ಬೆಂಗಳೂರು: ಕಾಂಗ್ರೆಸ್ನ 5 ಗ್ಯಾರಂಟಿ ಯೋಜನೆಯನ್ನು (Congress Guarantee) ಪಡೆಯಲು ರಾಜ್ಯದ ಅನೇಕಾನೇಕ ಜನರು ತುದಿಗಾಲಲ್ಲಿ ನಿಂತಿದ್ದಾರೆ. ಅದಕ್ಕಾಗಿ ಅವರೀಗ ತಮ್ಮ ಬಿಪಿಎಲ್, ಎಪಿಎಲ್ ಪಡಿತರ ಚೀಟಿಗಳ (APL l and BPL Card) ಅಪ್ಡೇಟ್ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಇನ್ನೂ ಅನೇಕರು ಎಪಿಎಲ್, ಬಿಪಿಎಲ್ ಕಾರ್ಡ್ಗಳನ್ನು ಹೊಸದಾಗಿ ಪಡೆಯಲು ಕಾಯುತ್ತಿದ್ದಾರೆ. ಆದರೆ ಅವರೆಲ್ಲರಿಗೂ ಈಗ ಸರ್ಕಾರದ ಕ್ರಮದಿಂದ ಬೇಸರವಾಗಿದೆ. ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಪಿಎಲ್, ಬಿಪಿಎಲ್ ಕಾರ್ಡ್ ಯಾವಾಗ ಸಿಗುತ್ತದೆ ಎಂಬ ಬಗ್ಗೆಯೇ ಗ್ಯಾರಂಟಿ ಇಲ್ಲದಂತಾಗಿದೆ..!
ಕಾಂಗ್ರೆಸ್ ಘೋಷಿಸಿದ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿಯನ್ನು ಪಡೆಯುವವರು ಬಿಪಿಎಲ್ ಕಾರ್ಡ್ ಹೊಂದಿರುವವರೇ ಆಗಿರುತ್ತಾರೆ. ಹಾಗೇ, ಮನೆಯೊಡತಿ ಬ್ಯಾಂಕ್ ಅಕೌಂಟ್ಗೆ 2000 ರೂಪಾಯಿ ಹಾಕುವ ಗೃಹಲಕ್ಷ್ಮೀ ಯೋಜನೆಯ ಅನುಕೂಲ ಪಡೆಯಲು ಬಿಪಿಎಲ್, ಎಪಿಎಲ್ ಅಥವಾ ಅಂತ್ಯೋದಯ ಕಾರ್ಡ್ ಇರಬೇಕು. ಈ ಕಾರ್ಡ್ಗಳಲ್ಲಿ ಮನೆ ಯಜಮಾನಿ ಯಾರೆಂದು ನಮೂದಿಸಲಾಗಿರುತ್ತದೆಯೋ, ಅವರ ಖಾತೆಗೇ ಸರ್ಕಾರದ ಹಣ ಹೋಗಲಿದೆ. ಹೀಗಾಗಿ ಜನರು ತಮ್ಮ ಎಪಿಎಲ್, ಬಿಪಿಎಲ್ ಕಾರ್ಡ್ಗಳಲ್ಲಿ ಬದಲಾವಣೆ ಮಾಡಿಕೊಳ್ಳಲು, ಯಾವುದೇ ಪಡಿತರ ಚೀಟಿ ಇಲ್ಲದವರು ಹೇಗಾದರೂ ಅದನ್ನು ಪಡೆಯಲು ತಾಮುಂದು ನಾಮುಂದು ಎನ್ನುತ್ತಿದ್ದಾರೆ.
ಆದರೆ ಈ ಗ್ಯಾರಂಟಿ ಯೋಜನೆಗಾಗಿ ಎಪಿಎಲ್-ಬಿಪಿಎಲ್ ಕಾರ್ಡ್ ಪಡೆಯಲು ಉತ್ಸಾಹದಿಂದ ಕಾಯುತ್ತ ಕುಳಿತಿದ್ದವರಿಗೆ ನಿರಾಸೆಯಾಗಿದೆ. ಬಿಪಿಎಲ್-ಎಪಿಎಲ್ ಪಡಿತರ ಚೀಟಿ ಅರ್ಜಿ ಪ್ರಕ್ರಿಯೆಯೇ ಇನ್ನೂ ಪ್ರಾರಂಭವಾಗಿಲ್ಲ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಜೂನ್ ಮೊದಲವಾರದಿಂದ ಅವಕಾಶ ಕೊಡುವುದಾಗಿ ಆಹಾರ ಇಲಾಖೆ ಹೇಳಿತ್ತು. ಆದರೆ ಈ ಪೋರ್ಟಲ್ ಇನ್ನೂ ತೆರೆದಿಲ್ಲ. ಆಹಾರ ಇಲಾಖೆ ಅಧಿಕಾರಿಗಳ ಬಳಿ ಕೇಳಿದರೆ, ನಮಗಿನ್ನೂ ಸರ್ಕಾರದಿಂದ ಸೂಚನೆ ಬಂದಿಲ್ಲ ಎಂದು ಹೇಳುತ್ತಿದ್ದಾರೆ.
ಇದನ್ನೂ ಓದಿ: Free Bus Service: ಮಹಿಳೆಯರಿಗೆ ‘ಶಕ್ತಿ’ ನೀಡಿದ ಸಿದ್ದರಾಮಯ್ಯ; ಚಾಲನೆಗೊಂಡ ಮೊದಲ ಗ್ಯಾರಂಟಿ!
ಚುನಾವಣಾ ದಿನಾಂಕ ಘೋಷಣೆಯಾದಾಗ, ಚುನಾವಣಾ ನೀತಿ ಸಂಹಿತೆ ಕಾರಣಕ್ಕೆ ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಸಲ್ಲಿಸುವುದನ್ನು ಮತ್ತು ಸಿದ್ಧ ಇರುವ ಕಾರ್ಡ್ಗಳ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಚುನಾವಣೆ ಮುಗಿದು, ಹೊಸ ಸರ್ಕಾರ ರಚನೆಯಾಗಿ ಇಷ್ಟು ದಿನಗಳಾದರೂ ಬಂದ್ ಆಗಿಯೇ ಇದೆ. ವೆಬ್ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಕೆ ವಿಭಾಗ ಲಾಕ್ ಆಗಿದೆ.
ಇನ್ನು ಜನರು ಸರ್ಕಾರದ ಈ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಅನರ್ಹರೂ ಬಿಪಿಎಲ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುತ್ತಾರೆ ಎಂಬ ಕಾರಣಕ್ಕೆ ಹೀಗೆ ವಿಳಂಬ ಮಾಡುತ್ತಿದ್ದಾರೆ. ಆದರೆ ಇದರಿಂದ ಅರ್ಹರಿಗೂ ತೊಂದರೆಯಾಗುತ್ತಿದೆ ಎಂಬ ಅಸಮಾಧಾನ ಕೇಳಿಬರುತ್ತಿದೆ. ಇನ್ನು ವಾರ್ಷಿಕ ಆದಾಯ 1.20 ಲಕ್ಷ ರೂಪಾಯಿಗಿಂತಲೂ ಕಡಿಮೆ ಇದ್ದವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತದೆ. ಅದಕ್ಕಿಂತ ಜಾಸ್ತಿ ಇದ್ದವರು ಎಪಿಎಲ್ ಪಡಿತರ ಚೀಟಿಯನ್ನೇ ಪಡೆಯಬೇಕು.