ಬೆಂಗಳೂರು/ದೇವನಹಳ್ಳಿ: ಬೆಂಗಳೂರಿನ ಲಗ್ಗೆರೆಯ ಮುಖ್ಯ ರಸ್ತೆಯ ಜೆ ಸಿ ನಗರದಲ್ಲಿ ಅಪರಿಚಿತ ವ್ಯಕ್ತಿಯ ಶವ (Dead Body Found) ಪತ್ತೆಯಾಗಿದೆ. ಎಂ ಸ್ಯಾಂಡ್ ರಾಶಿಯೊಳಗೆ ಶವವನ್ನು ಕಂಡು ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ. ಸುಮಾರು 35-40 ಆಸುಪಾಸಿನ ವ್ಯಕ್ತಿಯ ಮೃತದೇಹವು ಎಂ ಸ್ಯಾಂಡ್ ನೊಳಗೆ ಇತ್ತು. ಇದನ್ನು ಬೀದಿ ನಾಯಿಯೊಂದು ಪತ್ತೆ ಮಾಡಿದೆ.
ರಸ್ತೆ ಬದಿಯಲ್ಲಿ ಎಂ ಸ್ಯಾಂಡ್ ರಾಶಿಯನ್ನು ಹಾಕಲಾಗಿತ್ತು. ಬೀದಿ ನಾಯಿಯೊಂದು ಕಲ್ಲು ಪುಡಿ ರಾಶಿಯನ್ನು ಕೆದರಲು ಮುಂದಾಗಿದೆ. ಈ ವೇಳೆ ವ್ಯಕ್ತಿಯೊಬ್ಬನ ಮೃತದೇಹವು ಪತ್ತೆಯಾಗಿದೆ. ಕೂಡಲೇ ಸ್ಥಳೀಯರನ್ನು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮನೆ ಕಟ್ಟಿಸಲು ಎಂ ಸ್ಯಾಂಡ್ ತರಿಸಲಾಗಿತ್ತು. ಕಳೆದ ಮೂರು ದಿನಗಳ ಹಿಂದಷ್ಟೇ ಎಂ ಸ್ಯಾಂಡ್ ಲೋಡ್ ಬಂದಿತ್ತು. ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಯಾರೋ ಕೊಲೆ ಮಾಡಿ ಶವವನ್ನು ಎಂ ಸ್ಯಾಂಡ್ ಲೋಡ್‌ನ ಮಧ್ಯ ಭಾಗದಲ್ಲಿಟ್ಟು ಹೋಗಿದ್ದಾರೆ. ಮನೆ ಕಟ್ಟಿಸುತ್ತಿರುವ ಮಾಲೀಕನನ್ನು ಪೊಲೀಸರು ಸಂಪರ್ಕಿಸಿದ್ದು, ಆತ ತಮಿಳುನಾಡಿಗೆ ಹೋಗಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ರಾಜಗೋಪಾಲನಗರ ಪೊಲೀಸರು ಹಾಗೂ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ರವಾಸಿದ್ದಾರೆ. ವ್ಯಕ್ತಿ ಗುರುತು ಪತ್ತೆಯಾಗಿಲ್ಲ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ: Tumkur News: ಕೆರೆಯಲ್ಲಿ ಈಜಲು ಹೋಗಿ ಕೇರಳ ವಿದ್ಯಾರ್ಥಿ ನೀರು ಪಾಲು
ಪಾಳು ಬಿದ್ದ ಮನೆಯಲ್ಲಿ ನವಜಾತ ಶಿಶು ಪತ್ತೆ!
ದೇವನಹಳ್ಳಿ ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿರುವ ಪಾಳು ಬಿದ್ದ ಮನೆಯೊಂದರಲ್ಲಿ ನವಜಾತ ಶಿಶುವೊಂದು ಪತ್ತೆಯಾಗಿದೆ. ಮಂಜುನಾಥ್ ಎಂಬುವವರಿಗೆ ಸೇರಿದ ಪಾಳು ಬಿದ್ದ ಮನೆಯಲ್ಲಿ ಸಾವನ್ನಪಿದ ಸ್ಥಿತಿಯಲ್ಲಿ ನವಜಾತ ಶಿಶು ಪತ್ತೆಯಾಗಿದೆ.
ಒಂದೆರೆಡು ದಿನದ ಹಿಂದೆ ಹುಟ್ಟಿರುವ ಹೆಣ್ಣು ಮಗುವನ್ನು ಬಟ್ಟೆಯೊಂದರಲ್ಲಿ ಸುತ್ತಿ ಬಿಸಾಕಿ ಹೋಗಿದ್ದಾರೆ. ಭಾನುವಾರ ಬೆಳಗ್ಗೆ ಮನೆ ಬಳಿ ಬೀದಿ ನಾಯಿಗಳು ಗುಂಪಾಗಿರುವುದನ್ನು ಕಂಡು ಪರಿಶೀಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಮಕ್ಕಳ ಸಂರಕ್ಷಣಾಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ನಿರ್ಜನ ಪ್ರದೇಶದಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ
ರಾಯಚೂರು ಹೊರವಲಯದ ಯರಮರಸ್ ಬಳಿಯಿರುವ ನಿರ್ಜನ ಪ್ರದೇಶದಲ್ಲಿ ಅಪರಿಚಿತ ಮಹಿಳೆಯ ಶವ (Murder case) ಪತ್ತೆಯಾಗಿದೆ. ಅತ್ಯಾಚಾರವೆಸಗಿ ಬಳಿಕ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.
ಸುಮಾರು 28-30 ವರ್ಷದ ಆಸುಪಾಸಿನ ಮಹಿಳೆ ಅರೆಬೆತ್ತಲೆ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 3-4 ದಿನಗಳ ಹಿಂದೆಯೇ ಘಟನೆ ನಡೆದಿರಬಹುದು ಎನ್ನಲಾಗಿದೆ. ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