ಬೆಂಗಳೂರು: ಹಿಂದಿಯಲ್ಲೇ ಮಾತನಾಡುವಂತೆ ಒತ್ತಾಯಿಸಿದ ಮಹಿಳಾ ಪ್ರಯಾಣಿಕರಿಗೆ ಆಟೋ ಚಾಲಕರೊಬ್ಬರು ಖಡಕ್ ಉತ್ತರ ಕೊಟ್ಟ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ. ಇದು ನಮ್ಮ ನೆಲ ಇಲ್ಲಿ ಕನ್ನಡ (Kannada Language) ಮಾತನಾಡಬೇಕು. ನಾನ್ಯಾಕೆ ಹಿಂದಿ ಮಾತನಾಡಲಿ ಎಂದು ಆಟೋ ಚಾಲಕರು ಪ್ರಶ್ನಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ಈ ವಿಡಿಯೊದ ಕುರಿತು ವಾದ – ಪ್ರತಿವಾದಗಳು ಸೋಶಿಯಲ್ ಮೀಡಿಯಾಗಳಲ್ಲಿ ನಡೆದಿವೆ. ಆದರೆ, ಆಟೋ ಚಾಲಕನ ದಿಟ್ಟತನಕ್ಕೆ ಕನ್ನಡ ಪ್ರೇಮಿಗಳು ಶಹಬ್ಬಾಸ್ ಎಂದಿದ್ದಾರೆ.
ಕನ್ನಡಿಗರೊಬ್ಬರು ಮಾಡಿದ ಟ್ವೀಟ್ ಇಲ್ಲಿದೆ
ಘಟನೆ ಎಲ್ಲಿ ನಡೆಯಿತು ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಕೆಲವೊಂದು ರಾಷ್ಟ್ರಿಯ ಮಾಧ್ಯಮಗಳು ವ್ಯಕ್ತಿಯೊಬ್ಬರು ಮಾಡಿದ ಟ್ವೀಟ್ ಆಧರಿಸಿ ವರದಿ ಮಾಡಿವೆ. ಅದರ ಪ್ರಕಾರ ಮಹಿಳಾ ಪ್ರಯಾಣಿಕರಿಬ್ಬರು ಹಿಂದಿಯಲ್ಲೇ ಉತ್ತರ ಕೊಡುವಂತೆ ಆಟೋ ಚಾಲಕರಿಗೆ ಒತ್ತಾಯ ಮಾಡುತ್ತಾರೆ. ಇದರಿಂದ ಸಿಟ್ಟಿಗೆದ್ದ ಅವರು ಇಂಗ್ಲಿಷ್ನಲ್ಲಿ ಅವರಿಗೆ ಉತ್ತರ ಕೊಡುತ್ತಾರೆ. ನಮ್ಮ ನೆಲವಿದು. ನೀವು ಕನ್ನಡದಲ್ಲಿ ಮಾತನಾಡುವುದನ್ನು ಕಲಿಯಬೇಕು. ಅದನ್ನು ಬಿಟ್ಟು ನನ್ನ ಬಳಿ ಕನ್ನಡ ಮಾತನಾಡುವಂತೆ ಒತ್ತಾಯ ಮಾಡಬೇಡಿ. ನಾನು ಹಿಂದಿಯಲ್ಲಿ ಮಾತನಾಡುವುದು ಸಾಧ್ಯವಿಲ್ಲ ಎಂಬುದಾಗಿ ಅವರು ಹೇಳುತ್ತಾರೆ.
ಇದನ್ನೂ ಓದಿ : ಕನ್ನಡ ಭಾಷಾ ಸಮಗ್ರ ಅಭವೃದ್ಧಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ; ಅಧಿಸೂಚನೆ ಪ್ರಕಟ
ಕನ್ನಡ ಪ್ರೇಮಿಗಳು ಆಟೋ ಚಾಲಕನಿಗೆ ಸಲಾಮ್ ಎಂದಿದ್ದಾರೆ. ಇನ್ನೂ ಕೆಲವರು ಇಂಥವರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರು ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಆಟೋ ಚಾಲಕನ ಮಾತು ಕೇಳಿ ಕಿವಿ ಇಂಪಾಯಿತು ಎಂದು ಬರೆದಿದ್ದಾರೆ. ಆದರೆ, ಹಿಂದಿ ಭಾಷಿಕರನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಭಾರತ. ಇಲ್ಲಿ ಎಲ್ಲ ಭಾಷೆಯನ್ನೂ ಮಾತನಾಡಬಹುದು ಎಂದು ಬರೆದುಕೊಂಡಿದ್ದಾರೆ.