ಶಶಿಧರ್ ಮೇಟಿ, ಬಳ್ಳಾರಿ
ದೇಶದಲ್ಲಿ ಹಿಜಾಬ್ ಸಂಘರ್ಷ, ಪ್ರವಾದಿ ಬಗ್ಗೆ ಅವಹೇಳನಕಾರಿ ಹೇಳಿಕೆ, ಉದಯಪುರದಲ್ಲಿ ಟೈಲರ್ ಕನ್ಹಯ್ಯ ಲಾಲ್ ಹತ್ಯೆ, ಕಾಶ್ಮೀರ ಪಂಡಿತರ ಹತ್ಯೆ ಹೀಗೆ ಸಾಲು ಸಾಲು ಧರ್ಮ ಸಂಘರ್ಷಗಳ ನಡುವೆಯೂ ಗಣಿನಾಡಿನ ಒಂದು ಪುಟ್ಡಹಳ್ಳಿ ಇಡೀ ದೇಶಕ್ಕೆ ಭಾವೈಕ್ಯತೆ ಮತ್ತು ಸೌಹಾರ್ದತೆಯ ಪಾಠ ಹೇಳಿಕೊಡುತ್ತಿದೆ. ಈ ಗ್ರಾಮದಲ್ಲಿ ಧರ್ಮ ಸೌಹಾರ್ದತೆಯ ಶ್ರೀಮಂತಿಕೆ ಮನೆ ಮಾಡಿದೆ. ಗ್ರಾಮದಲ್ಲಿನ ಹಿಂದು ಮತ್ತು ಮುಸ್ಲಿಮರ ಧಾರ್ಮಿಕ ಭಾವನೆಗಳು ಸಂಗಮವಾಗಿ ಮಸೀದಿ ನಿರ್ಮಾಣವಾಗಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಎರಕಲ್ ಗ್ರಾಮವು ಭಾವೈಕ್ಯತೆಯ ಸಂಗಮಕ್ಕೆ ಸಾಕ್ಷಿಯಾಗಿದೆ. ಗ್ರಾಮದಲ್ಲಿರುವ 500 ಮನೆಗಳ ಪೈಕಿ ಒಂದೇ ಮುಸ್ಲಿಂ ಮನೆ ಇದೆ. ಗ್ರಾಮದಲ್ಲಿರುವ ಮಾಬು ಹುಸೇನ್ ಅವರ ಧಾರ್ಮಿಕ ಭಾವನೆಗೆ ಬೆಲೆ ಕೊಟ್ಟು, ಹಿಂದುಗಳೆಲ್ಲ ಸೇರಿ 12 ಲಕ್ಷ ರೂ.ಗಳ ವೆಚ್ಚದಲ್ಲಿ ಮಸೀದಿ ನಿರ್ಮಾಣ ಮಾಡಿದ್ದಾರೆ! ಆದರೆ, ಗ್ರಾಮದಲ್ಲಿ ಹಿಂದು ದೇವಾಲಯ ಮತ್ತು ಮುಸ್ಲಿಂ ಮಸೀದಿ ಎನ್ನುವ ಭಿನ್ನ ಭಾವನೆ ಇಲ್ಲ ಎಂಬುವುದೇ ವಿಶೇಷ. ಆದರೆ ಎರಕಲ್ ಗ್ರಾಮದವರಿಗೆ ಇದಾವುದು ವಿಶೇಷ ಅನಿಸಲ್ಲ, ಯಾಕೆಂದರೆ ಎಲ್ಲರೂ ಒಂದೇ ಎನ್ನುವ ಅವರ ಭಾವನೆಯೇ ಕಾರಣ.
ಜನರ ಮಧ್ಯೆ ಧರ್ಮದ ತಡೆಗೋಡೆಯಿಲ್ಲ
ಗ್ರಾಮದ ಯಾವೊಬ್ಬರೂ ತಮ್ಮ ಭಾವನೆಗಳಿಗೆ ಧರ್ಮದ ತಡೆಗೋಡೆ ಕಟ್ಟಿಕೊಂಡಿಲ್ಲ. ಮಾಬು ಅವರ ಮನೆಯವರು ಶನಿವಾರ ಬಂದರೆ ಆಂಜನೇಯ ದೇವಸ್ಥಾನ, ಮಂಗಳವಾರ ಬಂದರೆ ಮಾರಮ್ಮ ದೇವಸ್ಥಾನಕ್ಕೆ ಹೋದರೆ, ಮುಸ್ಲಿಂ ಹಬ್ಬಗಳಿಗೆ ಇಲ್ಲಿನ ಹಿಂದುಗಳು ಮಸೀದಿಗೆ ಹೋಗುತ್ತಾರೆ. ಇಂತಹ ಸಂಸ್ಕಾರ ಮತ್ತು ಸಂಸ್ಕೃತಿಯಿಂದಲೇ ಎರಕಲ್ ಗ್ರಾಮಸ್ಥರು ಭಾವನೆಗಳಲ್ಲಿ ಶ್ರೀಮಂತರಾಗಿದ್ದಾರೆ.
