಿ ತಯಾರಿಸಲು ಟೆಂಡರ್ ಕರೆದಿದೆ. ಸಿಲಿಕಾನ್‌ ಸಿಟಿ ಬೆಂಗಳೂರು ಹಾಗೂ ತಮಿಳುನಾಡಿನ ಹೊಸೂರು ನಡುವೆ ಮೆಟ್ರೋ ರೈಲು ಸೇವೆ (Inter State Metro) ಆರಂಭಿಸಲು ಅಧ್ಯಯನ ವರದಿ ತಯಾರಿಸಲು ಸಲಹೆಗಾರರನ್ನು ಆಯ್ಕೆ ಮಾಡುವ ಸಲುವಾಗಿ ಸಿಎಂಆರ್‌ಎಲ್‌ ಟೆಂಡರ್ ಆಹ್ವಾನಿಸಿದೆ.

ಈ ಅಂತಾರಾಜ್ಯ ಮೆಟ್ರೋ ಯೋಜನೆಯಲ್ಲಿ ಬೆಂಗಳೂರಿನ ಬೊಮ್ಮಸಂದ್ರ ಹಾಗೂ ಹೊಸೂರು ನಡುವೆ 20.5 ಕಿ.ಮೀ. ಮೆಟ್ರೋ ಮಾರ್ಗ ಇರಲಿದೆ. ಇದರಲ್ಲಿ 11.7 ಕಿಮೀ ಕರ್ನಾಟಕದಲ್ಲಿ ಮತ್ತು 8.8 ಕಿ.ಮೀ ತಮಿಳುನಾಡಿನಲ್ಲಿರಲಿದೆ. ಹೊಸೂರಿನಿಂದ ಎಲೆಕ್ಟ್ರಾನಿಕ್ಸ್ ಸಿಟಿ ಬಳಿಯ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ ಸಾಮೂಹಿಕ ಕ್ಷಿಪ್ರ ಸಾರಿಗೆಯನ್ನು ಪರಿಚಯಿಸಲು ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಚಿಂತನೆ ನಡೆಸಿದ್ದು, ಸೆಪ್ಟೆಂಬರ್ 1ರಂದು ಟೆಂಡರ್ ತೆರೆಯುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ | Gruha Lakshmi Scheme : ಗೃಹಲಕ್ಷ್ಮಿ ಗೊಂದಲಕ್ಕೆ ಮುನಿದ ಲಕ್ಷ್ಮಿ; ಐಎಎಸ್ ಅಧಿಕಾರಿ ಎತ್ತಂಗಡಿ

ಕರ್ನಾಟಕದಲ್ಲಿ ಬರುವ ಮಾರ್ಗವನನ್ನು ಬಿಎಂಆರ್‌ಸಿಎಲ್‌ ಮತ್ತು ತಮಿಳುನಾಡಿನ ಮಾರ್ಗವನ್ನು ಸಿಎಂಆರ್‌ಎಲ್‌ ನಿರ್ಮಿಸಲಿದೆ. ಮಾರ್ಚ್‌ನಲ್ಲಿ, ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು, ಅಂತಾರಾಜ್ಯ ಮೆಟ್ರೋ ಪ್ರಯಾಣದ ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ವರದಿ ಸಿದ್ಧಪಡಿಸಲು ಅನುಮೋದನೆ ನೀಡಿತ್ತು.

ಈಗಾಗಲೇ ತಮಿಳುನಾಡಿನ ಸಂಸದ ಚೆಲ್ಲಕುಮಾರ್ ಅವರು, ಬೆಂಗಳೂರು ನಗರದಲ್ಲಿ ಸಂಚಾರ ಮಾಡುವ ಬಿಎಂಆರ್‌ಸಿಎಲ್‌ ಮೆಟ್ರೋ ರೈಲನ್ನು ಹೊಸೂರಿನವರೆಗೆ ವಿಸ್ತರಣೆ ಮಾಡುವಂತೆ ಸಂಸತ್‌ನಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ ನೀಲಿನಕ್ಷೆ ರಚಿಸಿ ಕಾರ್ಯಸಾಧ್ಯತೆಯ ಬಗ್ಗೆ ಅಧ್ಯಯನ ವರದಿ ಸಿದ್ಧಪಡಿಸಲು ಅನುಮತಿ ಕೇಳಿದ್ದರು. ಇದಕ್ಕೆ ಕನ್ನಡಪರ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.

ಬೆಂಗಳೂರು ಮೆಟ್ರೋದ ಹಳದಿ ಮಾರ್ಗವು ಬೆಂಗಳೂರಿನ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ನಿಲ್ದಾಣವನ್ನು ಸಂಪರ್ಕಿಸುತ್ತದೆ. ಇದು ಈ ವರ್ಷಾಂತ್ಯದ ವೇಳೆಗೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ. ಹೀಗಾಗಿ ಬೊಮ್ಮಸಂದ್ರದಿಂದ ಹೊಸೂರಿಗೆ ಅಂತಾರಾಜ್ಯ ಮೆಟ್ರೊ ರೈಲು ಸಂಪರ್ಕಿಸಲು ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ ಯೋಜನೆ ರೂಪಿಸಿದೆ. ಇದರಿಂದ ಎರಡು ರಾಜ್ಯಗಳ ಜನರ ಸಂಚಾರಕ್ಕೆ ಅನುಕೂಲವಾಗಲಿದೆ.

ಇದನ್ನೂ ಓದಿ | Akasa Air : ಆಕಾಸ ಏರ್‌ಲೈನ್ಸ್‌ನಿಂದ 20ನೇ ಪರಿಸರ ಸ್ನೇಹಿ ವಿಮಾನ; ಬೆಂಗಳೂರಿನಲ್ಲಿ‌ ಲ್ಯಾಂಡಿಂಗ್

ಕನ್ನಡಪರ ಸಂಘಟನೆಗಳ ವಿರೋಧ ಯಾಕೆ?

ಬೆಂಗಳೂರು ಸುತ್ತಮುತ್ತಲ ಜಿಲ್ಲೆಗಳಿಗೆ ಮೆಟ್ರೋ ರೈಲು ಸಂಪರ್ಕಿಸಿದರೆ ಇಲ್ಲಿನ ಜನರಿಗೆ ಅನುಕೂಲವಾಗಲಿದೆ. ಆದರೆ, ಹೊಸೂರಿಗೆ ಮೆಟ್ರೋ ವಿಸ್ತರಿಸಿದಲ್ಲಿ ತಮಿಳುನಾಡಿನ ಜನರಿಗೆ ಮಾತ್ರ ಅನುಕೂಲವಾಗುತ್ತದೆ. ಹೀಗಾದರೆ ಸರ್ಕಾರದ ವಿರುದ್ಧ ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಕೈಗೊಳ್ಳಲಾಗುವುದು. ಕೇಂದ್ರ ಸರ್ಕಾರ ಮೆಟ್ರೋ ವಿಸ್ತರಣೆಯ ಅಧ್ಯಯನಕ್ಕೆ ನೀಡಿರುವ ಅನುಮತಿ ವಾಪಸ್‌ ಪಡೆಯಬೇಕು ಎಂದು ಕನ್ನಡಪರ ಸಂಘಟನೆಗಳು ಈ ಹಿಂದೆ ಆಗ್ರಹಿಸಿದ್ದವು.

Exit mobile version