ಕೊಪ್ಪಳ: ಸಾಮಾನ್ಯ ಜನರಿಗೂ ವಿಮಾನಯಾನದ ಅನುಭವ ಆಗಬೇಕು, ಸ್ಥಳೀಯ ಅಭಿವೃದ್ಧಿ ಆಗಬೇಕು ಎಂಬ ಮಹದೋದ್ದೇಶದಿಂದ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಉಡಾನ್ ಯೋಜನೆಯು ಘೋಷಣೆಗಷ್ಟೇ ಸೀಮಿತವಾಗಿದೆಯೇ ವಿನಃ, ಸಾಮಾನ್ಯ ಜನರ ಹಾರಾಟದ ಕನಸು ಮಾತ್ರ ನನಸಾಗಿಲ್ಲ. ಇದು ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕ ವಿಮಾನಯಾನ ಸಂಪರ್ಕ ಕಲ್ಪಿಸುವ ಪ್ರಮುಖ ಉದ್ದೇಶದಿಂದ ಜಾರಿಯಾದ ಈ ಉಡಾನ್ ಯೋಜನೆಯನ್ನು 2016-17ನೇ ಸಾಲಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೊಪ್ಪಳ ಜಿಲ್ಲೆಗೂ ಸಹ ಘೋಷಣೆ ಮಾಡಿದ್ದರು.
ವರ್ಷ ೫ ಕಳೆಯಿತು, ಸಿಕ್ಕಿಲ್ಲ ಹಾರಾಡೋ ಹರ್ಷ
ಯೋಜನೆ ಘೋಷಣೆಯಾಗುತ್ತಿದ್ದಂತೆ ಸಹಜವಾಗಿಯೇ ಜಿಲ್ಲೆಯ ಸಾಮಾನ್ಯ ಜನರು ವಿಮಾನಯಾನದ ಕನಸು ಕಂಡಿದ್ದರು. ಜೀವನದಲ್ಲಿ ಒಮ್ಮೆಯಾದರೂ ವಿಮಾನ ಏರಬಹುದು ಎಂಬ ಆಸೆಯನ್ನು ಇಟ್ಟುಕೊಂಡಿದ್ದರು. ಆದರೆ, ದಿನ ಕಳೆಯಿತು, ತಿಂಗಳುಗಳು ಕಳೆಯಿತು, ಈಗ ವರ್ಷಗಳೇ ಕಳೆಯುತ್ತಿವೆ. ಆದರೆ, ಉಡಾನ್ ಯೋಜನೆ ಅನುಷ್ಠಾನಗೊಂಡಿಲ್ಲ. ೫ ವರ್ಷಗಳಿಂದ ಕಂಡಿದ್ದ ವಿಮಾನ ಹಾರಾಟದ ಕನಸು ಸಹ ನನಸಾಗಲಿಲ್ಲ.
ಹಗ್ಗ ಜಗ್ಗಾಟವೇ ಆಯ್ತು
ಆರಂಭದಲ್ಲಿ ಕೊಪ್ಪಳ ತಾಲೂಕಿನ ಬಸಾಪುರ ಬಳಿ ಇರುವ ಖಾಸಗಿ ಎಂಎಸ್‍ಪಿಎಲ್ ಏರ್ಪೋರ್ಟ್ ಬಳಸಿಕೊಂಡು ಉಡಾನ್ ಯೋಜನೆಯನ್ನು ಚಾಲನೆ ಮಾಡಬೇಕು ಎಂದು ಯೋಚಿಸಲಾಗಿತ್ತು. ಆದರೆ, ಎಂಎಸ್‍ಪಿಎಲ್‍ನವರ ಷರತ್ತುಗಳಿಗೆ ಸರ್ಕಾರ ಒಪ್ಪಲಿಲ್ಲ. ಇದರಿಂದಾಗಿ ಖಾಸಗಿ ಏರ್ಪೋರ್ಟ್ ಬಳಸಿಕೊಂಡು ಉಡಾನ್ ಯೋಜನೆಯನ್ನು ಆರಂಭಿಸುವ ಪ್ರಯತ್ನ ಫಲ ನೀಡಲಿಲ್ಲ. ಈ ಮಾತುಕತೆ ನಡೆಸಲೇ ೪ ವರ್ಷ ತೆಗೆದುಕೊಳ್ಳಲಾಗಿತ್ತು. ಕೊಪ್ಪಳ ಭಾಗದಲ್ಲಿ ಸಾಕಷ್ಟು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳಿವೆ. ಗಂಗಾವತಿ ಭಾಗದಲ್ಲಿ ವ್ಯಾಪಾರ ವಾಣಿಜ್ಯವಿದೆ. ಹೀಗಾಗಿ ಈ ಭಾಗದಲ್ಲಿ ಆದಷ್ಟು ಬೇಗನೆ ಉಡಾನ್ ಯೋಜನೆಯನ್ನು ಜಾರಿ ಮಾಡಿದರೆ ಜಿಲ್ಲೆಯ ಅಭಿವೃದ್ಧಿಯೂ ಆಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಅನೇಕ ಮುಖಂಡರು ಒಂದು ಫೋರಂ ರಚಿಸಿ ಒತ್ತಡ ಹಾಕಲಾಯಿತು. ಇದರಿಂದಾಗಿ ಜನಪ್ರತಿನಿಧಿಗಳು ಸರ್ಕಾರಕ್ಕೆ ಮನವಿ ಮಾಡಿದರು. ಬಳಿಕ ಇಲ್ಲಿ ಹೊಸ ಏರ್ಪೋರ್ಟ್ ನಿರ್ಮಾಣ ಮಾಡಲು ಸಮ್ಮಿತಿ ನೀಡಲಾಗಿತ್ತು. ಈಗಾಗಲೇ ಕೊಪ್ಪಳ ತಾಲೂಕಿನ ಎರಡು ಕಡೆ ಭೂಮಿಯನ್ನು ಸಹ ಗುರುತಿಸಲಾಗಿದೆ. ಎರಡು ಬಾರಿ ವಿಮಾನಯಾನ ತಾಂತ್ರಿಕ ತಂಡಗಳು ಬಂದು ಪರಿಶೀಲನೆ ನಡೆಸಿ ಹೋಗಿವೆ. ಆದರೆ, ಯೋಜನೆ ಆರಂಭಿಸಲು ಇನ್ನೆಷ್ಟು ವರ್ಷ ಬೇಕು ಎಂದು ಜಿಲ್ಲೆಯ ಸಾರ್ವಜನಿಕರು ಪ್ರಶ್ನಿಸುವಂತಾಗಿದೆ ಎಂದು ಸ್ಥಳೀಯ ಮುಖಂಡ ಮೌನೇಶ್ ವಡ್ಡಟ್ಟಿ ಹೇಳುತ್ತಾರೆ.
ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆ
ಯಾವುದೇ ಒಂದು ಯೋಜನೆ ಶೀಘ್ರ ಅನುಷ್ಠಾನವಾಗಬೇಕಾದರೆ ಅಲ್ಲಿನ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಬಹಳ ಮುಖ್ಯವಾಗುತ್ತದೆ. ಜಿಲ್ಲೆಗೆ ಘೋಷಣೆಯಾಗಿರುವ ಯೋಜನೆಯೊಂದು ಐದು ವರ್ಷ ಕಳೆದರೂ ಅನುಷ್ಠಾನವಾಗಿಲ್ಲ ಎಂದರೆ ಕೊಪ್ಪಳ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಹೇಗಿದೆ ಎಂಬುದನ್ನು ಮತ್ತೆ ವಿವರಿಸಿ ಹೇಳಬೇಕಿಲ್ಲ ಎಂದು ಸ್ಥಳೀಯ ಮುಖಂಡ ಪರಮೇಶರಡ್ಡಿ ಹ್ಯಾಟಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ| ಪುರಿ ಜಗನ್ನಾಥ ದೇಗುಲದ ಗೋಪುರದ ಮೇಲೆ ಹಕ್ಕಿಗಳು-ವಿಮಾನ ಹಾರಾಡುವುದಿಲ್ಲವೇಕೆ?; ಇಲ್ಲಿದೆ ಕಾರಣ