ಮಸೀದಿ ನಿರ್ಮಾಣದಲ್ಲಿ ಧರ್ಮಗಳ ಸಂಗಮ
ಕೇವಲ ಹಿಂದು ಮತ್ತು ಮುಸ್ಲಿಂ ಸೇರಿ ಮಸೀದಿ ಕಟ್ಟಿಲ್ಲ. ಮಸೀದಿ ಶೈಲಿಯಲ್ಲೂ ಎರಡು ಧರ್ಮವನ್ನು ಕೂಡಿಸುವ ಕೆಲಸ ಮಾಡಿದ್ದಾರೆ. ಮಸೀದಿ ಎರಡು ಬದಿ, ಒಳಗಡೆ ಮತ್ತು ಮೇಲೆ ಮುಸ್ಲಿಂ ಮಸೀದಿಯ ಮಾದರಿ ಇದ್ದರೆ, ಮಸೀದಿಯ ಮುಂದೆ ಹಿಂದುಗಳ ಪೂರ್ಣಕುಂಭದ ಮಾದರಿಯ 21 ಪೂರ್ಣಕುಂಭಗಳು, ಮಸೀದಿಯ ಮೇಲೆ ಹಿಂದು ದೇವಾಲಯದ ಗೋಪುರಗಳಿಗೆ ಅಳವಡಿಸುವ 8 ಕಲಶಗಳನ್ನು ಅಳವಡಿಸಲಾಗಿದೆ. ಇದು ಕೇವಲ ಭಾವನಗಳ ಸಂಗಮವಲ್ಲ, ಮಸೀದಿ ಮತ್ತು ದೇವಸ್ಥಾನದ ಕಲ್ಪನೆಯ ಸಂಗಮ ಇಲ್ಲಿನ ವಿಶೇಷ.
ಕೆಲ ಜನರ ಸ್ವಾರ್ಥ ದುರುದ್ದೇಶಗಳಿಂದ ಹಿಂದು – ಮುಸ್ಲಿಮರ ಮಧ್ಯೆ ಗಲಭೆಗಳು ನಡೆಯುತ್ತವೆ. ನಮ್ಮ ದೇಶದ ಮುಸ್ಲಿಮರು ಇಂತಹ ಕೆಟ್ಟ ವಿಚಾರಕ್ಕೆ ಹೋಗುವವರಲ್ಲ, ಆದರೆ ಹೊರದೇಶದ ಮುಸಲ್ಮಾನರ ಕುಮ್ಮಕ್ಕು ಇದಕ್ಕೆ ಕಾರಣವಾಗಿದೆ. ಆದರೆ ನಮ್ಮ ಗ್ರಾಮದಲ್ಲಿ ಈ ಭೇದ ಭಾವಗಳಿಗೆ ಅವಕಾಶ ಇಲ್ಲ. ಇರುವ ಒಂದು ಮುಸ್ಲಿಂ ಕುಟುಂಬದವರೊಂದಿಗೆ ಅಣ್ಣ-ತಮ್ಮ, ಮಾವ, ಚಿಕ್ಕಪ್ಪ ಎಂದುಕೊಂಡು ಪ್ರೀತಿಯಿಂದ ಇದ್ದೇವೆ.
-ಬಸವರಾಜ್ ಸ್ವಾಮಿ, ಗ್ರಾಮಸ್ಥ, ಎರಕಲ್
ನಮ್ಮ ಗ್ರಾಮದಲ್ಲಿ ಸುಮಾರು 500 ಮನೆಗಳಿವೆ, ಅದರಲ್ಲಿ ಒಂದು ಮಾತ್ರ ಮುಸ್ಲಿಂ ಮನೆ ಇದೆ. ಅದಕ್ಕಾಗಿ ನಾವೆಲ್ಲರೂ ಸೇರಿ ನಮ್ಮ ಕೈಲಾದಷ್ಟು ಹಣವನ್ನು ಸಂಗ್ರಹಿಸಿ 12 ಲಕ್ಷ ರೂ. ವೆಚ್ಚದಲ್ಲಿ 2008ರಲ್ಲಿ ಮಸೀದಿ ಕಟ್ಟಿಸಿದ್ದೇವೆ. ಎಲ್ಲರೂ ಕೂಡಿಕೊಂಡು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡುತ್ತೇವೆ.
-ತಿಮ್ಮಪ್ಪ, ನಿವಾಸಿ, ಎರಕಲ್ ಗ್ರಾಮ
ಇಲ್ಲಿ ನಮ್ಮದೊಂದೆ ಮುಸ್ಲಿಂ ಮನೆ ಇರುವುದು. ಮೂರ್ನಾಲ್ಕು ತಲೆಮಾರಿನಿಂದ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇವೆ. ನಾವು ಶನಿವಾರ ಬಂದರೆ ಆಂಜನೇಯ ಸ್ವಾಮಿಗೆ ಗುಡಿ, ಮಂಗಳವಾರ ಬಂದದೆ ಮಾರಮ್ಮ ದೇಗುಲಕ್ಕೆ ಹೋಗುತ್ತೇವೆ. ನಮ್ಮಲ್ಲಿ ಯಾವುದೇ ಭೇದಭಾವವಿಲ್ಲ.
-ಮಾಬು ಹುಸೇನ್, ನಿವಾಸಿ, ಎರಕಲ್ ಗ್ರಾಮ