Site icon Vistara News

The Kerala Story: ಸತ್ಯ ಘಟನೆ ಹೇಳುವಾಗ ಬ್ಯಾನ್‌ ಮಾಡುವುದು ಸರಿಯಲ್ಲ: ತಾರಾ ಅನುರಾಧ

#image_title

ಉಡುಪಿ: ʻದಿ ಕೇರಳ ಸ್ಟೋರಿʼ ನೈಜ ಘಟನೆ ಆಧಾರಿತ ಎಂದು ಚಿತ್ರ (The Kerala Story) ತಂಡ ಘೋಷಿಸಿದ ನಂತರ ದೊಡ್ಡ ವಿವಾದವೇ ಆಗಿದೆ. ಈಗಾಗಲೇ ಸೆನ್ಸಾರ್ ಮಂಡಳಿ ಚಿತ್ರದಲ್ಲಿರುವ 10 ದೃಶ್ಯಗಳಿಗೆ ಕತ್ತರಿ ಹಾಕಿ, ಎ ಸರ್ಟಿಫಿಕೇಟ್ ನೀಡಿದೆ. ಸಿನಿಮಾ ಕುರಿತು ಪರ- ವಿರೋಧ ಚರ್ಚೆಗಳು ಶುರುವಾಗಿದ್ದು, ಸತ್ಯ ಘಟನೆಗಳನ್ನು ಹೇಳುವಾಗ ಬ್ಯಾನ್‌ ಮಾಡುವುದು ಸರಿಯಲ್ಲ ಎಂದು ಬಿಜೆಪಿ ನಾಯಕಿ ಕಂ ನಟಿ ತಾರಾ ಅನುರಾಧ ಪ್ರತಿಕ್ರಿಯಿಸಿದ್ದಾರೆ.

ಲವ್​ ಜಿಹಾದ್​, ಮತಾಂತರಗಳು ಹೇಗೆ ನಡೆಯುತ್ತಿವೆ ಎಂಬುದನ್ನು ಚಿತ್ರಕಥೆ ಒಳಗೊಂಡಿದೆ. ವಾಸ್ತವದಲ್ಲಿ ಇದು ಸತ್ಯ ಕೂಡ ಹೌದು ಅಲ್ವಾ ಎಂದು ಮರು ಪ್ರಶ್ನಿಸಿದ್ದಾರೆ. ಈ ಹಿಂದೆ ಕಾಶ್ಮೀರಿ ಫೈಲ್ಸ್‌ ಬಂದಾಗಲೂ ಇದೇ ರೀತಿಯ ಚರ್ಚೆಗಳು ನಡೆದಿದ್ದವು. ಆದರೆ, ಆ ಚಿತ್ರದಲ್ಲಿ ಎಲ್ಲೂ ವೈಭವೀಕರಿಸಿಲ್ಲ, ಬದಲಿಗೆ ಅಲ್ಲಿ ಏನು ನಡೆದಿದೆ ಎಂಬುದನ್ನು ಅಲ್ಲಿನ ನಿರ್ದೇಶಕರು ಅನುಭವ ಪಡೆದು ಸಿನಿಮಾವನ್ನು ಮಾಡಿದ್ದರು.

ಸತ್ಯ ಘಟನೆಯು ಚಿತ್ರವಾಗಿ ರೂಪುಗೊಂಡಾಗ ಅದನ್ನು ಬ್ಯಾನ್ ಮಾಡಬೇಕು ಎಂಬುದು ಸರಿಯಲ್ಲ. ಜನರಿಗೆ ಇತಿಹಾಸ ತಿಳಿಯಬೇಕು, ಚಿತ್ರ ಬಿಡುಗಡೆಗೂ ಮುನ್ನ ಸೆನ್ಸಾರ್ ನಡೆಯುತ್ತದೆ. ಆಘಾತಕಾರಿ, ಪ್ರಚೋದನಕಾರಿ ವಿಚಾರಗಳಿದ್ದರೆ ಪ್ರದರ್ಶನ ಆಗುವುದಿಲ್ಲ. ಸೆನ್ಸಾರ್ ಆಗಿ ಬಂದ ಬಳಿಕ ಎಲ್ಲರೂ ನೋಡುವ ಚಿತ್ರವನ್ನು ಕೇರಳ ಸಿಎಂ ಬ್ಯಾನ್‌ ಮಾಡುವುದಾಗಿ ಹೇಳಿರುವುದು, ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದರು.

