ಬೆಂಗಳೂರು: ನಗರದ ಚಾಮರಾಜಪೇಟೆ ಈದ್ಗಾ ಮೈದಾನವನ್ನು ತಮ್ಮ ಸ್ವತ್ತೆಂದು ಇದುವರೆಗೆ ಯಾರಿಗೂ ಖಾತೆ ಮಾಡಿಕೊಟ್ಟಿಲ್ಲ. ಮೈದಾನದ ಖಾತೆ ಮಾಡಿಕೊಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದು ಸತ್ಯವಲ್ಲ. ವಕ್ಫ್ ಬೋರ್ಡ್ ಕೆಲ ದಾಖಲೆಗಳನ್ನು ನೀಡಿದೆ. 1954ರ ಗೆಜೆಟ್ ನೋಟಿಫಿಕೇಷನ್ ಕೊಟ್ಟು ಇದರ ಆಧಾರದ ಮೇಲೆ ಖಾತೆ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದೆ. ಮಾಲೀಕತ್ವ ದೃಢಪಡಿಸಲು ಮತ್ತಷ್ಟು ದಾಖಲೆಗಳನ್ನು ವಕ್ಫ್ ಬೋರ್ಡ್ ನೀಡಬೇಕಿದೆ ಎಂದು ಬಿಬಿಎಂಪಿ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.
ನಗರದಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನ ಕುರಿತು ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಈಗಲೂ ಮೈದಾನ ಬಿಬಿಎಂಪಿ ವ್ಯಾಪ್ತಿಯಲ್ಲಿದ್ದು, ಮಾಲೀಕತ್ವ ವಿಚಾರ ಕುರಿತು ನಿಯಮದ ಪ್ರಕಾರ 45 ದಿನಗಳಲ್ಲಿ ದಾಖಲೆ ಸಲ್ಲಿಸಬೇಕು. ಈ ಕುರಿತು ಮತ್ತೊಮ್ಮೆ ಹೆಚ್ಚುವರಿ ದಾಖಲೆಗಳನ್ನು ಸಲ್ಲಿಸಿ ಎಂದು ನೋಟಿಸ್ ನೀಡಲಾಗುವುದು ಎಂದರು.
1935ರಿಂದ ಮೈದಾನದ ಕುರಿತು ಇರುವ ದಾಖಲೆಗಳನ್ನು ಬೆಂಗಳೂರು ದಕ್ಷಿಣ ಬಿಜೆಪಿ ಅಧ್ಯಕ್ಷ ಎನ್.ಆರ್. ರಮೇಶ್ ಸಲ್ಲಿಸಿದ್ದಾರೆ. 1974ರಿಂದ ಮೈದಾನದಲ್ಲಿ ಜರುಗಿದ ಕಾರ್ಯಕ್ರಮಗಳ ಬಗ್ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು. ಈ ವಿಷಯದಲ್ಲಿ ಸ್ಥಳೀಯ ಶಾಸಕರು ಬಿಬಿಎಂಪಿ ಅಧಿಕಾರಿಗಳ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ನಿಯಮದಂತೆ ಮೈದಾನ ಯಾರಿಗೆ ಸೇರಿದ್ದು ಎಂಬುವುದನ್ನು ನಿರ್ಧರಿಸಲಾಗುತ್ತದೆ. ವಕ್ಫ್‌ಬೋರ್ಡ್ ಸಮರ್ಪಕ ದಾಖಲೆ ಸಲ್ಲಿಸದಿದ್ದರೆ ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಹಾಯಕ ಕಂದಾಯ ಅಧಿಕಾರಿ ನರಸಿಂಹನಾಯ್ಕ್ ಇದ್ದರು.
ಇದನ್ನೂ ಓದಿ | ಊರ ಮಾನ ಹೋದಮೇಲೆ ಸಮನ್ವಯಕ್ಕೆ ಮುಂದಾದ ಬಿಬಿಎಂಪಿ