ಯಲ್ಲಾಪುರ: ಯಾವುದನ್ನೋ ಅನುಕರಣೆ ಮಾಡಲು ಹೋಗಿ, ನಮ್ಮ ಶ್ರೇಷ್ಠತೆಯನ್ನು ಕುಬ್ಜಗೊಳಿಸುತ್ತಿದ್ದೇವೆ. ಮನೆಯು ನಮ್ಮ ಧರ್ಮ ಕೇಂದ್ರವಾಗಿದೆ. ಹೀಗಾಗಿ ತಾಯಂದಿರು ತಮ್ಮ ಕರ್ತವ್ಯಗಳನ್ನು ಅರಿಯಬೇಕಿದೆ. ನಮ್ಮ ಧರ್ಮ ಉಳಿದಾಗ ಮಾತ್ರ ನಮ್ಮ ದೇಶ ಉಳಿಯಲು ಸಾಧ್ಯ ಎಂದು ಶ್ರೀರಾಮ ವಿದ್ಯಾ ಕೇಂದ್ರ ಬಂಟ್ವಾಳದ ಮುಖ್ಯಸ್ಥರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.
ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ (Vishwadarshana Sambhrama) ಆವಾರದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯರಿಗೆ ನಾಗರಿಕತೆ, ವಿಜ್ಞಾನದ ಕೊರತೆಯಿದೆ ಎಂದು ಇಂಗ್ಲಿಷರು ನಮ್ಮನ್ನು ನಂಬಿಸಿ ಗುಲಾಮಗಿರಿಗೆ ತಳ್ಳಿದರು. ಅಂದಿನಿಂದ ಇಲ್ಲಿಯವರೆಗೆ ನಾವು ಇಂಗ್ಲಿಷ್ ಕಣ್ಣಿನಲ್ಲಿ ಸಂಗತಿಗಳನ್ನು ಗಮನಿಸಲಾರಂಭಿಸಿದ್ದೇವೆ ಎಂದು ವಿಷಾದಿಸಿದರು.
ನಮ್ಮ ನೆಲ, ಜಲವನ್ನು ನಾವು ತಾಯಿಯೆಂದು ಗುರುತಿಸಿದ್ದೇವೆ. ಅಂತಹ ಭಾವ ನಮ್ಮಲ್ಲಿ ಮೂಡಿದಾಗ ಮಾತ್ರ ನಾವು ಅದರ ರಕ್ಷಣೆಯನ್ನು ಮನಪೂರ್ವಕವಾಗಿ ಮಾಡಲು ಸಾಧ್ಯ. ಇಡೀ ವಿಶ್ವವೇ ಗುರುತಿಸುವಂತಹ ಮಹಾನ್ ಸಾಧಕರಿಗೆ, ವಿಜ್ಞಾನಿಗಳಿಗೆ ನಮ್ಮ ಭಾರತ ಮಾತೆ ಜನ್ಮ ನೀಡಿದ್ದಾಳೆ. ನಾವು ನಮ್ಮ ಶ್ರೇಷ್ಠತೆಯನ್ನು ಅರಿತುಕೊಳ್ಳಬೇಕು. ನಮ್ಮ ಪೂರ್ವಜರು ಮಾಡಿರುವ ಅನ್ವೇಷಣೆಗಳು ಇಂದು ವಿಜ್ಞಾನದ ಪದಗಳಾಗಿ ಮಾರ್ಪಾಡಾಗುತ್ತಿದೆ ಅಷ್ಟೆ ಎಂದು ಅವರು ತಿಳಿಸಿದರು.
ಇದನ್ನೂ ಓದಿ | ವಿಸ್ತಾರ ಅಂಕಣ: ಎನ್ಇಪಿ ವಿರೋಧಿಸುವ ರಾಜ್ಯ ಸರಕಾರ ಯಾರಿಗೆ ಅನ್ಯಾಯ ಮಾಡುತ್ತಿದೆ ಗೊತ್ತೇ?