ಚಿಕ್ಕ ಹುಡುಗಿಯರನ್ನು ಮದುವೆ ಆಗ್ತಿದ್ದ ದುಬೈ ಶೇಕ್‌

ನಾನು ಈ ಹಿಂದೆಯೇ ಮುನ್ನುಡಿ ಎಂಬ ಚಿತ್ರದಲ್ಲಿ ನಟಿಸಿದ್ದೆ. ಮಂಗಳೂರು ಸಮೀಪದ ಸುರತ್ಕಲ್‌ನಲ್ಲಿ ಚಿತ್ರೀಕರಣ ನಡೆದಿತ್ತು. ನೈಜ ಘಟನೆಯನ್ನು ಆಧರಿಸಿ ಮುನ್ನುಡಿ ಚಿತ್ರವನ್ನು ಅಲ್ಲಿನ ನಿರ್ದೇಶಕರು ತಯಾರಾಗಿತ್ತು. ದುಬೈಯಿಂದ ಬರುವ ಶೇಕ್ ಸಣ್ಣ ಹುಡುಗಿಯೊಬ್ಬಳನ್ನು ಮದುವೆಯಾಗಿ ಆಕೆಯ ಜತೆ ಸಂಸಾರ ಮಾಡುತ್ತಾನೆ. ಮೂರು ತಿಂಗಳ ಸಂಸಾರ ಮಾಡಿ ಬಳಿಕ ಮೂರು ಬಾರಿ ತಲಾಕ್ ಹೇಳಿ ಹೋಗುತ್ತಾನೆ. ಈ ಹುಡುಗಿಯ ಸಂಸಾರ ಮತ್ತು ಭವಿಷ್ಯ ಏನಾಗಬೇಕು ಎಂಬುದು ದೊಡ್ಡ ಪ್ರಶ್ನೆ? ಇಂತಹ ದೌರ್ಜನ್ಯಗಳು ಆ ಭಾಗದಲ್ಲಿ ನಡೆಯುತ್ತಿತ್ತು, ದೌರ್ಜನ್ಯದ ಸತ್ಯ ಘಟನೆಗಳ ಚಿತ್ರವೇ ಮುನ್ನುಡಿ ಆಗಿತ್ತು.

ಅದೇ ರೀತಿ ದೌರ್ಜನ್ಯಗಳು ಅಲ್ಲಿ ನಡೆಯುತ್ತಿದ್ದು, ಅದನ್ನು ಚಿತ್ರದ ಮೂಲಕ ಹೇಳಲು ಹೊರಟಾಗ, ಬ್ಯಾನ್‌ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಸಿನಿಮಾದಲ್ಲಿ ರಾಜ್ಯ ಮತ್ತು ದೆಹಲಿಯಲ್ಲಿ ಎರಡು ಸೆನ್ಸಾರ್ ಬೋರ್ಡ್‌ಗಳು ಇವೆ. ರಾಜ್ಯದಲ್ಲಿ ಲೋಪ ದೋಷ ಆದರೆ ದೆಹಲಿಯ ಸೆನ್ಸಾರ್ ಬೋರ್ಡ್ ನೋಡಿಕೊಳ್ಳುತ್ತದೆ. ಪ್ರತಿಯೊಬ್ಬ ರಾಜ್ಯದ ಪ್ರತಿನಿಧಿ ಕೇಂದ್ರದ ಸೆನ್ಸಾರ್ ಬೋರ್ಡ್‌ನಲ್ಲಿ ಇರುತ್ತಾರೆ. ಸೆನ್ಸಾರ್ ಮೀರಿ ಚಿತ್ರ ಸಿದ್ಧವಾಗಿದೆ ಎಂದರೆ ಬ್ಯಾನ್ ಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂದು ತಾರಾ ಅನುರಾಧ ತಿಳಿಸಿದರು.

ಇದನ್ನೂ ಓದಿ: The Kerala Story: ದಿ ಕೇರಳ ಸ್ಟೋರಿಗೆ ಎ ಸರ್ಟಿಫಿಕೇಟ್​; 10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ

ದಿ ಕೇರಳ ಸ್ಟೋರಿ (The Kerala Story) ಎಂಬ ಹಿಂದಿ ಸಿನಿಮಾವು, ಕೇರಳದಿಂದ ಉದ್ಯೋಗ ಅರಸಿ ಹೋದ ಹುಡುಗಿಯರನ್ನು ಇಸ್ಲಾಮ್​ಗೆ ಮತಾಂತರ ಮಾಡಿ, ಅವರನ್ನು ಐಸಿಸ್​ ಭಯೋತ್ಪಾದನಾ ಶಿಬಿರಗಳಿಗೆ ಕಳಿಸುವ ಕಥೆಯನ್ನು ಒಳಗೊಂಡ ಚಿತ್ರವಾಗಿದೆ. ದಿ ಕೇರಳ ಸ್ಟೋರಿ (The Kerala Story) ಸಿನಿಮಾ ಇದೇ ಮೇ 5ರಂದು ಬಿಡುಗಡೆಯಾಗಲಿದೆ.

Exit mobile version