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವ ದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ʼʼವಿಶ್ವದರ್ಶನ ಸಮೂಹಕ್ಕೆ ಪ್ರತಿವರ್ಷ ಹೊಸತನವನ್ನು ಸೇರ್ಪಡೆಗೊಳಿಸಲಾಗುತ್ತದೆ. ಈ ಬಾರಿ ಬಿಸಿಎ ಮತ್ತು ಪತ್ರಿಕೋದ್ಯಮದ ತರಗತಿಗಳನ್ನು ಆರಂಭಿಸಲಾಗಿದೆ. 600 ವಿದ್ಯಾರ್ಥಿಗಳಿಗೆ ಆಶ್ರಯ ನೀಡುವ ಹಾಸ್ಟೆಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸಂಸ್ಕಾರಯುತ ಶಿಕ್ಷಣವನ್ನು ನೀಡಲು ನಮ್ಮಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆʼʼ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಡಾ. ಎಸ್. ಆರ್. ಲೀಲಾ ಮಾತನಾಡಿ, ಭಾಷೆ ಎನ್ನುವುದು ಜ್ಯೋತಿಯಿದ್ದಂತೆ. ಹೀಗಾಗಿ ಎಲ್ಲಾ ಭಾಷೆಗಳ ಕುರಿತು ಗೌರವವನ್ನು ನಾವೆಲ್ಲ ಹೊಂದಬೇಕು. ಆ ಮೂಲಕ ಪ್ರಾಚೀನ ಭಾಷೆಗಳ ಮಹತ್ವವನ್ನು ಅರಿತುಕೊಳ್ಳಬೇಕು. ಭಾಷೆಗಳ ಕುರಿತು ವೈಮನಸ್ಸು ಸಲ್ಲದು. ಸಂಸ್ಕೃತ ಎನ್ನುವುದು ಒಂದು ಭಾಷೆಯಲ್ಲ, ಅದೊಂದು ಯೋಜನೆಯಿದ್ದಂತೆ. ಅದನ್ನು ಅರಿತಷ್ಟೂ ಕಡಿಮೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಕೃತ ಪ್ರಾಧ್ಯಾಪಕರು, ವಿಧಾನ ಪರಿಷತ್ ಮಾಜಿ ಸದಸ್ಯೆ, ಗ್ರಂಥಕರ್ತರು ಹಾಗೂ ಅಂಕಣಕಾರರಾದ ಡಾ. ಎಸ್. ಆರ್. ಲೀಲಾ, ಪ್ರಸಿದ್ಧ ನಾಟಿ ವೈದ್ಯ, ಪಾರ್ಶ್ವವಾಯು ಚಿಕಿತ್ಸಕ, ವೈದ್ಯ ವೃತ್ತಿಯೊಂದಿಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿರುವ ಹನುಮಂತ ಗೌಡ ಬೆಳ್ಳಂಬರ ಅವರನ್ನು ವಿಶ್ವದರ್ಶನ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಂತೆಯೇ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ವೇದಿಕೆಯಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಶಿಕ್ಷಣ ಪ್ರಸಾರಕ ಸಮಿತಿ ಉಪಾಧ್ಯಕ್ಷ ಡಾ. ಶಶಿಭೂಷಣ ಹೆಗಡೆ, ಕೆನರಾ ಹೆಲ್ತ್ ಕೇರ್ ಸೆಂಟರ್ ಅಧ್ಯಕ್ಷ ಡಾ.ಜಿ.ಜಿ. ಹೆಗಡೆ ಕುಮಟಾ ಹಾಗೂ ಎಂ.ಪಿ.ಇ. ಸಮೂಹ ಶಿಕ್ಷಣ ಸಂಸ್ಥೆ ಹೊನ್ನಾವರದ ಅಧ್ಯಕ್ಷ ಕೃಷ್ಣಮೂರ್ತಿ ಭಟ್, ಶಿವಾನಿ, ಪಂಚಾಯತ್ ರಾಜ್ ವಿಕೇಂದ್ರೀಕರಣ ಸಮಿತಿ ಉಪಾಧ್ಯಕ್ಷ ಪ್ರಮೋದ್ ಹೆಗಡೆ, ಪ್ರಶಾಂತ ನಾಯಕ ಉಪಸ್ಥಿತರಿದ್ದರು.
ಇದನ್ನೂ ಓದಿ | Vijay Diwas 2024 : 1971ರ ಯುದ್ಧದಲ್ಲಿ ಪಾಕಿಸ್ತಾನದ ನೌಕೆಯೂ ಮುಳುಗಿತು, ಅದರ ಸೊಕ್ಕೂ ಅಡಗಿತು!
ಕನ್ನಡ ಮಾಧ್ಯಮದ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ್ ವರದಿ ವಾಚಿಸಿದರು. ಪಿಯುಸಿ ಪ್ರಾಂಶುಪಾಲರಾದ ಡಿ.ಕೆ. ಗಾಂವ್ಕರ್ ನಿರೂಪಿಸಿದರು. ಸಂಸ್ಥೆಯ ಕಾರ್ಯದರ್ಶಿ ನರಸಿಂಹ ಕೋಣೆಮನೆ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೆಳೆಯಿತು.